ಚಾಕೊಲೇಟ್ ಗಣೇಶ ತಯಾರಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ ಯುವತಿ!
ನಾಳೆ ಗಣೇಶ ಹಬ್ಬದ ಪ್ರಯುಕ್ತ ಪರಿಸರ ಸ್ನೇಹಿ ಗಣೇಶನ ಮೂರ್ತಿ ಪೂಜೆಗೆ ಜನಜಾಗೃತಿ ಮೂಡಿಸಲು ಬೆಂಗಳೂರಿನ ಯುವತಿಯೊಬ್ಬರು ಚಾಕಲೇಟ್ ಗಣೇಶ ತಯಾರಿಸಿದ್ದಾರೆ.
ಈ ನಡುವೆ ಜನರು ಪರಿಸರ ಸ್ನೇಹಿ ರೀತಿಯಲ್ಲಿ ಹಬ್ಬಗಳನ್ನು ಆಚರಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ‘ಚಾಕೊಲೇಟ್ ಗಣೇಶ್’ ಕೂಡ ಅಂತಹ ಒಂದು ಚಿಂತನೆಯ ಶಾಲೆಯ ಕೂಸು. ಇದು ಪರಿಸರ ಸ್ನೇಹಪರತೆಯನ್ನು ಉತ್ತೇಜಿಸುತ್ತಿದೆ. ಈ ಹೊಸ ಟ್ರೆಂಡ್ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿದೆ.
ನಗರದಲ್ಲಿ ಮಿಶಿಕ್ರಾಫ್ಟ್ ನಡೆಸುತ್ತಿರುವ ಪ್ರಿಯಾ ಜೈನ್, ಕಳೆದ ಮೂರು ವರ್ಷಗಳಿಂದ ಚಾಕಲೇಟ್ ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜೈನ್, ತಾನು ಪರಿಸರ ಸ್ನೇಹಿ ವಿಗ್ರಹವನ್ನು ತಯಾರಿಸಿದ್ದು ಇದು ಸತತ ಮೂರನೇ ವರ್ಷ ಮತ್ತು ಜನರು ಇದನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಿದರು.
ಚಾಕೊಲೇಟ್ ಗಣೇಶ ತಯಾರಿಕೆಗೆ ಸ್ನೇಹಿತನ ಸಲಹೆ :-
ಜೈನ್ ಅವರಿಗೆ ಚಾಕೊಲೇಟ್ ಗಣೇಶ ಮೂರ್ತಿಗಳನ್ನು ಮಾಡಬಹುದೆಂದು ಸ್ನೇಹಿತ ಸಲಹೆ ನೀಡಿದ್ದರೆಂದು ಜೈನ್ ಹೇಳಿದ್ದಾರೆ. “ಆರಂಭದಲ್ಲಿ ಇದು ಉತ್ತಮ ಆಲೋಚನೆಯಲ್ಲ ಎಂದು ನಾನು ಭಾವಿಸಿದ್ದೆ. ಆದರೆ ನಾನು ಅದನ್ನು ಮಾಡಲು ಪ್ರಾರಂಭಿಸಿದಾಗ, ಜನರು ಅದನ್ನು ನಿಜವಾಗಿಯೂ ಇಷ್ಟಪಟ್ಟಿದ್ದಾರೆ. ಇದು ಒಂದು ವಿಶಿಷ್ಟ ಪರಿಕಲ್ಪನೆಯಾಗಿದೆ. ನಾವು ಶೂನ್ಯ ತ್ಯಾಜ್ಯದೊಂದಿಗೆ ಚಾಕಲೇಟ್ ಗಣೇಶ ತಯಾರಿಸಿ ಸಾಧ್ಯವಾದಷ್ಟು ಪರಿಸರ ಸ್ನೇಹಿಯಾಗಿರಲು ಪ್ರಯತ್ನಿಸುತ್ತಿದ್ದೇವೆ “ಎಂದು ಅವರು ಹೇಳಿದರು.
ಜನರು ಪೂಜೆಗೆ ಈ ಚಾಕಲೇಟ್ ವಿಗ್ರಹಗಳನ್ನು ಬಳಸುತ್ತಾರೆಯೇ ಎಂದು ಸುದ್ದಿಗಾರರು ಕೇಳಿದಾಗ, ಜೈನ್ ಹೌದು ಎಂದು ಹೇಳಿದರು. “ಪಿಒಪಿ ಅಥವಾ ಮಣ್ಣಿನ ಬದಲಾಗಿ ಚಾಕೊಲೇಟ್ ಗಣೇಶವನ್ನು ಬಳಸಬಹುದು. ಎಲ್ಲಾ ಆಚರಣೆಗಳ ನಂತರ ವಿಸರ್ಜನೆಯ ಸಮಯ ಬಂದಾಗ ಚಾಕಲೇಟ್ ಗಣೇಶನನ್ನು ಹಾಲನ್ನು ಬಳಸಿ ಮುಳುಗಿಸಿ ನಂತರ ಅದನ್ನು ಪ್ರಸಾದದಂತೆ ವಿತರಿಸಿ” ಎಂದು ಜೈನ್ ಹೇಳಿದರು.
ಆದಾಗ್ಯೂ ಜೈನ್ ಅವರಿಗೆ ‘ನೀವು ದೇವರ ವಿಗ್ರಹವನ್ನು ಹೇಗೆ ಸೇವಿಸುತ್ತೀರಿ?’ ಎಂದು ಜನ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಜೈನ್ ಗಣೇಶ್ ಮೂರ್ತಿಗಳು ವಿಸರ್ಜನೆ ಬಳಿಕ ಏನಾಗುತ್ತವೆ? ಬಹುತೇಕ ಮೂರ್ತಿಗಳು ಪರಿಸರವನ್ನು ಹಾಳು ಮಾಡುತ್ತವೆ. ಜೊತೆಗೆ ನದಿ ದಂಡೆಗಳಲ್ಲಿ ತೇಲಿನಿಂತು ವಿಕಾರಗೊಳಿಸು ಬದಲಿಗೆ ಇದು ಒಳ್ಳೆಯದು ಎಂದು ನನಗನಿಸುತ್ತದೆ ಎಂದಿದ್ದಾರೆ. ವಿಸರ್ಜನೆ ಬಳಿಕ ಇದನ್ನು ಚಾಕಲೇಟ್ ನಂತೆ ಸೇವಿಸಬಹುದು ಎಂದು ಅವರು ಹೇಳಿದರು.