ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಸಿ. ಜಯರಾಮ್ ಇನ್ನಿಲ್ಲ..!
ಬಾರದ ಊರಿಗೆ ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಸಿ. ಜಯರಾಮ್ ಪಯಣ ಮಾಡಿದ್ದಾರೆ. ಹೌದು… ಶಂಕರ್ ನಾಗ್ ನಟನೆಯ ‘ಆಟೋ ರಾಜ’, ಅನಂತ್ ನಾಗ್ ಅಭಿನಯದ ‘ನಾ ನಿನ್ನ ಬಿಡಲಾರೆ’, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನಟಿಸಿದ್ದ ‘ಗಲಾಟೆ ಸಂಸಾರ’ ಶ್ರೀನಾಥ್-ಆರತಿ ಜೋಡಿಯ ‘ಪಾವನ ಗಂಗಾ’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಸಿ. ಜಯರಾಮ್ ವಿಧಿವಶರಾಗಿದ್ಧಾರೆ.
ಕನ್ನಡಿಗರಿಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಹಿರಿಯ ನಿರ್ಮಾಪಕ ಸಿ. ಜಯರಾಮ್ ಅವರು ಸೆ.8ರಂದು ಬೆಂಗಳೂರಿನಲ್ಲಿ ಕೊನೆಯುಸಿರು ಎಳೆದಿದ್ದು, ಗುರುವಾರ (ಸೆ.9) ಮಧ್ಯಾಹ್ನ 12 ಗಂಟೆಗೆ ಸುಮ್ಮನಹಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಸ್ಯಾಂಡಲ್ವುಡ್ನಲ್ಲಿ ಖ್ಯಾತ ನಿರ್ಮಾಪಕರಾಗಿ ಸಿ. ಜಯರಾಮ್ ಗುರುತಿಸಿಕೊಂಡಿದ್ದರು. ಅನೇಕ ಸ್ಟಾರ್ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿದ್ದರು.
ಸಿ. ಜಯರಾಮ್ ನಿಧನಕ್ಕೆ ಸ್ಯಾಂಟಲ್ ವುಡ್ ಕಂಬನಿ ಮಿಡಿದಿದೆ. ಗೌರಿ-ಗಣೇಶ್ ಹಬ್ಬದ ಸಂದರ್ಭದಲ್ಲಿಯೇ ಈ ಕಹಿ ಸುದ್ದಿ ಕೇಳಿಬಂದಿರುವುದು ನೋವಿನ ಸಂಗತಿ. ಸಿ. ಜಯರಾಮ್ ಅವರ ಪುತ್ರ ‘ಮಿಲನ’ ಪ್ರಕಾಶ್ ಕೂಡ ಚಂದನವನದಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ಪುನೀತ್ ನಟನೆಯ ‘ಮಿಲನ’, ದರ್ಶನ್ ಅಭಿನಯದ ‘ತಾರಕ್’ ಮುಂತಾದ ಸಿನಿಮಾಗಳಿಗೆ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ.