ಟಿ-20 ವಿಶ್ವಕಪ್‌ಗೆ ಧೋನಿಯನ್ನು ಆಯ್ಕೆ ಮಾಡಿರುವುದು ಒಳ್ಳೆ ನಿರ್ಧಾರ: ಕಪಿಲ್ ದೇವ್

ಟೀಮ್ ಇಂಡಿಯಾದ ವಿಶ್ವಕಪ್‌ ವಿಜೇತ ನಾಯಕ ಕಪಿಲ್ ದೇವ್ ಅವರು ಟಿ20 ವಿಶ್ವಕಪ್‌ ವೇಳೆ ಟೀಮ್ ಇಂಡಿಯಾಕ್ಕೆ ಎಂಎಸ್ ಧೋನಿ ಅವರನ್ನು ಮಾರ್ಗದರ್ಶಕರನ್ನಾಗಿ ಆರಿಸಿರುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ವೇಳೆ ಭಾರತೀಯ ತಂಡದ ಜೊತೆಗೆ ಧೋನಿ ಕೂಡ ಇರಲಿದ್ದಾರೆ.

ಇತ್ತೀಚೆಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇತ್ತೀಚೆಗೆ ಮುಂಬರಲಿರುವ ಟಿ20 ವಿಶ್ವಕಪ್‌ಗಾಗಿ ಭಾರತೀಯ ತಂಡ ಪ್ರಕಟಿಸಿತ್ತು. ಇದೇ ವೇಳೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮೆಂಟರ್ ಆಗಿ ತಂಡದ ಜೊತೆಗಿರಲಿದ್ದಾರೆ ಎಂದು ಘೋಷಿಸಿತ್ತು.

ಭಾರತೀಯ ತಂಡಕ್ಕೆ ಧೋನಿ ಕಮ್‌ಬ್ಯಾಕ್ ಮಾಡಿರುವ ಬಗ್ಗೆ ಮಾತನಾಡಿರುವ ಕಪಿಲ್, ಕ್ರಿಕೆಟರ್ ಒಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕನಿಷ್ಠ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ಸಾಮಾನ್ಯವಾಗಿ ತಂಡಕ್ಕೆ ಮತ್ತೆ ಕೋಚಿಂಗ್ ಅಥವಾ ಬೆಂಬಲ ಸಿಬ್ಬಂದಿಯಾಗಿ ಸೇರಿಕೊಳ್ಳುತ್ತಾರೆ. ಆದರೆ ಧೋನಿಯದ್ದು ವಿಶೇಷ ಪ್ರಕರಣವಾಗಿದೆ ಎಂದಿದ್ದಾರೆ.

ಕಳೆದ ವರ್ಷ ಅಂದರೆ 2020ರಲ್ಲಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆಗಸ್ಟ್ 15ರಂದು ಧೋನಿ ಮತ್ತು ಟೀಮ್ ಇಂಡಿಯಾದ ಆಲ್ ರೌಂಡರ್ ಆಗಿದ್ದ ಸುರೇಶ್ ರೈನಾ ಇಬ್ಬರೂ ಏಕಕಾಲಕ್ಕೆ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಈಗ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡುತ್ತಿದ್ದಾರೆ.

“ವಿಶ್ವಕಪ್‌ಗೆ ಮೆಂಟರ್ ಆಗಿ ಭಾರತೀಯ ತಂಡಕ್ಕೆ ಆರಿಸಿರುವುದು ಒಳ್ಳೆಯ ನಿರ್ಧಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕ್ರಿಕೆಟರ್ ಕನಿಷ್ಠ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಕೋಚಿಂಗ್ ವಿಭಾಗಕ್ಕೆ ಬರಬೇಕೆಂದು ನಾನು ಹೇಳುತ್ತಿರುತ್ತೇನೆ. ಆದರೆ ಧೋನಿ ವಿಚಾರದಲ್ಲಿ ಇದು ವಿಶೇಷ ಪ್ರಕರಣವಾಗಿದೆ. ವಿಶ್ವಕಪ್‌ ಸಮೀಪದಲ್ಲಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಲ್ಲೂ ಈ ಹೊತ್ತಿನಲ್ಲಿ ಎಂದಿನ ಕೋಚ್ ರವಿ ಶಾಸ್ತ್ರಿ ಕೂಡ ಕೋವಿಡ್‌ ಸೋಂಕಿಗೆ ತುತ್ತಾಗಿರುವುದರಿಂದ ಇದೊಂದು ಸ್ವಾಗತಾರ್ಹ ನಿರ್ಧಾರ,” ಎಂದು ಕಪಿಲ್ ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *