ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಮೀನುಗಳ ಪೂರೈಕೆಗೆ ಒಡಿಶಾ ಸರ್ಕಾರ ನಿರ್ಧಾರ

ಮಕ್ಕಳು, ಗರ್ಭಿಣಿಯರು, ಶುಶ್ರೂಷಾ ಮಹಿಳೆಯರು (ಬಾಣಂತಿಯರು) ಮತ್ತು ಹದಿಹರೆಯದ ಬಾಲಕಿಯರಿಗೆ ಅಗತ್ಯವಿರುಷ್ಟು ಪೌಷ್ಟಿಕಾಂಶ ಪೂರೈಕೆ ಮಾಡಲು ಒಡಿಶಾ ನ್ಯೂಟ್ರಿಷನ್ ಕ್ರಿಯಾ ಯೋಜನೆ ಕಾರ್ಯಕ್ರಮದಲ್ಲಿ ಮೀನು ಮತ್ತು ಮೀನು ಆಧಾರಿತ ಉತ್ಪನ್ನಗಳನ್ನು ಒದಗಿಸುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಒಡಿಶಾ ಸರ್ಕಾರ ಮುಂದಾಗಿದೆ.

ಮಯೂರ್ಭಂಜ್‌ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವರ್ಲ್ಡ್‌ ಫಿಶ್‌ ಎಂಬ ಎನ್‌ಜಿಓ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಒಡಿಶಾ ಸರ್ಕಾರ ಮತ್ತು ವರ್ಲ್ಡ್‌ ಫಿಶ್‌ ನಡುವಿನ ತಾಂತ್ರಿಕ ಸಹಯೋಗವು ಐದು ವರ್ಷಗಳವರೆಗೆ ನಡೆಯುತ್ತದೆ ಎಂದು ಅಭಿವೃದ್ಧಿ ಆಯುಕ್ತ ಸುರೇಶ್ ಮೊಹಾಪಾತ್ರ ತಿಳಿಸಿದ್ದಾರೆ.

ಇಂಡಿಯನ್ ಆಂಚೊವಿ, ಇಂಡಿಯನ್ ಸಾರ್ಡಿನ್ ಮತ್ತು ಲೆಸ್ಸರ್ ಸಾರ್ಡೀನ್ ನಂತಹ ಸಣ್ಣ ಮೀನುಗಳನ್ನು ಒಣಗಿದ ನಂತರ ಪುಡಿ ಮಾಡಿ ಪೌಡರ್‌ ರೂಪದಲ್ಲಿ ಅಥವಾ ಪ್ಯಾಕೆಟ್‌ಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

2016 ರಲ್ಲಿ ಪ್ರಾರಂಭಿಸಲಾದ ಒಡಿಶಾ ನ್ಯೂಟ್ರಿಷನ್ ಕ್ರಿಯಾ ಯೋಜನೆ (ಒಎನ್‌ಎಪಿ), ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಬುಡಕಟ್ಟು ಜಿಲ್ಲೆಗಳನ್ನು ತಲುಪಲು ವಿಶೇಷ ಗಮನವನ್ನು ನೀಡುತ್ತದೆ.

ಇದನ್ನೂ ಓದಿ: ಅಂಬೇಡ್ಕರ್ ಮೊಮ್ಮಗ ರಾಜರತ್ನ ಅಂಬೇಡ್ಕರ್ ಪೇಜ್‌ ಡಿಲೀಟ್ ಮಾಡಲು ಫೇಸ್‌ಬುಕ್‌ ಯತ್ನ!

ಪ್ರಸ್ತುತ, ಒಡಿಶಾ ಸರ್ಕಾರವು ಪೂರಕ ಪೌಷ್ಠಿಕಾಂಶ ಕಾರ್ಯಕ್ರಮದಡಿ ಮಕ್ಕಳು, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ಟೇಕ್ ಹೋಮ್ ಪಡಿತರ ಮತ್ತು ಬಿಸಿ ಬೇಯಿಸಿದ ಆಹಾರವನ್ನು ನೀಡುತ್ತಿದೆ. ಟೇಕ್ ಹೋಮ್ ಪಡಿತರ ಅಡಿಯಲ್ಲಿ, ಚತುವಾ (ನೆಲಗಡಲೆ ಮತ್ತು ಸಕ್ಕರೆಯ ಪುಡಿ), ಸುಜಿ ಹಲ್ವಾ, ಮೆಕ್ಕೆಜೋಳದ ಹಲ್ವಾ, ರಾಗಿ ಹಲ್ವಾ, ಬೆಲ್ಲದ ಲಡ್ಡೂ, ಬಿಸಾನ್ ಲಡ್ಡೂ ನೀಡಲಾಗುತ್ತದೆ. ಇದರ ಹೊರತಾಗಿ ಪ್ರತಿ ವಾರ 3-4 ಬೇಯಿಸಿದ ಮೊಟ್ಟೆಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಬಾಳೆಹಣ್ಣು, ಪಪ್ಪಾಯಿ, ಪೇರಲ, ಅನಾನಸ್, ಕಲ್ಲಂಗಡಿ, ಮಾವು, ಕಿತ್ತಳೆ ಮತ್ತು ಸ್ಥಳೀಯ ಹಣ್ಣುಗಳನ್ನು ಸಹ ಮಕ್ಕಳಿಗೆ ನೀಡಲಾಗುತ್ತದೆ ಎಂದು ಮೊಹೊಪಾತ್ರ ತಿಳಿಸಿದ್ದಾರೆ.

ಆದರೆ, ಪೌಷ್ಠಿಕಾಂಶದ ಕಾರ್ಯಕ್ರಮದ ಹೊರತಾಗಿಯೂ, ಒಡಿಶಾದ ಬುಡಕಟ್ಟು ಜನರು ಹೆಚ್ಚಿರುವ ಜಿಲ್ಲೆಗಳ 47% ಮಕ್ಕಳಲ್ಲಿ ಬೆಳವಳಿಗೆ ಕುಂಠಿತವಾಗಿದೆ. ಆ ಅಂಕಿ ಅಂಶವು ರಾಷ್ಟ್ರೀಯ ಸರಾಸರಿ 38% ಗಿಂತ ಹೆಚ್ಚಾಗಿದೆ. ಹಾಗಾಗಿ, ಪ್ರಾಣಿ ಮೂಲದ ಆಹಾರಗಳಲ್ಲಿ ಪೌಷ್ಠಿಕಾಂಶ ಹೆಚ್ಚಾಗಿದ್ದು, ಮೀನುಗಳು, ವಿಶೇಷವಾಗಿ ಸಣ್ಣ ಮೀನುಗಳನ್ನು ಸಂಪೂರ್ಣವಾಗಿ ತಿನ್ನುವುದರಿಂದ ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಳಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮೆದುಳಿನ ಬೆಳವಣಿಗೆ ಮತ್ತು ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತವೆ ಎಂದು ಅಧ್ಯಯನಗಳು ಹೇಳಿವೆ. ವಿಟಮಿನ್-ಬಿ 12 ಆರೋಗ್ಯಕರ ಕೆಂಪು ರಕ್ತ ಕಣಗಳಿಗೆ ಕಾರಣವಾಗುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ಮೀನುಗಳಲ್ಲಿನ ಕಬ್ಬಿಣ ಮತ್ತು ಸತುವಿನ ಅಂಶವು ದೇಶದಲ್ಲಿ ಕಬ್ಬಿಣಾಂಶದ ಕೊರತೆಯನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.

ಪ್ರಾಯೋಗಿಕ ಯೋಜನೆಯು ಮೀನು ಆಧಾರಿತ ಉತ್ಪನ್ನಗಳನ್ನು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು, ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಬುಡಕಟ್ಟು ಹಳ್ಳಿಗಳ ಮಕ್ಕಳ ಆಹಾರಕ್ರಮದಲ್ಲಿ ಸೇರಿಸಲಾಗುತ್ತದೆ. ಮೀನಿನ ಪುಡಿ ಮತ್ತು ಒಣಗಿದ ಮೀನುಗಳನ್ನು ಕೊಚ್ಚಿನ್‌ನ ಸಿಐಎಫ್‌ಟಿಯಿಂದ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಬಿಹಾರ ವಿಧಾನಸಭೆಯಲ್ಲಿ 25% ಶಾಸಕರು ಮೇಲ್ವರ್ಗದವರು; ಬಿಜೆಪಿ ಶಾಸಕರೇ ಹೆಚ್ಚು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights