ಗುಜರಾತ್ ಸಿಎಂ ವಿಜಯ್‌ ರೂಪಾನಿ ರಾಜೀನಾಮೆ; ಬಿಜೆಪಿ ಬಿಕ್ಕಟ್ಟಿನಲ್ಲಿ ಮತ್ತೊಬ್ಬ ಸಿಎಂ ಬದಲಾವಣೆ!

ಅನಿರೀಕ್ಷಿತ ಬೆಳವಣಿಗೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ (ಸೆ.11) ರಂದು ರಾಜೀನಾಮೆ ನೀಡಿದ್ದಾರೆ. ಹೊಸ ನಾಯಕತ್ವವು ರಾಜ್ಯವನ್ನು ಅಭಿವೃದ್ಧಿಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಇಷ್ಟು ದಿನ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಎಂದು ಅವರು ಹೇಳಿದ್ದಾರೆ.

ಪಕ್ಷವು ನನಗೆ ವಹಿಸುವ ಯಾವುದೇ ಜವಾಬ್ದಾರಿಯನ್ನು ಕಾರ್ಯನಿರ್ವಹಿಸಲು ನಾನು ಸಿದ್ಧ. ನನ್ನ ಅಧಿಕಾರಾವಧಿಯಲ್ಲಿ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಸಾಧಿಸಲು ನನಗೆ ಅವಕಾಶ ಸಿಕ್ಕಿತು ಎಂದು ರುಪಾನಿ ಹೇಳಿದ್ದಾರೆ.

ರೂಪಾನಿಯ ನಿರ್ಗಮನದೊಂದಿಗೆ ಕಳೆದ ಕೆಲವು ತಿಂಗಳಲ್ಲಿ ಬಿಜೆಪಿಯಲ್ಲಿ ರಾಜ್ಯ ನಾಯಕತ್ವ ಬದಲಾವಣೆಯ ಮೂರನೇ ಬದಲಾವಣೆಯಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ಕೇಸರಿ ಪಕ್ಷವು ಕರ್ನಾಟಕ ಮತ್ತು ಉತ್ತರಾಖಂಡದ ಸಿಎಂಗಳನ್ನು ಬದಲಾಯಿಸಿದೆ.

ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದೆ. ಈ ವೇಳೆ, ರೂಪಾನಿಯನ್ನು ವಜಾಗೊಳಿಸುವುದು ನರ ಆಕ್ರೋಶಕ್ಕೆ ತೇಪೆಸಾರಿಸುವ ಪ್ರಯತ್ನವಾಗಿದೆ ಎಂದು ಹೇಳಲಾಗಿದೆ. ರಾಜೀನಾಮೆ ನೀಡಿದ ಸಿಎಂ ಕೊರೊನಾ ಎರಡನೇ ಅಲೆಯನ್ನು ಎದುರಿಸುವಲ್ಲಿ ವಿಫಲರಾದರು ಎಂದು ಟೀಕಿಸಲಾಗಿತ್ತು. ಅಲ್ಲದೆ, ಅನೇಕ ಪಕ್ಷದ ಕಾರ್ಯಕರ್ತರು ಕೂಡ ಅವರ ಬಗ್ಗೆ ಅತೃಪ್ತರಾಗಿದ್ದಾರೆ ಎಂದು ಹೇಳಲಾಗಿದೆ. ಇದು ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್ ಪಾಟೀಲ್ ಮತ್ತು ಅವರ ನಡುವಿನ ಆಂತರಿಕ ವಿವಾದಕ್ಕೂ ಕಾರಣವಾಗಿತ್ತು.

ಪಾಟೀಲ್ ಅವರು ಮಾರ್ಚ್ ನಲ್ಲಿ ನಡೆದ ಬ್ಲಾಕ್ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಪಕ್ಷದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಋಣಾತ್ಮಕ ಚಿತ್ರಣದ ಹೊರತಾಗಿಯೂ ಬಿಜೆಪಿ 31 ಜಿಲ್ಲಾ ಪಂಚಾಯಿತಿಗಳು, 81 ರಲ್ಲಿ 71 ಪುರಸಭೆಗಳು ಮತ್ತು 231 ತಾಲೂಕು ಪಂಚಾಯಿತಿಗಳನ್ನು ಗೆದ್ದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು 8,474 ಸ್ಥಾನಗಳಲ್ಲಿ 6,110 ಸ್ಥಾನಗಳನ್ನು ಗೆದ್ದಿತು. ಇದರೊಂದಿಗೆ ಸಾಂಸ್ಥಿಕ ಮಟ್ಟದಲ್ಲಿ ಪಾಟೀಲ್ ನಾಯಕತ್ವದ ಪ್ರಭಾವವನ್ನು ಹೆಚ್ಚಿಸಿತು.

ಮೂಲಗಳು ಹೇಳುವಂತೆ ಪಾಟೀಲ್ ಇತ್ತೀಚೆಗೆ ದೆಹಲಿಯಲ್ಲಿ ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಿದ್ದು, 2022 ರ ರಾಜ್ಯ ಚುನಾವಣೆಗೆ ಪಕ್ಷವು ರೂಪಾನಿಅವರ ನಾಯಕತ್ವದಲ್ಲಿ ಕಣಕ್ಕಿಳಿಯಬಾರದು. ಏಕೆಂದರೆ ಸಿಎಂ ಸೌಮ್ಯ ಧೋರಣೆ ಹೊಂದಿದ್ದು ನಿರ್ಣಾಯಕ ನೆಲೆಯು ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಶಾಸಕಾಂಗ ಪಕ್ಷವು ಭಾನುವಾರ ಸಭೆ ಸೇರಲಿದೆ. ರೂಪಾನಿಗೆ ಬದಲಿಯಾಗಿ ಹಲವಾರು ಹೆಸರುಗಳಿವೆ, ಅವುಗಳಲ್ಲಿ ಪಾಟೀಲ್, ನಿತಿನ್ ಪಟೇಲ್ ಮತ್ತು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಇದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆಗೆ ತಾಲಿಬಾನ್ ವಿಷಯಗಳನ್ನು ಬಿಜೆಪಿ‌ ಬಳಸಿಕೊಳ್ಳುತ್ತದೆ: ಕಪಿಲ್ ಸಿಬಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.