FACT CHECK | ದಾಳಿಗೊಳಗಾದ ಪಾಕ್‌ನ ರಾವಲ್ಪಿಂಡಿ ಕ್ರೀಡಾಂಗಣ ಎಂದು AI ಫೋಟೊ ಹಂಚಿಕೆ

ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಆಪರೇಷನ್ ಸಿಂಧೂರ್ ಅಡಿಯಲ್ಲಿ ನಾಶಪಡಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ, ದಾಳಿಯಿಂದ ಹಾನಿಗೊಳಗಾದ ಕ್ರೀಡಾಂಗಣವನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಡ್ರೋನ್ ದಾಳಿಯ ನಂತರ ರಾವಲ್ಪಿಂಡಿ ಕ್ರೀಡಾಂಗಣದ ಫೋಟೋ ಇದು…!!!’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಭಾರತ-ಪಾಕಿಸ್ತಾನ ಸಂಘರ್ಷದ ಮಧ್ಯೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯಕ್ಕೆ ಕೆಲವು ಗಂಟೆಗಳ ಮೊದಲು ರಾವಲ್ಪಿಂಡಿ ಕ್ರೀಡಾಂಗಣದ ಬಳಿ ಡ್ರೋನ್ ದಾಳಿ ನಡೆದಿದೆ ಎಂದು ಹಿಂದೂಸ್ತಾನ್ ಮೇ 8 ರಂದು ವರದಿ ಮಾಡಿತ್ತು. ಇದರಿಂದಾಗಿ ಪಿಎಸ್ಎಲ್ ಕರಾಚಿ ಕಿಂಗ್ಸ್ vs ಪೇಶಾವರ್ ಝಲ್ಮಿ ಪಂದ್ಯ ರದ್ದಾಯಿತು ಎಂದು ಉಲ್ಲೇಖಿಸಿದೆ.

ದಾಳಿಯ ನಂತರ ರಾವಲ್ಪಿಂಡಿ ಕ್ರೀಡಾಂಗಣಕ್ಕೆ ಉಂಟಾದ ಹಾನಿಯ ದೃಶ್ಯಗಳನ್ನು ಸಿಎನ್‌ಎನ್ವರದಿಯಲ್ಲಿ ಸಿಕ್ಕಿದೆ. ಆದಾಗ್ಯೂ, ವೈರಲ್ ಚಿತ್ರದಲ್ಲಿ ತೋರಿಸಿರುವಂತಹ ಯಾವುದೇ ದೃಶ್ಯಗಳನ್ನು ಇದು ಹೊಂದಿಲ್ಲ.

ಮತ್ತಷ್ಟು ಮಾಹಿತಿಗಾಗಿ, ವೈರಲ್ ಚಿತ್ರವನ್ನು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದ ದೃಶ್ಯಗಳೊಂದಿಗೆ ಹೋಲಿಸಿದ್ದೇವೆ. ಆಗ ಈ ಎರಡೂ ಫೋಟೋ ವಿಭಿನ್ನವಾಗಿವೆ ಎಂದು ಕಂಡುಕೊಂಡಿದ್ದೇವೆ. ವೈರಲ್ ಆಗಿರುವ ಚಿತ್ರದಲ್ಲಿ ಕ್ರಿಕೆಟ್ ಕ್ರೀಡಾಂಗಣದ ಮೈದಾನವು ತುಂಬಾ ಚಿಕ್ಕದಾಗಿ ಕಾಣುತ್ತದೆ. ಅದೇ ನೈಜ್ಯ ಕ್ರೀಡಾಂಗಣ ದೊಡ್ಡದಾಗಿದೆ. ಅಲ್ಲದೆ ವೈರಲ್ ಫೋಟೋದಲ್ಲಿ ವೀಕ್ಷಕ ಗ್ಯಾಲರಿ ಎರಡು ಅಂತಸ್ತಿನಿಂದ ಕೂಡಿದೆ. ಆದರೆ ನಿಜವಾದ ಮೈದಾನ ಒಂದು ಅಂತಸ್ತಿನಿಂದ ಕೂಡಿದೆ.

ಈ ವೈರಲ್ ಫೋಟೋ AI ನಿಂದ ರಚಿತವಾಗಿರಬಹುದು ಎಂಬ ಅನುಮಾನದಿಂದ, AI ಡಿಟೆಕ್ಟರ್ ಪರಿಕರಗಳಾದ ಹೈವ್ ಮಾಡರೇಶನ್ ಮತ್ತು Sight Engine ಪರಿಶೀಲಿಸಿದ್ದೇವೆ. ಈ ಎರಡೂ ಪರಿಕರಗಳು ವೈರಲ್ ಫೋಟೋ AI ನಿಂದ ರಚಿತವಾಗಿದೆ ಎಂದು ದೃಢಪಡಿಸಿವೆ. ಹೈವ್ ಮಾಡರೇಶನ್ ಪ್ರಕಾರ, ಇದು AI- ರಚಿತವಾಗುವ ಸಾಧ್ಯತೆ ಶೇ. 98.1 ರಷ್ಟು ಇದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಡ್ರೋನ್ ದಾಳಿಯಿಂದ ರಾವಲ್ಪಿಂಡಿ ಕ್ರೀಡಾಂಗಣ ಚಿತ್ರ ಎಂದು ಎಐ ನಿಂದ ರಚಿಸಿದ ಫೋಟೊವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕಿಸ್ತಾನದ ಮೇಲಿನ ದಾಳಿಗೆ ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದ್ರಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights