ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಭೀತಿ : ವಿದ್ಯಾರ್ಥಿ ಆತ್ಮಹತ್ಯೆ!
ತಮಿಳುನಾಡಿನಲ್ಲಿ ಮತ್ತೊಬ್ಬಳು ನೀಟ್ ಆಕಾಂಕ್ಷಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕನಿಮೋಳಿ ಮೃತ ವಿದ್ಯಾರ್ಥಿ. ಕನಿಮೊಳಿ 12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದಳು. ಆದರೆ ನೀಟ್ ಪರೀಕ್ಷೆಯ ಬಗ್ಗೆ ಖಿನ್ನತೆಗೆ ಒಳಗಾಗಿದ್ದಳು. ಇದೇ ಆಲೋಚನೆಯಲ್ಲಿ ಮನನೊಂದು ಸೋಮವಾರ (ಸೆ.13) ಬೆಳಿಗ್ಗೆ ಚಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದುರಾದೃಷ್ಟ ಅಂದರೆ ಈ ಘಟನೆ ನಡೆದ ದಿನವೇ ತಮಿಳುನಾಡು ವಿಧಾನಸಭೆಯು ಸೋಮವಾರ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಯನ್ನು (NEET) ತಿರಸ್ಕರಿಸುವ ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು 12 ನೇ ತರಗತಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಮಸೂದೆಯನ್ನು ಅಂಗೀಕರಿಸಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (M K Stalin) ಮಸೂದೆಯನ್ನು ಮಂಡಿಸಿದರು ಮತ್ತು ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಮತ್ತು ಅದರ ಮಿತ್ರ ಪಕ್ಷ ಪಿಎಂಕೆ ಸೇರಿದಂತೆ ಎಲ್ಲಾ ಪಕ್ಷಗಳು, ಕಾಂಗ್ರೆಸ್ ನಂತಹ ಇತರ ಪಕ್ಷಗಳು ಮಸೂದೆಯನ್ನು ಬೆಂಬಲಿಸಿದ್ದಾರೆ.
ಡಿಎಂಕೆ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ ನೀಟ್ ರದ್ದಾಗುತ್ತದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದರು ಅದು ಆಗಲಿಲ್ಲ. ಸರ್ಕಾರವು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿ ಇದರಿಂದಾಗಿ ವಿದ್ಯಾರ್ಥಿಗಳು, ಪೋಷಕರು ಕಂಗಾಲಾಗಿದ್ದರು. ಸ್ಟಾಲಿನ್ ಮತ್ತು ಇತರ ಡಿಎಂಕೆ ಮಂತ್ರಿಗಳು ನೀಟ್ ಅನ್ನು ರದ್ದುಗೊಳಿಸಲಾಗುವುದು ಎಂದು ನಿರಂತರವಾಗಿ ಸುಳ್ಳು ಪ್ರಚಾರ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲು 100 ಪ್ರತಿಶತ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಇದು ಧನುಷ್ ಮತ್ತು ಇನ್ನೊಬ್ಬ ನೀಟ್ ಆಕಾಂಕ್ಷಿ ಅನಿತಾ ಸಾವಿಗೆ ಕಾರಣವಾಯಿತು.
ಈಗ ಇದೇ ಕನಸು ಕಂಡಿದ್ದ ವಿದ್ಯಾರ್ಥಿನಿ ಕನಿಮೋಳಿ ಕೂಡ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಕನಿಮೋಳಿ ಕುಟುಂಬದವರು ಹೇಳುವ ಪ್ರಕಾರ ಕನಿಮೋಳಿ ಅದ್ಭುತ ವಿದ್ಯಾರ್ಥಿನಿ ಆದರೆ ನೀಟ್ ಬಗ್ಗೆ ಚಿಂತಿತಳಾಗಿದ್ದಳು. ಸಾವಿನ ಕುರಿತು ವಿಕ್ರಮಂಗಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.