ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಒತ್ತಾಯ; ರಾಜ್ಯಾದ್ಯಂತ ಸೈಕಲ್‌ ಜಾಥಾ ಮಾಡುತ್ತಿರುವ ಕಿರಣ್‌!

“ದೇಶದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಣ್ಣು ಮಕ್ಕಳ ಮೇಲೆ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಕಳೆದ ವರ್ಷ 38 ರಿಂದ 36 ಸಾವಿರ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಆದರೆ, ಶಿಕ್ಷೆಯಾಗುವುದು ಮಾತ್ರ ಅದರಲ್ಲಿ ನಾಲ್ಕನೇ ಒಂದು ಭಾಗ..” ಹೀಗೆ ಮಾತನಾಡುತ್ತಾ ಸಾಗಿದ್ದು, ಅತ್ಯಾಚಾರ ನಿರ್ಮೂಲನೆ ಮತ್ತು ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಅಖಂಡ ಕರ್ನಾಟಕ ಸೈಕ್ಲಿಂಗ್ ಜಾಥಾ ನಡೆಸುತ್ತಿರುವ ವಿದ್ಯಾರ್ಥಿ ಕಿರಣ್ ವಿ.

ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿ ಕಿರಣ್, ರಾಜ್ಯದ 31 ಜಿಲ್ಲೆಗಳಲ್ಲಿಯೂ ಸೈಕಲ್ ಜಾಥಾ ನಡೆಸಿ, ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಬೇಕು. ಅತ್ಯಾಚಾರ ನಿರ್ಮೂಲನೆಯಾಗಬೇಕು ಎಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸುತ್ತಿದ್ದಾರೆ.

ಕೆ.ಆರ್.ಸರ್ಕಲ್‌ನ ಸರ್ಕಾರಿ ಆಟ್ಸ್ ಕಾಲೇಜಿನಲ್ಲಿ ಪ್ರಥಮ ಬಿ.ಎ ವಿದ್ಯಾರ್ಥಿಯಾಗಿರುವ ಕಿರಣ್, ಕಳೆದ ಆಗಸ್ಟ್ 28ರ ಭಾನುವಾರ ಈ ಜಾಥಾ ಶುರು ಮಾಡಿದ್ದು, ಇಂದಿಗೆ 28 ದಿನಗಳು ಕಳೆದಿವೆ. ಈವರೆಗೆ 13 ಜಿಲ್ಲೆಗಳಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬಿಜಾಪುರ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳು ಮುಗಿದಿವೆ. ಇನ್ನು 18 ಜಿಲ್ಲೆಗಳು ಬಾಕಿ ಇವೆ. 3,800 ಕಿಲೋಮೀಟರ್ ಜಾಥಾ ನಡೆಸಲು ನಿರ್ಧರಿಸಿರುವ ಕಿರಣ್, ಇಲ್ಲಿಯವರೆಗೆ 1,600 ಕಿ.ಮೀ ದೂರ ಕ್ರಮಿಸಿದ್ದಾರೆ.

ಇದನ್ನೂ ಓದಿ: Breaking News: ಪಂಜಾಬ್ ಸಿಎಂ ಅಮರೀಂದರ್‌ ಸಿಂಗ್‌ ರಾಜೀನಾಮೆ!

“ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಅತ್ಯಾಚಾರ ನಡೆದರೂ ಶಿಕ್ಷೆ ಮಾತ್ರ ಪ್ರಕಟವಾಗುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳು ಕಣ್ಣು ಮುಚ್ಚಿದರೂ, ಸಾಮಾಜಿಕ ಮಾಧ್ಯಮಗಳು, ಅಂತರ್ಜಾಲ, ವೆಬ್‌ಸೈಟ್‌ಗಳು ಮಾಹಿತಿ ನೀಡುತ್ತವೆ. ಹೀಗಾಗಿ ಒಂದೆರಡು ತಿಂಗಳು ಈ ಬಗ್ಗೆ ರಿಸರ್ಚ್ ಮಾಡಿದೆ. ಕಳೆದ 2019-2020ರಲ್ಲಿ 38 ರಿಂದ 36 ಸಾವಿರ ಅತ್ಯಾಚಾರ ಪ್ರಕರಣಗಳು ನಡೆದಿವೆ. ಆದರೆ, ಆರೋಪಿಗಳಿಗೆ ಶಿಕ್ಷೆಯಾಗಿರುವುದು ಅತೀ ಕಡಿಮೆ. ನಾಲ್ಕನೇ ಒಂದು ಭಾಗ ಮಾತ್ರ. ಹೀಗಾಗಿ ಮನನೊಂದು ಈ ಬಗ್ಗೆ ಜಾಗೃತಿ ಮೂಡಿಸಲು ಈ ಜಾಥಾ ನಡೆಸುತ್ತಿದ್ದೇನೆ” ಎಂದು ಕಿರಣ್‌ ಹೇಳಿದ್ದಾರೆ.

“ನಾನು ಈ ಜಾಥಾ ಶುರು ಮಾಡಿ ಮೂರು ದಿನಕ್ಕೆ ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಯಿತು. ದಿನ ಒಂದಲ್ಲ ಒಂದು ಘಟನೆ ವರದಿಯಾಗುತ್ತಲೆ ಇದೆ. ಅತ್ಯಾಚಾರ ನಿರ್ಮೂಲನೆಯಾಗಬೇಕು. ಅತ್ಯಾಚಾರದ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಹೀಗಾಗಿ ಒಂದೆರಡು ಕಾಲೇಜುಗಳಿಗೂ ಭೇಟಿ ನೀಡಿ ಯುವಜನರ ಬಳಿ ಮಾತನಾಡಿದ್ದೇನೆ. ಈ ಜಾಥಾ ಮುಂದುವರೆಯಲಿದೆ” ಎಂದಿದ್ದಾರೆ ಕಿರಣ್.

ಕಿರಣ್ ತಂದೆ ಕಾರು ಚಾಲಕರಾಗಿದ್ದು, ತಾಯಿ ಮನೆ ಕೆಲಸಕ್ಕೆ ಹೋಗುತ್ತಾರೆ. ಕಿರಣ್‌ಗೆ ಒಬ್ಬ ಅಕ್ಕ ಇದ್ದಾರೆ. ಕೊರೊನಾ ಸಂಕಷ್ಟದಿಂದ ಈ ಬಾರಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಈ ಒಂದು ಸೈಕ್ಲಿಂಗ್ ಜಾಥಾಕ್ಕೆ ಕೈ ಹಾಕಿದ್ದೇನೆ. ಇದನ್ನು ಮುಂದುವರೆಸುತ್ತೇನೆ. ಜೊತೆಗೆ ಮುಂದಿನ ಬಾರಿ ಪರೀಕ್ಷೆ ಬರೆಯುತ್ತೇನೆ ಎನ್ನುತ್ತಾರೆ ವಿದ್ಯಾರ್ಥಿ ಕಿರಣ್.

ಅತ್ಯಾಚಾರ ನಿರ್ಮೂಲನೆ ಬಗ್ಗೆ ಯುವಜನತೆ ಹೆಚ್ಚು ಹೆಚ್ಚು ಜಾಗೃತರಾಗಲಿ, ಹೆಣ್ಣು ಮಕ್ಕಳ ಮಲೆ ನಡೆಯುವ ದೌರ್ಜನ್ಯಗಳ ಬಗ್ಗೆ ದನಿ ಎತ್ತುವಂತಾಗಲಿ. ಕಿರಣ್ ಅಂತಹ ಯುವ ಜನರ ಸಂಖ್ಯೆ ಹೆಚ್ಚಾಗಲಿ ಅನ್ನುವುದು ನಮ್ಮ ಆಶಯ.

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊಲೆ ಬೆದರಿಕೆ ಹಾಕಿದ್ದ ವಿಹೆಚ್‌ಪಿ ಮುಖಂಡ ಯೂಟರ್ನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights