ಉತ್ತರಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ : ಆನ್ಲೈನ್ನಲ್ಲಿ ವಿಡಿಯೋ ಹರಿಬಿಟ್ಟ ಕಾಮುಕರು!
ಉತ್ತರಪ್ರದೇಶದಲ್ಲಿ ಮನುಕುಲವೇ ತಲೆತಗ್ಗಿಸುವಂತ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕರು ಆನ್ಲೈನ್ನಲ್ಲಿ ವಿಡಿಯೋ ಹರಿಬಿಟ್ಟ ಘಟನೆ ನಡೆದಿದೆ.
ಉತ್ತರಪ್ರದೇಶದ ಮುಜಾಫರ್ ನಗರದ 17 ವರ್ಷದ ಬಾಲಕಿಯ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿ ಆನ್ಲೈನ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಭೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಪರಾರಿಯಾಗಿರುವ ಆರೋಪಿಗಳಾದ ಶುಭಂ ಮತ್ತು ಆಶಿಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬಾಬು ತಿಳಿಸಿದ್ದಾರೆ.
ಬಾಲಕಿಯ ತಾಯಿ ಸಲ್ಲಿಸಿದ ದೂರಿನ ಪ್ರಕಾರ ಆರೋಪಿಗಳು ಸಂತ್ರಸ್ತೆಗೆ ಹಣ್ಣುಗಳನ್ನು ನೀಡುವ ನೆಪದಲ್ಲಿ ಆಮಿಷವೊಡ್ಡಿ ಅಧಿಕ ಮರಗಳಿದ್ದ ತೋಟಕ್ಕೆ ಕರೆದೊಯ್ದಿದ್ದರು. ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಪರಾಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದ ಪ್ರತ್ಯೇಕ ಘಟನೆಯಲ್ಲಿ, ಮುಜಾಫರ್ ನಗರದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.