ಅಸ್ಸಾಂ ಘರ್ಷಣೆ: ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…!

ಅಸ್ಸಾಂನ ದರ್ರಾಂಗ್ ಜಿಲ್ಲೆಯ ಧೋಲ್ಪುರ್ ಪ್ರದೇಶದ ಗರುಖುಟಿಯಲ್ಲಿ ಭೂ ಅತಿಕ್ರಮಣ ಮಾಡಿಕೊಂಡ ಮನೆಗಳ ತೆರವಿಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಹಾಗೂ ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಇಬ್ಬರು ಸಾವನ್ನಪ್ಪಿದ್ದು, 20 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಸ್ಸಾಂನಲ್ಲಿ ಇಂಥ ಹಿಂಸಾಚಾರಕ್ಕೆ ಕಾರಣ ಏನು? ಸ್ಥಳೀಯರು ಪ್ರಾಣ ಕಳೆದುಕೊಳ್ಳುವ ಮಟ್ಟಿಗೆ ರೊಚ್ಚಿಗೆದ್ದಿದ್ದು ಯಾಕೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೋಮವಾರದಿಂದ ಧೋಲ್ಪುರ್ ಪ್ರದೇಶದಲ್ಲಿ ಭೂ ಅತಿಕ್ರಮಣ ಮಾಡಿಕೊಂಡ ಮನೆಗಳ ತೆರವಿನ ಕಾರ್ಯ ನಡೆದಿದೆ. ಗುರುವಾರವೂ ತೆರವು ಕಾರ್ಯ ನಡೆಯುವ ವೇಳೆ ಸ್ಥಳೀಯರು ತೆರವಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಪೊಲೀಸ್ ಹಾಗೂ ಸ್ಥಳೀಯ ವಾಸಿಗಳ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿ ಘರ್ಷಣೆಯಾಗಿದೆ. ಪರಸ್ಪರ ಕಲ್ಲು ತೂರಾಟ, ಲಾಠಿ ಪ್ರಯೋಗ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ಗುಂಡೇಟಿಗೆ ಇಬ್ಬರು ಸ್ಥಳೀಯ ವಾಸಿಗಳು ಬಲಿಯಾಗಿದ್ದು ಒಂಬತ್ತು ಪೊಲೀಸರು ಸೇರಿದಂತೆ 20 ಜನ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಸದ್ದಾಂ ಹುಸೇನ್ ಮತ್ತು ಶೇಖ್ ಫೋರಿಡ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮೊನಿರುದ್ದೀನ್ ಅವರ ಸ್ಥಿತಿ ಗಂಭೀರವಾಗಿದ್ದು ಗೌಹಾತಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ :-

ಘಟನೆ ನಡೆದಿದ್ದು ಯಾವಾಗ?

ಸಿಪಾಜ್ಹಾರ್ ಪ್ರದೇಶದ ಧೋಲ್ಪುರ್ 1 ಮತ್ತು ಧೋಲ್ಪುರ್ 3 ಗ್ರಾಮಗಳಲ್ಲಿ ಸೆಪ್ಟೆಂಬರ್ 20 ರಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅಂದಿನಿಂದಲೂ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಚೂಪಾದ ಆಯುಧಗಳನ್ನು ಹಿಡಿದ ಪ್ರತಿಭಟನಾಕಾರರ ಗುಂಪೊಂದು ಕಲ್ಲು ತೂರಾಟ ಮಾಡಿ ಸ್ಥಳದಲ್ಲಿದ್ದ ಪೋಲಿಸರು ಮತ್ತು ಸಾಮಾನ್ಯ ಜನರ ಮೇಲೆ ಹಲ್ಲೆ ಮಾಡಲು ಆರಂಭಿಸಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ದಾರಂಗ್ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ವೈರಲ್ ವೀಡಿಯೋದಲ್ಲಿ ಏನಿದೆ?
ಘಟನೆಯನ್ನು ಸೆರೆಹಿಡಿಯಲಾದ 30 ಸೆಕೆಂಡುಗಳ ವೀಡಿಯೋದಲ್ಲಿ ಅಕ್ರಮವಾಗಿ ನೆಲೆಸಿದವನಾಗಿದ್ದ ಎನ್ನಲಾದ ಲುಂಗಿ ಧರಿಸಿದ ವ್ಯಕ್ತಿಯೊಬ್ಬ ಪೊಲೀಸರ ಗುಂಪಿನ ಕಡೆಗೆ ಹಲ್ಲೆಗಾಗಿ ಕೈಯಲ್ಲಿ ಕೋಲಿನೊಂದಿಗೆ ಓಡಿ ಬರುತ್ತಾನೆ. ಈ ವೇಳೆ ಆತನ ಎದೆಗೆ ಪೊಲೀಸರು ಗುಂಡು ಹಾರಿಸುತ್ತಾರೆ. ಗುಂಡಿನ ದಾಳಿಗೆ ವ್ಯಕ್ತಿ ಸ್ಥಳದಲ್ಲೇ ಕುಸಿದು ಬೀಳುತ್ತಾನೆ. 

ಬಳಿಕ ವೃತ್ತಿಪರ ಛಾಯಾಗ್ರಾಹಕ ಬಿಜಯ್ ಶಂಕರ್ ಬನಿಯಾ ಎಂಬಾತ ಪೊಲೀಸ್ ಗುಂಡಿಗೆ ಸಾವನ್ನಪ್ಪಿದ ಆ ವ್ಯಕ್ತಿಯ ಮೇಲೆ ಮನಬಂದಂತೆ ಹಲ್ಲೆ ಮಾಡುತ್ತಾನೆ. ಕಾಲಿನಿಂದ ಒದೆಯುವುದು ತುಳಿಯುವುದು ಗುದ್ದುವುದನ್ನು ಮಾಡುತ್ತಾನೆ. ಆತನನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ :-
ಘಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವೇನು ಎನ್ನುವ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ. “ಘಟನೆ ನಡೆದಾಗ ನಾನು ಅಲ್ಲಿದ್ದೆ. ಧೋಲ್ಪುರ್ 1 ಮತ್ತು ಧೋಲ್ಪುರ್ 3 ಗ್ರಾಮದಲ್ಲಿ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ಮೇಲೆ ಕೆಲ ಅತಿಕ್ರಮಣಕಾರರು ಕಲ್ಲು ತೂರಾಟ ಮಾಡಿ ದಾಳಿ ಮಾಡಿದರು. ಇದರಿಂದ ಪೊಲೀಸರು ಸ್ಥಳದಲ್ಲಿ ಗುಂಡು ಹಾರಿಸಿದರು ಮತ್ತು ಅಶ್ರುವಾಯು ಬಳಸಿದರು” ಎಂದು ಘಟನೆ ನಡೆದ ಕ್ಷಣದಲ್ಲಿದ್ದ ಸುಕುರ್ ಅಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕಿರಿಯ ಸಹೋದರನಾದ ದಾರಂಗ್ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವ ಶರ್ಮಾ ಕೂಡ ಪ್ರತಿಭಟನಾಕಾರರು ತೀಕ್ಷ್ಣವಾದ ಆಯುಧಗಳಿಂದ ಪೊಲೀಸ್ ಸಿಬ್ಬಂದಿ ಮತ್ತು ಇತರರ ಮೇಲೆ ಹಲ್ಲೆ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು, ಇಬ್ಬರು ನಾಗರಿಕರು ಸಾವನ್ನಪ್ಪಿದರು. ಇದು ಎರಡು ಕಡೆ ಘರ್ಷಣೆ ವಿಕೋಪಕ್ಕೆ ಹೋಗಲು ಕಾರಣವಾಯಿತು ಎಂದು ಸುಶಾಂತ ಬಿಸ್ವ ಶರ್ಮ ಹೇಳಿದರು.

ಧೋಲ್ಪುರ್ ಪ್ರದೇಶದಿಂದ 3-4 ಕಿಮೀ ದೂರದಲ್ಲಿರುವ ಬಲುವಾ ಘಾಟ್ ಪ್ರದೇಶದಲ್ಲಿ ಈಗ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತದಿಂದ ತಾತ್ಕಾಲಿಕ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸ್ಥಾಪಿಸಲಾಗಿದೆ.

ಗ್ರಾಮಸ್ಥರ ಪ್ರತಿಭಟನೆಗೆ ಕಾರಣವೇನು?

ಅಸ್ಸಾಂನ ಧೋಲ್ಪುರ್ ಬಜಾರ್ ಪ್ರದೇಶ ಹಾಗೂ ತೆರವಿಗೆ ಸೂಚಿಸಲಾದ ಪ್ರದೇಶದಲ್ಲಿ ದಶಕಗಳಿಂದ ಜನ ವಾಸಿಸುತ್ತಿದ್ದಾರೆ. ಈ ಪ್ರದೇಶದಿಂದ ಹೊರಹಾಕುವುದಾದರೆ ತಮಗೆ ಪುನರ್ವಸತಿ ವ್ಯವಸ್ಥೆ ಮಾಡಿಕೊಡಿ ಎಂದು ಜನ ಪ್ರತಿಭಟನೆಗಿಳಿದರು. ಸುಮಾರು 800 ಕುಟುಂಬಗಳಿಗೆ ಪುನರ್ವಸತಿ ನೀಡುವ ಬೇಡಿಕೆಯ ಮೇಲೆ ಸಾರ್ವಜನಿಕ ಪ್ರತಿಭಟನೆ ಭುಗಿಲೆದ್ದಿದೆ. ತೆರವಿಗೆ ಜನ ಅಡ್ಡಿಯನ್ನುಂಟು ಮಾಡಿದ್ದಾರೆ.

ಆದರೆ ಧೋಲ್ಪುರ್ ಬಜಾರ್ ಪ್ರದೇಶ, ಪಶ್ಚಿಮ ಚುಬಾ ಪ್ರದೇಶ, ಧೋಲ್ಪುರ ನಂ. 1 ಮತ್ತು 3 ಸಿಪಜಾರ್ ಕಂದಾಯ ವೃತ್ತದ ಅಡಿಯಲ್ಲಿ ಬರುವುದರಿಂದ ಈ ಪ್ರದೇಶದ ಭೂ ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದು ಇಲ್ಲಿನ ಜನರ ಮನೆಗಳ ತೆರವಿಗೆ ಜಿಲ್ಲಾಡಳಿತ ಹಾಗೂ ಪೊಲೀಸರು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗಿ ಘರ್ಷಣೆ ನಡೆದಿದೆ.

ಅದಾಗ್ಯೂ, ಅಸ್ಸಾಂ ಸರ್ಕಾರವು ದರ್ರಾಂಗ್ ಜಿಲ್ಲೆಯ ಧೋಲ್ಪುರ್ ಗೋರುಖುತಿ ಗ್ರಾಮದಲ್ಲಿ ಸೋಮವಾರ ಬೃಹತ್ ತೆರವು ಕಾರ್ಯಾಚರಣೆಯನ್ನು ನಡೆಸಿ 800 ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗಿವೆ. ಸರ್ಕಾರ 4,500 ಬಿಘಾ ಭೂಮಿಯನ್ನು ಹಿಂಪಡೆದಿದೆ.

ಆದರೆ ಧೋಲ್ಪುರ್ ಗೋರುಖುತಿಯ ಕೆಲವು ನಿವಾಸಿಗಳು ಹೇಳುವ ಪ್ರಕಾರ ಹೊರಹಾಕಲ್ಪಟ್ಟ ಕುಟುಂಬಗಳ ಸಂಖ್ಯೆ 900 ಕ್ಕಿಂತ ಹೆಚ್ಚಿದೆ. ಜೊತೆಗೆ 20,000 ಕ್ಕೂ ಹೆಚ್ಚು ಜನರನ್ನು ಬೀದಿ ಪಾಲು ಮಾಡಲಾಗಿದೆ ಎಂದು ದೂರಲಾಗುತ್ತಿದೆ.

ಸಿಪಜರ್‌ನಲ್ಲಿರುವ ಸರ್ಕಾರಿ ಯೋಜನೆ ಯಾವುದು?
ಸಿಪಜರ್‌ನಲ್ಲಿ ಅಸ್ಸಾಂ ಸರ್ಕಾರ 2021-22ರ ರಾಜ್ಯ ಬಜೆಟ್ ನಲ್ಲಿ ಘೋಷಿಸಿದ ಬಹುಕೋಟಿ ‘ಗೋರುಖುಟಿ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಯೋಜಿಸಿದೆ. ಇದು ಅರಣ್ಯೀಕರಣ ಮತ್ತು ಭೂಮಿಯನ್ನು ಸ್ಥಳೀಯ ಯುವಕರನ್ನು ಒಳಗೊಂಡ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಧೋಲ್ಪುರ್ ಗೋರುಖುಟಿಗೆ ಭೇಟಿ ನೀಡಿ ಗೋರುಖುಟಿ ಯೋಜನೆಗೆ ಚಾಲನೆ ನೀಡಿದರು.

ಆದರೆ ಸರಿಯಾದ ಪುನರ್ವಸತಿ ಯೋಜನೆ ಇಲ್ಲದೆ ಜನರನ್ನು ಹೊರಹಾಕುವ ಬಗ್ಗೆ ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಿಂದ ಅಸ್ಸಾಂ ಸರ್ಕಾರ ಟೀಕೆಗೆ ಗುರಿಯಾಗಿದೆ.

ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಹೇಳುವುದೇನು?
ಘಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುವಾಹಟಿಯಲ್ಲಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. “ಭೂಮಿಯನ್ನು ಅತಿಕ್ರಮಣಕಾರರಿಂದ ತೆರವುಗೊಳಿಸುವ ಜವಾಬ್ದಾರಿಯನ್ನು ಪೋಲಿಸರಿಗೆ ವಹಿಸಲಾಗಿದೆ ಮತ್ತು ಕೆಲಸ ಮುಗಿಯುವವರೆಗೂ ಅವರು ಅದನ್ನು ಮುಂದುವರಿಸುತ್ತಾರೆ. ಕತ್ತಲಾದ ನಂತರ ಹೊರಹಾಕುವಿಕೆ ನಿಲ್ಲುತ್ತದೆ ಮತ್ತು ನಾಳೆ ಮತ್ತೆ ಮುಂದುವರಿಯುತ್ತದೆ” ಎಂದು ಅವರು ಹೇಳಿದ್ದಾರೆ.

ದರ್ರಾಂಗ್ ಜಿಲ್ಲಾಡಳಿತವು ಇಲ್ಲಿಯವರೆಗೆ 602.40 ಹೆಕ್ಟೇರ್ ಭೂಮಿಯನ್ನು ತೆರವುಗೊಳಿಸಿದೆ. ಸೋಮವಾರದಿಂದ 800 ಕುಟುಂಬಗಳನ್ನು ಹೊರಹಾಕಿದೆ. ಸಿಪಜಾರ್‌ನಲ್ಲಿ ನಾಲ್ಕು ‘ಅಕ್ರಮವಾಗಿ’ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಿದೆ.

ಅಸ್ಸಾಂ ಘರ್ಷಣೆ: ನ್ಯಾಯಾಂಗ ತನಿಖೆಗೆ ಆದೇಶ :-
ಈ ಘಟನೆಯಲ್ಲಿ ಪೊಲೀಸ್ ದೌರ್ಜನ್ಯದ ವರದಿಗಳು ಮತ್ತು ವೀಡಿಯೋಗಳು ಹೊರಬಂದ ನಂತರ ಗೌಹಾತಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

“ಸಿಪಜರ್ ಕಂದಾಯ ವೃತ್ತದ ಧಲ್ಪುರ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 02 (ಎರಡು) ನಾಗರಿಕರ ಸಾವು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರರ ಗಾಯಕ್ಕೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲು ಗೃಹ ಮತ್ತು ರಾಜಕೀಯ ಇಲಾಖೆಗಳ ಸರ್ಕಾರ ನಿರ್ಧರಿಸಿದೆ. ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಸಿಐಡಿಗೆ ಕೇಸ್ ಕೂಡ ದಾಖಲಾಗಿದೆ ಎಂದು ವಿಶೇಷ ಡಿಜಿಪಿ ಜಿಪಿ ಸಿಂಗ್ ಹೇಳಿದರು.

ಇಂದು 12-ಗಂಟೆಗಳ ಕಾಲ ದರ್ರಾಂಗ್ ಬಂದ್ :-
ಅಸ್ಸಾಂನ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟ, ಜಾಮಿಯಾತ್ ಮತ್ತು ಇತರ ಕೆಲವು ಸಂಘಟನೆಗಳು ಜಂಟಿಯಾಗಿ ಈ ಘಟನೆಯನ್ನು ವಿರೋಧಿಸಿ ಶುಕ್ರವಾರ 12 ಗಂಟೆಗಳ ದರ್ರಾಂಗ್ ಜಿಲ್ಲಾ ಬಂದ್‌ಗೆ ಕರೆ ನೀಡಿವೆ.

ಸಂಘಟನೆಗಳ ಜಂಟಿ ಸಮಿತಿಯು ಪತ್ರಿಕಾಗೋಷ್ಠಿಯಲ್ಲಿ ಅಸ್ಸಾಂ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಪ್ರತಿ ಮೃತ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಮತ್ತು ಪ್ರತಿ ಗಾಯಗೊಂಡ ವ್ಯಕ್ತಿಗೆ 5 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದೆ.

ಒಂದು ವೇಳೆ ಸರ್ಕಾರವು ನಿರ್ವಸಿತ ಕುಟುಂಬಗಳಿಗೆ ಭೂಮಿಯನ್ನು ನೀಡದಿದ್ದರೆ, ಮೃತ ವ್ಯಕ್ತಿಗಳ ಕುಟುಂಬ ಸದಸ್ಯರು ಅವರ ಶವಗಳನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಅವರು ಹೇಳಿವೆ.

ಘಟನೆಯ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ :-
ಧೋಲ್ಪುರ್ ನಿವಾಸಿಗಳ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಅವರು ಟ್ವೀಟ್ ಮಾಡುವ ಮೂಲಕ, “ಅಸ್ಸಾಂ ರಾಜ್ಯ ಪ್ರಾಯೋಜಿತ ಬೆಂಕಿಯಲ್ಲಿದೆ. ನಾನು ರಾಜ್ಯದ ನಮ್ಮ ಸಹೋದರ ಸಹೋದರಿಯರಿಗೆ ಒಗ್ಗಟ್ಟಾಗಿ ನಿಂತಿದ್ದೇನೆ. ಭಾರತದ ಯಾವುದೇ ಮಕ್ಕಳು ಇದಕ್ಕೆ ಅರ್ಹರಲ್ಲ” ಎಂದು ಕಿಡಿ ಕಾರಿದ್ದಾರೆ.

ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ (ಎಪಿಸಿಸಿ) ಅಧ್ಯಕ್ಷ ಭೂಪೇನ್ ಕುಮಾರ್ ಬೋರಾಹ್ ಅವರು ಕೋವಿಡ್ -19 ಪರಿಸ್ಥಿತಿಯಲ್ಲಿ ವಿಶೇಷವಾಗಿ ತೆರವು ಕಾರ್ಯವು ಅಮಾನವೀಯವಾಗಿದೆ ಎಂದು ಹೇಳಿದರು. ತೆರವು ಮಾಡುವ ಮೊದಲು ಸರ್ಕಾರವು ಪುನರ್ವಸತಿ ಮತ್ತು ಪರ್ಯಾಯ ವಸತಿ ವ್ಯವಸ್ಥೆ ಮಾಡಬೇಕಿತ್ತು ಎಂದರು.

“ಸಿಎಂ ಮೊದಲು ಜನರಿಗೆ ಪುನರ್ವಸತಿ ಕಲ್ಪಿಸಬೇಕು ಮತ್ತು ಅವರನ್ನು ಬಲವಂತವಾಗಿ ಹೊರಹಾಕಬಾರದು ಎಂದು ನಾವು ಒತ್ತಾಯಿಸುತ್ತೇವೆ. ನಕಲಿ ಎನ್‌ಕೌಂಟರ್‌ಗಳ ಮೂಲಕ ಜನರ ಮೇಲೆ ಗುಂಡಿನ ದಾಳಿ ಮಾಡಿ ಬಲದಿಂದ ಹೇಗೆ ಆಡಳಿತ ನಡೆಸಬೇಕು ಎಂಬುದು ಬಿಜೆಪಿ ಸರ್ಕಾರಕ್ಕೆ ಮಾತ್ರ ತಿಳಿದಿದೆ. ಆಡಳಿತದ ದೃಷ್ಟಿಯಿಂದ ನೋಡಿದರೆ ಇದು ಅತ್ಯಂತ ಖಂಡನೀಯ ಮತ್ತು ಪ್ರಜಾಪ್ರಭುತ್ವ ಸಮಾಜಕ್ಕೆ ಅಪಾಯಕಾರಿ “ಎಂದು ಭೂಪೇನ್ ಬೋರಾ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights