ಕ್ಯಾಪ್ಟನ್ ಅಮರೀಂದರ್ ಸಿಂಗ್ ಮೇಲೆ ಬಿಜೆಪಿಯಲ್ಲಿ ಹೊಸ ಪ್ರೀತಿ, ಗೌರವ; ಕೇಸರಿ ಪಡೆ ಹೊಸ ಗೇಮ್‌ಪ್ಲಾನ್‌!

ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಮೇಲೆ ಬಿಜೆಪಿ ನಾಯಕತ್ವವು ಹೊಸ ಪ್ರೀತಿಯನ್ನು ಬೆಳೆಸಿಕೊಂಡಿದೆ. ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಆಂತರಿಕ ಭಿನ್ನಮತದಿಂದಾಗಿಅಮರೀಂದರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಂತರ ಬಿಜೆಪಿಯಲ್ಲಿ ಅವರ ಮೇಲೆ ಹೊಸ ಕಾಳಜಿ ವ್ಯಕ್ತವಾಗುತ್ತಿದೆ. ಅಮರೀಂದರ್‌ ಅವರ ನಾಲ್ಕೂವರೆ ವರ್ಷದ ಅಧಿಕಾರಾವಧಿಯಲ್ಲಿ ನಿರಂತರವಾಗಿ ಅವರ ವಿರುದ್ದ ದಾಳಿ ಮಾಡಿದ್ದ ಬಿಜೆಪಿ ಈಗ ಅವರ ರಾಜೀನಾಮೆಯನ್ನು “ರಾಜಕೀಯ ಕೊಲೆ” ಎಂದು ಕರೆದಿದ್ದು, ಇದು ಅವರನ್ನು ಸೆಳೆಯಲು ಬಿಜೆಪಿ “ಗೇಮ್ ಪ್ಲಾನ್” ರೂಪಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರು ಪ್ರತಿಭಟನೆಗೆ ಇಳಿದ ನಂತರ, ಪಂಜಾಬ್‌ನಲ್ಲಿ ಬಿಜೆಪಿ ಮೂಲೆ ಗುಂಪಾಗಿದೆ. ಮುಂದಿನ ವರ್ಷ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯವಾಗಿ ತನ್ನ ನೆಲೆಯನ್ನು ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಆ ದೇಶದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರೊಂದಿಗಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸ್ನೇಹವನ್ನು ಅಮರೀಂದರ್‌ ಪ್ರಶ್ನಿಸಿದ್ದು, ಅದನ್ನೇ ತನ್ನ ದಾಳವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.

ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಮರೀಂದರ್ ಅವರು ಸಿಧು ಅವರನ್ನು “ಅಪಾಯಕಾರಿ” ಮತ್ತು “ದೇಶ ವಿರೋಧಿ” ಎಂದು ಕರೆದಿದ್ದು, ಅಂತಹ ವ್ಯಕ್ತಿ ರಾಜ್ಯದ ಸಿಎಂ ಆಗಬಾರದು ಎಂದು ಹೇಳಿದ್ದಾರೆ.

“ನಮ್ಮ ಸೈನಿಕರು ಪ್ರತಿದಿನ ಗಡಿಗಳಲ್ಲಿ ಕೊಲ್ಲಲ್ಪಡುತ್ತಿದ್ದಾರೆ. ಇಂತಹ ವೇಳೆ, ಸಿಧು ಅವರು ಇಮ್ರಾನ್ ಖಾನ್ ಮತ್ತು ಜನರಲ್ ಬಾಜ್ವಾ ಅವರನ್ನು ಅಪ್ಪಿಕೊಳ್ಳುವುದನ್ನು ನಾವು ನೋಡಿದ್ದೇವೆ. ಕರ್ತಾರ್‌ಪುರ್ ಕಾರಿಡಾರ್ ಉದ್ಘಾಟನೆಯಲ್ಲಿ ಪಾಕಿಸ್ತಾನದ ಪ್ರಧಾನಿಯನ್ನು ಹಾಡಿ ಹೊಗಳಿರುವುದನ್ನು ನಾವು ನೋಡಿದ್ದೇವೆ” ಎಂದು ಅಮರೀಂದರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್ ಚುನಾವಣಾ ವಸ್ತಿಲಿನಲ್ಲಿ ಐದು ಅಕಾಲಿ ನಾಯಕರು ಬಿಜೆಪಿಗೆ ಸೇರ್ಪಡೆ!

ಈಗ, ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಿಂದ ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಮತ್ತು ಉತ್ತರಾಖಂಡದ ಪಕ್ಷದ ಸಂಸದ ಅನಿಲ್ ಬಲೂನಿ ಸೇರಿದಂತೆ ಬಿಜೆಪಿ ನಾಯಕರು ಸಿಧು ಅವರ ವಿರುದ್ದ ವಾಗ್ದಾಳಿ ನಡೆಸಿರುವ ಅಮರೀಂದರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಮಾಜಿ ಸಿಎಂ ಅವರ ಟೀಕೆಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏನು ಹೇಳುತ್ತದೆ ಎಂದು ಪ್ರಶ್ನಿಸಿದ್ದಾರೆ.

ಪ್ರಾಸಂಗಿಕವಾಗಿ, ಅಮರೀಂದರ್ ಅವರು ಸೆಪ್ಟೆಂಬರ್ 18 ರಂದು ರಾಜೀನಾಮೆ ನೀಡಿದರು. ನಂತರ, ಅವರು ನೀಡಿದ ಸಂದರ್ಶನಗಳಲ್ಲಿ ಬಿಜೆಪಿ ವಿರುದ್ಧ ಏನನ್ನೂ ಮಾತನಾಡಲಿಲ್ಲ. ಇದರೊಂದಿಗೆ, ಅಮರೀಂದರ್ ಅವರನ್ನು ಬಿಜೆಪಿ ಬಲವಾಗಿ ಸಮರ್ಥಿಸಿಕೊಂಡಿದ್ದು, ಮಾಜಿ ಸಿಎಂ ಕೇಸರಿ ಪಕ್ಷಕ್ಕೆ ಸೇರುತ್ತಾರೆಯೇ ಎಂದು ರಾಜಕೀಯ ವಲಯದಲ್ಲಿ ಊಹಾಪೋಹಗಳನ್ನು ಹುಟ್ಟುಹಾಕಿದೆ.

“ರಾಷ್ಟ್ರೀಯವಾದಿ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಗೇಮ್ ಪ್ಲಾನ್‌ಗೆ ಅಡ್ಡಿಯಾಗಿದ್ದರು. ಅದಕ್ಕಾಗಿಯೇ ಅವರ ರಾಜಕೀಯ ಕೊಲೆ ಮಾಡಲಾಗಿದೆ” ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಸಿಧು ಅವರು ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಹೋದಾಗ ಅಮರೀಂದರ್ ಸಿಂಗ್ ಅವರಿಗೆ ಇದು ಸಾಬೀತಾಯಿತು. ಪಾಕಿಸ್ತಾನದಲ್ಲಿ ಸಿಧು ಅವರು ಇಮ್ರಾನ್ ಖಾನ್ ಅವರನ್ನು ಹೊಗಳಿದ್ದಲ್ಲದೆ, ಆ ದೇಶದ ಸೇನಾ ಮುಖ್ಯಸ್ಥರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಸಿಧು ಮರಳಿ ಬಂದಾಗ ಅಮರೀಂದರ್ ಅವರು ಹೋಗಬೇಡಿ ಎಂದು ಸಲಹೆ ನೀಡಿದರೂ ಪಾಕಿಸ್ತಾನಕ್ಕೆ ಏಕೆ ಹೋಗಿದ್ದೀರಿ ಎಂದು ಕೇಳಿದಾಗ, ಸಿಧು ಅವರು ನನ್ನ ನಾಯಕ ಅಮರಿಂದರ್ ಸಿಂಗ್ ಅಲ್ಲ, ನನ್ನ ನಾಯಕ ರಾಹುಲ್ ಗಾಂಧಿ ಎಂದು ಹೇಳಿದ್ದರು ಎಂದು ವಿಜ್ ಹೇಳಿದ್ದಾರೆ.

“ಕಾಂಗ್ರೆಸ್‌ನ ಈ ಕೊಳಕು ಪಿತೂರಿಗೆ ಅಡ್ಡಿಯುಂಟು ಮಾಡುತ್ತಿದ್ದ ರಾಷ್ಟ್ರೀಯವಾದಿ ಅಮರಿಂದರ್ ಸಿಂಗ್ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.

“ಸಿಧು ರಾಷ್ಟ್ರಕ್ಕೆ ಬೆದರಿಕೆಯಾಗಿದ್ದರೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಎಐಸಿಸಿ ಹೈಕಮಾಂಡ್ ಸಿಧು ಅವರನ್ನು ಗಡಿ ರಾಜ್ಯದಲ್ಲಿ ಪಿಸಿಸಿ ಮುಖ್ಯಸ್ಥರಾಗಿ ಏಕೆ ಬೆಂಬಲಿಸುತ್ತಿದೆ” ಎಂದು ಬಿಜೆಪಿ ನಾಯಕ ತರುಣ್ ಚುಗ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್ ಮಾಜಿ ಸಚಿವ, ಅಕಾಲಿ ನಾಯಕ ಸೇವಾ ಸಿಂಗ್ ಸೇಖ್ವಾನ್ ಎಎಪಿಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights