ಸಾರಿಗೆ ನೌಕರರ ಮುಂದುವರೆದ ಮುಷ್ಕರ : ದಿನಬೆಳಗಾದರೆ ಪ್ರಯಾಣಿಕರ ಪರದಾಟ…!

ಇಂದಿಗೆ ಸಾರಿಗೆ ನೌಕರರ ಮುಷ್ಕರ 5 ನೇ ದಿನಕ್ಕೆ ಕಾಲಿಟ್ಟಿದೆ. 6ನೇ ವೇತನ ಜಾರಿಗೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದು ಸರ್ಕಾರದಿಂದ ಮುಷ್ಕರ ಕೈಬಿಡಲು ಸಾಕಷ್ಟು ಸರ್ಕಸ್ ನಡೆಯುತ್ತಲೆ ಇದೆ. ಆದರೆ ಸರ್ಕಾರಕ್ಕೆ ಸಾರಿಗೆ ನೌಕರರ ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿನಬೆಳಗಾದರೆ ಸಾರಿಗೆ ಬಸ್ ಗಳಿಲ್ಲದೇ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭವನ್ನು ಬಂಡಾವಳವನ್ನಾಗಿಸಿಕೊಂಡ ಝಾಸಗಿ ವಾಹನಗಳು ಹಗಲು ಸುಲಿಗೆಗೆ ಮುಂದಾಗಿವೆ.

ಹೌದು… ಸಾರಿಗೆ ಬಸ್ ಗಳಲಿಲ್ಲ. ದುಬಾರಿ ಹಣ ಕೊಟ್ಟು ಖಾಸಗಿ ವಾಹನಗಳಲ್ಲಿ ಓಡಾಟ ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೊರೊನಾ ಆರ್ಥಿಕ ಸಂಕಷ್ಟದಿಂದ ಚೇತರಿಕೆ ಕಾಣಲು ದುಡಿಮೆಯಲ್ಲಿ ನಿರತರಾಗುತ್ತಿದ್ದ ಜನಸಾಮಾನ್ಯರಿಗಿದು ನಿಜಕ್ಕೂ ಅಗ್ನಿ ಪರೀಕ್ಷೆಯಾಗಿಹೋಗಿದೆ.

ಕೆಲವು ಸಾರಿಗೆ ಬಸ್ ಸಂಚಾರ ಬಿಟ್ಟರೆ ಮತ್ತೆಲ್ಲೂ ಇಂದು ಸರ್ಕಾರಿ ಬಸ್ಸುಗಳು ಓಡಾಡುತ್ತಿಲ್ಲ. ಬೆಂಗಳೂರಲ್ಲಿ ಸಾರಿಗೆ ಬಸ್ ಗಳ ಓಡಾಟವಿಲ್ಲದೆ ಖಾಸಗಿ ಬಸ್ಸುಗಳನ್ನೇ ಪ್ರಯಾಣಿಕರು ನೆಚ್ಚಿಕೊಳ್ಳಬೇಕಾಗಿ ಬಂದಿದೆ. ಯಾವಾಗಲೂ ಜನರಿಂದ ವ್ಯಾಪಾರ, ವಹಿವಾಟುಗಳಿಂದ ಗಿಜಿಗಿಡುವ ಬೆಂಗಳೂರಿನ ಕೆ ಆರ್ ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತಮುತ್ತ ಪ್ರದೇಶಗಳು ಜನರಿಲ್ಲದೆ, ಬಸ್ಸುಗಳಿಲ್ಲದೆ ಕೊರೊನಾ ಕರ್ಫ್ಯೂ ಜಾರಿಯಲ್ಲಿರುವಂತೆ ಕಾಣುತ್ತಿದೆ.

ನಗರದ ಕೆಲವು ಕಡೆ ಸರ್ಕಾರಿ ಬಸ್ಸು ಮತ್ತು ಖಾಸಗಿ ಬಸ್ಸುಗಳು ಕೂಡ ಸಂಚರಿಸುತ್ತಿವೆ. ವೊಲ್ವೊ ಬಸ್ಸುಗಳ ಜೊತೆಗೆ ಖಾಸಗಿ ಬಸ್ ಸೇವೆ ಆರಂಭವಾಗಿದೆ. ಮೈಸೂರು, ವಿರಾಜಪೇಟೆ, ಗುಂಡ್ಲುಪೇಟೆಯಲ್ಲಿ ಸರ್ಕಾರಿ ಬಸ್ಸುಗಳು ಬೆಳಗ್ಗೆ 5 ಗಂಟೆಯಿಂದ ಸಂಚಾರ ಆರಂಭಿಸಿವೆ ಎಂದು ತಿಳಿದುಬಂದಿದೆ.

ಇತ್ತ ಸಾರಿಗೆ ಅಧಿಕಾರಿಗಳ ಕರೆ ಓಗೊಟ್ಟು ಕರ್ತವ್ಯಕ್ಕೆ ಹಾಜರಾಗಿರುವ 55 ವರ್ಷಕ್ಕೆ ಮೇಲ್ಪಟ್ಟ ಚಾಲಕರು ಮತ್ತು ನಿರ್ವಾಹಕರಿಗೆ ದೈಹಿಕ ಫಿಟ್ ನೆಸ್ ಬೇಕು, ದೈಹಿಕವಾಗಿ ಆರೋಗ್ಯದಲ್ಲಿ ಸದೃಢವಾಗಿದ್ದರೆ ಮಾತ್ರ ಕರ್ತವ್ಯದಲ್ಲಿ ಮುಂದುವರಿಯಲು ಸಾಧ್ಯ ಎಂದು ಬೆಂಗಳೂರು ಮಹಾನಗರ ಸಾರಿಗೆ ನಿಗಮ ಆದೇಶ ಮಾಡಿದೆ. ಹೀಗಾಗಿ ನಾಳೆಯೊಳಗೆ ನೌಕರರು ದೈಹಿಕ ಫಿಟ್ ನೆಸ್ ಸರ್ಟಿಫಿಕೇಟ್ ಇಲಾಖೆಗೆ ನೀಡಬೇಕು ಎಂದು ಸೂಚಿಸಿದೆ.

ಇನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಆಗ್ರಹಿಸಿದರೂ ಕರ್ತವ್ಯಕ್ಕೆ ಹಾಜರಾಗದ ಮತ್ತಷ್ಟು ನೌಕರರನ್ನು ರಾಜ್ಯ ರಸ್ತೆ ಸಾರಿಗೆ ಇಲಾಖೆ ವಜಾ ಮಾಡಿದೆ. ಸಾರಿಗೆ ನೌಕರರು ಮುಷ್ಕರ ನಿಲ್ಲಿಸಲು ಹಲವಾರು ಬಾರಿ ಮನವಿ ಮಾಡಲಾಗಿದ್ದು ಇದು ಅಂತಿಮ ಕರೆ, ಮುಷ್ಕರ ಕೈಬಿಡಿ, ಕರ್ತವ್ಯಕ್ಕೆ ಹಾಜರಾಗಿ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ನೌಕರರಿಗೆ ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights