ಕೊರೊನಾ ಉಲ್ಬಣ: ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ಗೆ ಚಿಂತನೆ!

ದೇಶದಲ್ಲಿ ಕೊರೊನಾ ಸೋಂಕಿನ ಆಕ್ರಮಣ ಮತ್ತೆ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ದೇಶದ ಹಲವಾರು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದು, ವಾರಾಂತ್ಯದ ಲಾಕ್‌ಡೌನ್‌ ಹೇರಲಾಗಿದೆ. ಆದರೆ, ಇದೀಗ, ಸೋಮವಾರದಿಂದ 15 ದಿನಗಳ ಲಾಕ್‌ಡೌನ್‌ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶನಿವಾರ ನಡೆದ ಆಡಳಿತಾರೂಢ ಮೂರು ಮೈತ್ರಿ ಪಕ್ಷಗಳು ಮತ್ತು ಪ್ರತಿಪಕ್ಷಗಳ ಸಭೆಯಲ್ಲಿ, ರಾಜ್ಯ ಸರ್ಕಾರವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಎಲ್ಲ ಪಕ್ಷಗಳ ಸಹಕಾರವನ್ನು ಕೋರಿದರು. ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಾಜರಿದ್ದ ಎಲ್ಲರೂ ತಮ್ಮ ಬೆಂಬಲವನ್ನು ಮುಖ್ಯಮಂತ್ರಿಗೆ ನೀಡಿದ್ದಾರೆ.

“ವಿರೋಧ ಪಕ್ಷವಾಗಿ, ನಾವು ಸರ್ಕಾರಕ್ಕೆ ನಮ್ಮ ಬೆಂಬಲವನ್ನು ನೀಡಲು ಸಿದ್ಧರಿದ್ದೇವೆ. ಲಾಕ್‌ಡೌನ್ ಸಮಯದಲ್ಲಿ ಉದ್ಯೋಗ ನಷ್ಟ ಮತ್ತು ಜೀವನೋಪಾಯದ ಸಮಸ್ಯೆಗಳ ಬಗ್ಗೆ ಜನರ ಆತಂಕಗಳನ್ನು ನಿವಾರಿಸಲು ಸರ್ಕಾರವು ವಿವರವಾದ ಯೋಜನೆಯನ್ನು ರೂಪಿಸಬೇಕು” ಎಂದು ಫಡ್ನವೀಸ್ ಒತ್ತಾಯಿಸಿದರು.

ಕಾಂಗ್ರೆಸ್ ನಾಯಕ, ಸಚಿವ ಅಶೋಕ್ ಚವಾಣ್, “ಸಂಪೂರ್ಣ ಲಾಕ್‌ಡೌನ್ ಅನ್ನು ಹೇಗೆ ವಿಧಿಸಬೇಕು ಎಂಬುದರ ಕುರಿತು ಠಾಕ್ರೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭವಾದರೆ ನಿರ್ಬಂಧಗಳನ್ನು ಕ್ರಮೇಣ ಹಿಂತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು 15 ದಿನಗಳ ಲಾಕ್‌ಡೌನ್ ಪ್ರಸ್ತಾಪಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನಿಖರವಾದ ಅವಧಿ 15 ದಿನಗಳು ಅಥವಾ ಏಪ್ರಿಲ್ ಅಂತ್ಯದವರೆಗೂ ಲಾಕ್‌ಡೌನ್‌ ಸಾಧ್ಯತೆ ಇದೆ ಎನ್ನಲಾಗಿದೆ. ಮುಖ್ಯಮಂತ್ರಿ ಉದ್ದವ್ ಠಾಕ್ರೆ ರಾಜ್ಯ ಕೋವಿಡ್ ಕಾರ್ಯಪಡೆಯೊಂದಿಗೆ ಭೇಟಿಯಾದ ನಂತರ ಭಾನುವಾರ ಘೋಷಿಸುವ ಸಾಧ್ಯತೆಯಿದೆ. ಸೋಮವಾರ ಸಂಜೆ ಸಂಪೂರ್ಣ ಲಾಕ್‌ಡೌನ್ ಜಾರಿಗೆ ಬರಬಹುದು ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಶನಿವಾರ 55,411 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಮುಂಬೈನಲ್ಲಿ 9,330 ಪ್ರಕರಣಗಳು ದಾಖಲಾಗಿವೆ. ಈ ವಾರ ರಾಜ್ಯದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದರಿಂದ ರಾಜ್ಯದಾದ್ಯಂತ ಹೊಸ ಪ್ರಕರಣಗಳಲ್ಲಿ ಅಲ್ಪ ಕುಸಿತ ಕಂಡಿದೆ. ರಾಜ್ಯದಲ್ಲಿ 5.36 ಲಕ್ಷ ಸಕ್ರಿಯ ಪ್ರಕರಣದಳಿವೆ. ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ 300 ಕ್ಕೂ ಹೆಚ್ಚು ಜನರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿಯೂ ಕೊರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹೀಗಾಗಿ, ರಾಜ್ಯದ ಪ್ರಮುಖ 07 ಪಟ್ಟಣಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದೆ. ಆದರೆ, ತಜ್ಞರ ಪ್ರಕಾರ ರಾತ್ರಿ ಕರ್ಫ್ಯೂ ಹೇರುವುದರಿಂದ ದಿನದ ವೇಳೆಯಲ್ಲಿ ಜನ ದಟ್ಟಣೆ ಜಾಸ್ತಿಯಾಗುವುದರಿಂದಾಗಿ ಕೊರೊನಾ ಮತ್ತಷ್ಟು ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಮತ್ತಷ್ಟು ಸೋಂಕಿತ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ರಾಜ್ಯದಲ್ಲಿ ಲಾಕ್‌ಡೌನ್‌ ಹೇರುವ ಯಾವುದೇ ಚಿಂತನೆ ಇಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಪರೀಕ್ಷೆಗಳು ಇದ್ದೇ ಇರುತ್ತೆ; ಬೇಸಿಗೆ ರಜೆ ಇಲ್ಲ; ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬದಲಾವಣೆ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights