ಉತ್ತರ ಪ್ರದೇಶ: ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಪಕ್ಷದ ಉಪಾಧ್ಯಕ್ಷ ಲಲಿತೇಶ್ ಪತಿ ತ್ರಿಪಾಠಿ

ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕಮಲಪತಿ ತ್ರಿಪಾಠಿಯವರ ಮೊಮ್ಮಗ ಲಲಿತೇಶ್ ಪತಿ ತ್ರಿಪಾಠಿ ಅವರು ಪಕ್ಷದ ಎಲ್ಲಾ ಸ್ಥಾನಗಳಿಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಗುರುವಾರ ಹೇಳಿದ್ದಾರೆ.

ಅವರು ತಮ್ಮ ಪ್ರಕಟಣೆಯ ಬಗ್ಗೆ ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಕಾಂಗ್ರೆಸ್‌ಗೆ ತಮ್ಮ “ರಕ್ತ ಮತ್ತು ಬೆವರು” ನೀಡಿದ ಕಾರ್ಯಕರ್ತರನ್ನು ಪಕ್ಷವು ಗೌರವಿಸದ ಕಾರಣ ಅವರು ಪಕ್ಷವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ.

ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಸಮಾಜವಾದಿ ಪಕ್ಷ ಸೇರುವ ಸಾಧ್ಯತೆಯಿದೆ ಎಂದು ಹಲವು ದಿನಗಳ ಹಿಂದೆಯೇ ಊಹಾಪೋಹಗಳು ಸುದ್ದಿಯಾಗಿದ್ದವು. ಇದೀಗ ಅವರು ಕಾಂಗ್ರೆಸ್‌ ತೊರೆಯುವುದಾಗಿ ಘೋಷಿಸಿದ್ದಾರೆ.

ಆದಾಗ್ಯೂ, ಅವರು ಸಧ್ಯಕ್ಕೆ ಯಾವುದೇ ಪಕ್ಷಕ್ಕೆ ಸೇರುವುದರ ಬಗ್ಗೆ ನಿರಾಕರಿಸಿದ್ದಾರೆ. ಅವರ ಬೆಂಬಲಿಗರೊಂದಿಗೆ ಸಮಾಲೋಚಿಸಿದ ನಂತರ ಅವರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರತಿಪಾದಿಸಿದ್ದಾರೆ.

ತ್ರಿಪಾಠಿ ಅವರು, ತಮ್ಮ ಕುಟುಂಬವು 100 ಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೆಸ್‌ಗೆ ಬದ್ಧತೆಯಿಂದ ದುಡಿದಿದೆ. ಪಕ್ಷದೊಂದಿಗೆ ತಮ್ಮ ಕುಟುಂಬ ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಆದರೆ, ಪ್ರಸ್ತುತ ಸಂದರ್ಭಗಳಲ್ಲಿ “ಪಕ್ಷಕ್ಕಾಗಿ ತಮ್ಮ ರಕ್ತ ಮತ್ತು ಬೆವರನ್ನು” ನೀಡಿದ ಕುಟುಂಬಗಳು ಮತ್ತು ಧೈರ್ಯಶಾಲಿ ಕಾರ್ಯಕರ್ತರನ್ನು ಪಕ್ಷವು  ಗೌರವಿಸುತ್ತಿಲ್ಲ. ಹೀಗಾಗಿ ತಮ್ಮ ಆತ್ಮಸಾಕ್ಷಿಯು ತಾವು ಪಕ್ಷದಲ್ಲಿ ಯಾವುದೇ ಸ್ಥಾನದಲ್ಲಿ ಮುಂದುವರಿಯಲು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

“ನನಗೆ ಹಲವು ಪ್ರಮುಖ ಜವಾಬ್ದಾರಿಗಳನ್ನು ನೀಡಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ” ಎಂದು ತ್ರಿಪಾಠಿ ಹೇಳಿದ್ದಾರೆ.

ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ಗೆ ಈ ಬೆಳವಣಿಗೆಯು ಒಂದು ದೊಡ್ಡ ಹೊಡೆತವಾಗಿದ್ದು, ಯಾವುದೇ ದೊಡ್ಡ ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಚುನಾವಣೆಯಲ್ಲಿ ಹೋರಾಡುವುದಾಗಿ ಪ್ರತಿಪಾದಿಸಿದೆ.

ಇದನ್ನೂ ಓದಿ: ಪೊಲೀಸರ ಗುಂಡಿಗೆ ಬಲಿಯಾದ ಪ್ರತಿಭಟನಾಕಾರನ ಮೇಲೆ ಹಲ್ಲೆ ನಡೆಸಿದ್ದ ಛಾಯಾಗ್ರಹಕನ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights