ಕಾನ್ಸಟೇಬಲ್ ಉದ್ಯೋಗದಲ್ಲಿದ್ದಾರೆ ಉನ್ನತ ಶೈಕ್ಷಣಿಕ ಅರ್ಹತೆಯುಳ್ಳ ಮಹಿಳೆಯರು!

ಸರ್ಕಾರಿ ನೌಕರಿ ಪಡೆಯುವುದು ತೀವ್ರ ಅವಶ್ಯಕತೆಯೋ ಅಥವಾ ಪೊಲೀಸ್ ಪಡೆಯಲ್ಲಿ ಕೆಲಸ ಮಾಡುವ ಉತ್ಸಾಹವೋ ತಿಳಿಯದು. ಏಕೆಂದರೆ, ಕರ್ನಾಟಕದಲ್ಲಿ ಉನ್ನತ ಶೈಕ್ಷಣಿಕ ಅರ್ಹತೆಯುಳ್ಳ ಹೆಚ್ಚು ಮಹಿಳೆಯರು ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ.

ಪೊಲೀಸ್ ತರಬೇತಿ ಅಕಾಡೆಮಿಯ ಆರನೇ ಬ್ಯಾಚ್‌ನಲ್ಲಿ ತರಬೇತಿ ಮುಗಿಸಿ ಮಂಗಳವಾರ ನಡೆದ ಪಾಸಿಂಗ್ ಔಟ್ ಪರೇಡ್ ಸಮಾರಂಭದಲ್ಲಿ ಭಾಗವಹಿಸಿದ್ದ ಒಟ್ಟು 242 ಮಹಿಳೆಯರಲ್ಲಿ, 38 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದರೆ, 182 ಮಂದಿ ಪದವೀಧರರಾಗಿದ್ದಾರೆ.

ಈ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿಯಾಗಿತ್ತು.ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಹೆಚ್ಚಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಎಂಟು ತಿಂಗಳ ಅವಧಿಯ ತರಬೇತಿಯನ್ನು ಪಡೆದಿದ್ದಾರೆ. 13 ಕಾನ್ಸ್‌ಟೇಬಲ್‌ಗಳು ಎಂಎ ಪದವಿ ಪಡೆದಿದ್ದರೆ, ಇತರರು ಎಂಎಸ್‌ಸಿ ಮತ್ತು ಎಂಕಾಂ ಪದವೀಧರರು. ಅಲ್ಲದೆ, 14 ಎಂಜಿನಿಯರಿಂಗ್ ಮುಗಿಸಿದ್ದರೆ, 06 ಮಂದಿ ಬಿಬಿಎ ಮತ್ತು ಬಿಸಿಎ ಪದವೀಧರರು.

ಈ 242 ಮಹಿಳಾ ಕಾನ್ಸ್‌ಟೇಬಲ್‌ಗಳಲ್ಲಿ 214 ಜನರು ಗ್ರಾಮೀಣ ಪ್ರದೇಶಗಳಿಂದ ಬಂದವರು, 28 ಮಂದಿ ನಗರ ಭಾಗಗಳವರು. ಅವರನ್ನು ಈಗ ಚಾಮರಾಜನಗರ, ಮೈಸೂರು, ತುಮಕೂರು, ಕೊಡಗು, ರಾಯಚೂರು, ಮಂಗಳೂರು, ಕಲಬುರಗಿ ಮತ್ತು ರಾಜ್ಯದ ಇತರ ಪೊಲೀಸ್ ಘಟಕಗಳಿಗೆ ನೇಮಿಸಲಾಗಿದೆ.

ಹೊಸ ನೇಮಕಾತಿಗಳಲ್ಲಿ ಶೈಕ್ಷಣಿಕವಾಗಿ ವಿಶ್ವವಿದ್ಯಾನಿಲಯದ ಟಾಪರ್‌ಗಳೂ ಸೇರಿದ್ದಾರೆ. ಆಲ್ ರೌಂಡ್ ಬೆಸ್ಟ್ ಟ್ರೇನಿ ಪ್ರಶಸ್ತಿಯನ್ನು ಪಡೆದ ಲತಾ ಎಂ ಅವರು ಬಿಎ ಪದವಿಯಲ್ಲಿ ತನ್ನ ಜಿಲ್ಲೆಗೆ ಟಾಪರ್‌ಆಗಿದ್ದರು. ಅವರು ಬಿಎ ಮುಗಿದ ನಂತರ ಕಾನ್ಸ್ಟೇಬಲ್ ಪರೀಕ್ಷೆ ಬರೆದು ತೇರ್ಗಡೆಯಾದರು.

ಅವರು ಮಾತ್ರವಲ್ಲದೆ, ತರಬೇತಿಯ ಸಮಯದಲ್ಲಿ ಗುಂಡಿನ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ಸುಜಾತ ಎಸ್ ಬಿರಾದಾರ್, ಚಂದ್ರಕಲಾ ಬಿರಾದಾರ ಮತ್ತು ಚಿತ್ರಾ ಜಿ – ಈ ಮೂವರೂ ತಮ್ಮ ತಮ್ಮ ಹಳ್ಳಿಯ ಮೊದಲ ಪೊಲೀಸ್ ಮಹಿಳೆಯರಾಗಿದ್ದಾರೆ.

ಪಾಸಿಂಗ್ ಔಟ್ ಪರೇಡ್‌ನಲ್ಲಿ ಭಾಗವಹಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಅರ್ಹ ಮಹಿಳೆಯರು ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಹಿರಿಯ ಪೊಲೀಸ್ ಅಧಿಕಾರಿಗಳು ಇದು ಒಳ್ಳೆಯ ಸಂಕೇತವಾಗಿದ್ದರೂ, ಹೆಚ್ಚಿನವರು ಇತರ ಸ್ಪರ್ಧಾತ್ಮಕ ಅಥವಾ ಅಂತರ-ವಿಭಾಗದ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಪರೀಕ್ಷೆ ಪಾಸು ಮಾಡಿ, ಈ ಹುದ್ದೆಗಳನ್ನು ಮತ್ತೆ ಖಾಲಿ ಮಾಡಿ ಹೋಗುತ್ತಾರೆ ಎಂದು ಹೇಳಿದ್ದಾರೆ

ಇದನ್ನೂ ಓದಿ: ತಮಿಳುನಾಡು ದೇವಾಲಯಗಳಲ್ಲಿ ಮಹಿಳೆಯರು – ಅಬ್ರಾಹ್ಮಣರಿಗೆ ಅರ್ಚಕ ಹುದ್ದೆ; ರಾಜ್ಯದಲ್ಲೂ ಜಾರಿಗೆ ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights