ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ : ತಾಯಿಯಿಂದಲೇ 9 ತಿಂಗಳ ಮಗು ಹತ್ಯೆ ದೃಢ!

ಬೆಂಗಳೂರಿಗರನ್ನ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ಐವರು ಸಾವು ಪ್ರಕರಣದಲ್ಲಿ ತಾಯಿಯಿಂದಲೇ 9 ತಿಂಗಳ ಮಗು ಹತ್ಯೆಯಾದ ಮಾಡಿರುವುದು ದೃಢವಾಗಿದೆ.

ನಗರದ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದ ಪ್ರಕರಣದ ಮೆಡಿಕಲ್ ರಿಪೋರ್ಟ್‌ ಆಧಾರದ ಮೇಲೆ ಮಗುವನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ. ತಾಯಿ ಸಿಂಧೂರಾಣಿಯಿಂದಲೇ 9 ತಿಂಗಳ ಮಗು ಹತ್ಯೆಯಾಗಿದೆ ಎಂದು ಮೆಡಿಕಲ್ ರಿಪೋರ್ಟ್ ನಲ್ಲಿ ಸ್ಪಷ್ಟವಾಗಿದೆ. ಹಸಿರು ಬಟ್ಟೆಯಿಂದ ಮಗುವಿನ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಮಗುವನ್ನು ಹತ್ಯೆ ಮಾಡಿ ಬಳಿಕ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗುವಿನ ಕೊಲೆ ರಿಪೋರ್ಟ್ ಬಂದ ಹಿನ್ನೆಲೆ ಮತ್ತೊಂದು ಎಫ್​ಐಆರ್ ದಾಖಲು ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.

ಪ್ರಕರಣದ ಹಿನ್ನೆಲೆ :-

ಕಳೆದ ಕೆಲ ವಾರಗಳ ಹಿಂದೆ ಬೆಂಗಳೂರಿನ ತಿಗಳರಪಾಳ್ಯದ ಬ್ಯಾಡರಹಳ್ಳಿಯ 4ನೇ ಕ್ರಾಸ್ ನ ಐಷಾರಾಮಿ ಮನಯಲ್ಲಿ ಐವರು ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದರು . ಭಾರತಿ(50), ಮಧು ಸಾಗರ್(27),  ಸಿಂಚನಾ(33) ಮತ್ತು ಸಿಂಧುರಾಣಿ(30) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆಯಲ್ಲಿ ಒಂಬತ್ತು ತಿಂಗಳ ಮಗು ಕೂಡಾ ಸಾವನ್ನಪ್ಪಿದೆ. ಈ ಘಟನೆಯಲ್ಲಿ 3 ವರ್ಷದ ಮಗುವೊಂದು ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿತ್ತು. ಕೌಟುಂಬಿಕ ಕಲಹಗಳೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ತಮ್ಮೆಲ್ಲರ ಆತ್ಮಹತ್ಯೆಗೆ ತಂದೆ ಶಂಕರ್ ಕಾರಣವೆಂದು ಮಕ್ಕಳಾದ ಮಧು ಸಾಗರ್, ಸಿಂಚನಾ ಮತ್ತು ಸಿಂಧುರಾಣಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಶಂಕರ್ ಗೆ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧವಿತ್ತು ಎಂದು ಆರೋಪಿಸಿದ್ದಾರೆ. ಹೀಗಾಗಿ ಶಂಕರ್ ತಾಯಿಗೆ ಹಿಂಸೆ ನೀಡುತ್ತಿದ್ದರು ಎಂದು ಮಗ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆ ಯಜಮಾನ ಶಂಕರ್ ಮನೆಯಲ್ಲಿರಲಿಲ್ಲ. ಮನೆಗೆ ಫೋನ್ ಮಾಡಿದ್ದ ವೇಳೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆಯ ಬಳಿ ಬಂದು ಮನೆಬಾಗಿಲ ಬಡಿದಿದ್ದಾರೆ. ಆದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ  ಶಂಕರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಶಂಕರ್ ಮಕ್ಕಳ ಆತ್ಮಹತ್ಯೆಗೆ ತನ್ನ ಪತ್ನಿ ಭಾರತಿಯೇ ಕಾರಣ ಎಂದು ಆರೋಪಿಸಿದ್ದರು. ಆದರೆ ಮೂವರು ಮಕ್ಕಳು ಬರೆದ ಡೆತ್ ನೋಟ್ ನಿಂದ ಸತ್ಯ ಬಯಲಾಗಿದೆ.

ಆತ್ಮಹತ್ಯೆಗೆ ಶರಣಾಗಿದ್ದ ಮಕ್ಕಳು ತನ್ನ ತಂದೆ ಶಂಕರ್ ವಿರುದ್ಧ ದೂರಿದ್ದರು. ಶಂಕರ್ ವಿರುದ್ಧ ಮಕ್ಕಳು ಡೆತ್‌ನೋಟ್‌ನಲ್ಲಿ ಆರೋಪಿಸಿದ ಹಿನ್ನೆಲೆ ಶಂಕರ್‌ಗೆ ಸೇರಿದ ಲ್ಯಾಪ್‌ಟಾಪ್, ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಶಂಕರ್ ಅಳಿಯಂದಿರಿಗೆ ಸೇರಿದ ಮೊಬೈಲ್‌ ಕೂಡ ವಶಕ್ಕೆ ಪಡೆಯಲಾಗಿದೆ. ಲ್ಯಾಪ್‌ಟಾಪ್, ಮೊಬೈಲ್ ರಿಟ್ರೀವ್‌ಗೆ ಪೊಲೀಸರಿಂದ ಸಿದ್ಧತೆ ನಡೆಯುತ್ತಿದೆ. ಸಿಐಡಿ ಸೈಬರ್ ಸೆಲ್ ಎಕ್ಸ್‌ಪರ್ಟ್‌ನಿಂದ ರಿಟ್ರೀವ್‌ಗೆ ತಯಾರಿ ನಡೆಸಲಾಗುತ್ತಿದೆ. ಲ್ಯಾಪ್‌ಟಾಪ್‌ನಲ್ಲಿ ಶಂಕರ್ ಚಾಟಿಂಗ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಹಿಳೆಯರ ಜತೆ ಚಾಟಿಂಗ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬ್ಯಾಡರಹಳ್ಳಿ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights