ರೈತರ ಮೇಲೆ ಸರ್ಕಾರ ದರ್ಪ; ಪ್ರತಿಭಟನಾನಿರತ ರೈತರ ಮೇಲೆ ಜಲ ಫಿರಂಗಿ ಬಳಸಿದ ಹರಿಯಾಣ ಸರ್ಕಾರ

ಹರಿಯಾಣದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಲ್ಲಿನ ಸರ್ಕಾರದ ದೌರ್ಜನ್ಯ ಹೆಚ್ಚುತ್ತಲೇ ಇದೆ. ಇಂದು (ಶುಕ್ರವಾರ) ಹರಿಯಾಣದ ಜಜ್ಜಾರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಮತ್ತೆ ಪೊಲೀಸ್ ಸಿಬ್ಬಂದಿ ಜಲ ಫಿರಂಗಿ ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದಾರೆ.

ಜಜ್ಜಾರ್‌ನಲ್ಲಿ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರ ಕಾರ್ಯಕ್ರಮದ ವಿರುದ್ಧ ರೈತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ರೈತರನ್ನು ತಡೆಯಲು ಭದ್ರತಾ ಸಿಬ್ಬಂದಿ ಜಲ ಫಿರಂಗಿ ಬಳಸಿದ್ದಾರೆ.

ಕಪ್ಪು ಧ್ವಜಗಳನ್ನು ಹಿಡಿದ ರೈತರು ಮತ್ತು ಮಹಿಳೆಯರು ಭಾರಿ ಸಂಖ್ಯೆಯಲ್ಲಿ ನಿಯೋಜನೆಯಾಗಿದ್ದ ಭದ್ರತಾ ಸಿಬ್ಬಂದಿಯನ್ನು ಕಂಡು ಹಿಂದೆ ಸರಿಯದೆ ಮುನ್ನುಗ್ಗುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ:ರೈತರು v/s ಹರ್ಯಾಣ ಸರ್ಕಾರ; ರೈತರನ್ನು ಒಕ್ಕಲೆಬ್ಬಿಸಲು ಪ್ರಭುತ್ವದ ಹುನ್ನಾರ!

ಕಳೆದ ಒಂದು ವರ್ಷದಿಂದಲೂ ವಿವಾದಿತ ಕೃಷಿ ಕಾನೂನುಗಳ ರದ್ದಿಗಾಗಿ ಹೋರಾಡುತ್ತಿರುವ ರೈತರು ಹರಿಯಾಣದಲ್ಲಿ ಖಟ್ಟರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ ಯಾವುದೇ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ನಡೆಯಲು ಬಿಡದೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಈ ಹಿನ್ನೆಲೆಯಲ್ಲಿ ಇಂದಿನ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರ ಕಾರ್ಯಕ್ರಮಕ್ಕೂ ಭಾರಿ ಭದ್ರತೆ ಒದಗಿಸಲಾಗಿತ್ತು. ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಹಲವು ಮಾರ್ಗಗಳನ್ನು ಬದಲಾಯಿಸಲಾಗಿತ್ತು. ಆದರೂ ಪಟ್ಟು ಬಿಡದ ರೈತರು ಕಾರ್ಯಕ್ರಮ ನಡೆಸದಂತೆ ಪ್ರತಿಭಟನೆ ನಡೆಸಿದ್ದಾರೆ.

ರೈತರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉಪ ಆಯುಕ್ತ ಶ್ಯಾಮ್ ಲಾಲ್ ಪೂನಿಯಾ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸದಂತೆ ರೈತರಲ್ಲಿ ಮನವಿ ಮಾಡಿದ್ದಾರೆ.

“ನೀವು ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟಿಸಬಹುದು. ನಾವೆಲ್ಲ ನಿಮ್ಮ ಮಕ್ಕಳು. ನಾವೀಗ ನಾವು ಸರ್ಕಾರಿ ಕರ್ತವ್ಯದಲ್ಲಿದ್ದೇವೆ. ದಯವಿಟ್ಟು ನಮ್ಮನ್ನು ಕರ್ತವ್ಯ ನಿರ್ವಹಿಸುವುದರಿಂದ ತಡೆಯಬೇಡಿ. ದಯವಿಟ್ಟು ಕಾರ್ಯಕ್ರಮಕ್ಕೆ ಅಡ್ಡಿಪಡಿಸದೆ ನಿಮ್ಮ ಪ್ರತಿಭಟನೆಯನ್ನು ಮುಂದುವರೆಸಿ” ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಕರ್ನಾಲ್‌ನಲ್ಲಿ ರೈತರು ಪ್ರತಿಭಟನೆ ನಡೆಸುವ ವೇಳೆ ರೈತರ ತಲೆ ಒಡೆಯಿರಿ ಎಂದು ಅಧಿಕಾರಿಯೊಬ್ಬ ಆದೇಶ ನೀಡಿ, ಹತ್ತಕ್ಕೂ ಹೆಚ್ಚು ರೈತರಿಗೆ ಗಂಭೀರ ಗಾಯಗಳಾಗಿದ್ದವು. ಈ ವಿಚಾರದಿಂದ ಖಟ್ಟರ್‌ ಸರ್ಕಾರ ಭಾರಿ ಟೀಕೆಗೆ ಒಳಗಾಗಿತ್ತು.

ಇದನ್ನೂ ಓದಿ: Fact Check: ಕಿಸಾನ್ ಮಹಾಪಂಚಾಯತ್‌ನಲ್ಲಿ ರೈತರು ಮದ್ಯಕ್ಕಾಗಿ ಕಿತ್ತಾಡುತ್ತಿದ್ದರು ಎಂಬುದು ಸುಳ್ಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights