ಅಫ್ಘಾನಿಸ್ತಾನ ಗಡಿಗಳಲ್ಲಿ ಆತ್ಮಹತ್ಯಾ ಬಾಂಬರ್‌ಗಳ ನಿಯೋಜಿಸಲು ತಾಲಿಬಾನ್ ನಿರ್ಧಾರ!
ತಾಲಿಬಾನ್ ಆತ್ಮಾಹುತಿ ಬಾಂಬರ್‌ಗಳ ವಿಶೇಷ ಬೆಟಾಲಿಯನ್ ಅನ್ನು ರಚಿಸಿದ್ದು, ಅದನ್ನು ಅಫ್ಘಾನಿಸ್ತಾನದ ಗಡಿಗಳಲ್ಲಿ ವಿಶೇಷವಾಗಿ ಬಡಕ್ಷಾನ್ ಪ್ರಾಂತ್ಯದಲ್ಲಿ ನಿಯೋಜಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಉಪ ಗವರ್ನರ್ ಮುಲ್ಲಾ ನಿಸಾರ್ ಅಹ್ಮದ್ ಅಹ್ಮದಿ ತಜಾಕಿಸ್ತಾನ್ ಮತ್ತು ಚೀನಾದ ಗಡಿಯಾಗಿರುವ ಈಶಾನ್ಯ ಪ್ರಾಂತ್ಯದ ಬದಾಕ್ಷಾನ್ ನಲ್ಲಿ ಆತ್ಮಾಹುತಿ ಬಾಂಬರ್ ಗಳ ಬೆಟಾಲಿಯನ್ ಸೃಷ್ಟಿಯ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಈ ಬೆಟಾಲಿಯನ್ ಗೆ ಲಷ್ಕರ್-ಎ-ಮನ್ಸೂರಿ (‘ಮನ್ಸೂರ್ ಸೇನೆ’) ಎಂದು ಹೆಸರಿಸಲಾಗಿದೆ. ಇವರನ್ನು ದೇಶದ ಗಡಿಗಳಿಗೆ ನಿಯೋಜಿಸಲಾಗುವುದು ಎಂದು ಅಹ್ಮದಿ ಹೇಳಿದ್ದಾರೆ. ಬೆಟಾಲಿಯನ್ ಒಂದೇ ಹಿಂದಿನ ಅಫ್ಘಾನ್ ಸರ್ಕಾರದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿ ನಡೆಸುತ್ತದೆ ಎಂದು ಅಹ್ಮದಿ ಅವರು ಹೇಳಿದ್ದಾರೆ.
“ಈ ಬೆಟಾಲಿಯನ್ ಇಲ್ಲದಿದ್ದರೆ ಅಮೆರಿಕದ ಸೋಲು ಸಾಧ್ಯವಿಲ್ಲ. ಈ ಧೈರ್ಯಶಾಲಿ ಪುರುಷರು ಸ್ಫೋಟಕ ನಡುಕೋಟುಗಳನ್ನು ಧರಿಸುತ್ತಾರೆ ಮತ್ತು ಅಫ್ಘಾನಿಸ್ತಾನದಲ್ಲಿರುವ ಯುಎಸ್ ನೆಲೆಗಳನ್ನು ಸ್ಫೋಟಿಸುತ್ತಾರೆ. ಇವರು ಅಕ್ಷರಶಃ ಭಯವಿಲ್ಲದ ಜನರು. ಸದಾ ಕಾಲ ತಮ್ಮನ್ನು ಅರ್ಪಿಸಿಕೊಳ್ಳಲು ಸಿದ್ಧರಿರುತ್ತಾರೆ” ಎಂದು ಅವರು ಹೇಳಿದರು.
ಲಷ್ಕರ್-ಎ-ಮನ್ಸೂರಿಯ ಜೊತೆಗೆ, ಬದರಿ 313 ಮತ್ತೊಂದು ಬೆಟಾಲಿಯನ್ ಆಗಿದ್ದು, ಇದು ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿರುವ ಅತ್ಯಂತ ಸುಸಜ್ಜಿತ ಮತ್ತು ಆಧುನಿಕ ಸೇನಾ ಗುಂಪುಗಳಲ್ಲಿ ಒಂದಾಗಿದೆ ಎಂದು ಖಾಮಾ ಪ್ರೆಸ್ ಪ್ರಕಟಣೆ ಹೇಳಿದೆ.
ಬಾದ್ರಿ 313 ಕೂಡ ಎಲ್ಲಾ ಆತ್ಮಾಹುತಿ ಬಾಂಬರ್‌ಗಳನ್ನು ಒಳಗೊಂಡಿದೆ ಎಂದು ಖಾಮಾ ಪ್ರೆಸ್ ಹೇಳಿದೆ.