ಲಖಿಂಪುರ ರೈತರ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಭುಗಿಲೆದ್ದ ಆಕ್ರೋಶ; ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಆಗ್ರಹ!

ಉತ್ತರ ಪ್ರದೇಶದದಲ್ಲಿ ಲಖಿಂಪುರ ಖೇರಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಕೇಂದ್ರ ಸಹಾಯಕ ಗೃಹ ಸಚಿವರ ಬೆಂಗಾವಲು ಪಡೆಯ ಎರಡು ಎಸ್‌ಯುವಿಗಳು ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿದೆ. ಸರ್ಕಾರದ ಕ್ರೌರ್ಯವನ್ನು ಖಂಡಿಸಿ, ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ವೇದಿಕೆಯು ಬೃಹತ್ ಪ್ರತಿಭಟನೆ ನಡೆಸಿದೆ.

ನಗರದ ಮೈಸೂರು ಬ್ಯಾಂಕ್‌ ಸರ್ಕಲ್‌ ಬಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು, ಕೇಂದ್ರ ಸಚಿವ ಅಜಯ್‌‌ ಮಿಶ್ರಾ ಅವರ ಮಗನಾದ ಆಶೀಶ್‌‌ ಮಿಶ್ರಾನನ್ನು ಬಂಧಿಸಬೇಕು. ಸಚಿವ ಸ್ಥಾನದಿಂದ ಅಜಯ್‌‌ ಮಿಶ್ರಾರನ್ನು ಕಿತ್ತೊಗೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಸಿದ್ದಾರೆ.

ಲಖೀಂಪುರ ಖೇರಿಯಲ್ಲಿ ನಡೆದಿರುವ ರೈತರ ಮೇಲಿನ ದಾಳಿ ಮತ್ತು ಮಾರಣಹೋಮಕ್ಕೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಮತ್ತು ಈ ಘಟನೆಯ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ಎಸಗಿರುವ ಉತ್ತರಪ್ರದೇಶ ಸರ್ಕಾರದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕವು ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಮನವಿಯನ್ನೂ ಕಳಿಸಿದೆ.

ಘಟನೆಯಲ್ಲಿ ನಾಲ್ವರು ರೈತರು ಹತ್ಯೆಯಾಗಿದ್ದಾರೆ. ಇನ್ನೂ ಹಲವು ರೈತ ನಾಯಕರು ಮತ್ತು ಪ್ರತಿಭಟನಾ ನಿರತ ರೈತರು ಗಂಭೀರ ಸ್ವರೂಪದಲ್ಲಿ ಘಾಯಗೊಳಿಸಿರುವ ಹೀನಕೃತ್ಯಕ್ಕೆ ಕಾರಣರಾದ ಸಚಿವರ ಮೇಲೆ ಮತ್ತು ಅವರ ಬೆಂಗಾವಲು ಪಡೆಯ ಮೇಲೆ ಉತ್ತರ ಪ್ರದೇಶ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಪ್ರತಿಭಟನಾಕಾರರು ಅಗ್ರಹಿಸಿದ್ಧಾರೆ.

ಇತ್ತೀಚೆಗೆ, ಸಚಿವ ಸಚಿವ ಅಜಯ್ ಮಿಶ್ರಾ ತೆನಿ ಅವರು ರೈತರ ಪ್ರತಿಭಟನೆಯ ಕುರಿತು ಬಹಿರಂಗ ಬೆದರಿಕೆ ಹಾಕಿದ್ದರು. ಅವರ ಬೆದರಿಕೆಯನ್ನು ಖಂಚಿಸಿ, ಅವರು ಪ್ರತಿನಿಧಿಸುವ ಕ್ಷೇತ್ರವಾದ ಲಖೀಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಚಿವರ ಬೆಂಗಾವಲು ಪಡೆಯ ವಾಹನ ಹರಿಸುವ ಮೂಲಕ ತಮ್ಮ ಬೆದರಿಕೆಯನ್ನು ಸಚಿವ ಸತ್ಯಗೊಳಿಸಿದ್ದಾರೆ. ಈ ಕೃತ್ಯ ಭಾರತದ ಜನರಿಗೆ ಸಂವಿಧಾನ ಕೊಡಮಾಡಿರುವ ಪ್ರತಿಭಟನೆಯ ಹಕ್ಕಿನ ತೀವ್ರ ಉಲ್ಲಂಘನೆಯೂ ಆಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ಧಾರೆ.

ಈ ಘಟನೆ ನಡೆದ ನಂತರವೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಥವಾ ಯಾವುದೇ ಉನ್ನತಾಧಿಕಾರಿಗಳು ಜವಾಬ್ದಾರಿಯುತ ವರ್ತನೆ ತೋರಿಲ್ಲ. ಗಾಯಗೊಂಡ ರೈತರನ್ನು ಅಥವಾ ಅವರ ಕುಟುಂಬಗಳನ್ನು ಸಂಪರ್ಕಿಸುವುದಾಗಲೀ, ಘಟನೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸುವ ಭರವಸೆಯನ್ನಾಗಲೀ ನೀಡಿಲ್ಲ. ಇದು ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.

ಇಂತಹ ಗಂಭೀರ ಪ್ರಕರಣದ ಸಂದರ್ಭದಲ್ಲಿ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಬೇಕು.  ಉತ್ತರ ಪ್ರದೇಶದ ಸರ್ಕಾರ ಮತ್ತು ಹಿಂಸೆಗೆ ಕಾರಣರಾದ ಸಚಿವರ ಮೇಲೆ ಕೂಡಲೇ ಕ್ರಮಕೂಗೊಳ್ಳುವ ಭರವಸೆ ನೀಡಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವರ ಮಗನ ಕಾರು ಹರಿದು ನಾಲ್ವರು ಪ್ರತಿಭಟನಾನಿರತ ರೈತರು ಸಾವು : ಇಂದು ದೇಶಾದ್ಯಂತ ಪ್ರತಿಭಟನೆಗೆ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights