ರೈತ ಪರ ಟ್ವೀಟ್: ವರುಣ್ ಗಾಂಧಿ, ಮೇನಕಾ ಗಾಂಧಿಯನ್ನು ಕಾರ್ಯಕಾರಿಣಿ ಪಟ್ಟಿಯಿಂದ ತೆಗೆದ ಬಿಜೆಪಿ!

ಲಖಿಂಪುರ್‌ ಖೇರಿ ಹತ್ಯಾಕಾಂಡದಲ್ಲಿ ರೈತರ ಪರವಾಗಿ ಟ್ವೀಟ್ ಮಾಡುತ್ತಿರುವ ಬಿಜೆಪಿ ನಾಯಕ ವರುಣ್ ಗಾಂಧಿ ಮತ್ತು ಅವರ ತಾಯಿ ಮೇನಕಾ ಗಾಂಧಿ ಅವರನ್ನು ಇಂದು ಬಿಡುಗಡೆಯಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಿಂದ ಕೈಬಿಡಲಾಗಿದೆ.

ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಘಟನೆಗಳನ್ನು ಖಂಡಿಸಿ ಬಿಜೆಪಿ ಸಂಸದ ಪದೇ ಪದೇ ಟ್ವೀಟ್ ಮಾಡುತ್ತಿದ್ದರು. ಈ ಕಾರಣದಿಂದ ಅವರನ್ನು ಕೈಬಿಡಲಾಗಿದೆ ಎನ್ನುವ ವದಂತಿಗಳು ಹರಡಿದ್ದು, ಬಿಜೆಪಿಯು ಆರೋಪವನ್ನು ತಳ್ಳಿ ಹಾಕಿದೆ.

ಬಿಜೆಪಿ ಗುರುವಾರ 80 ಸದಸ್ಯರೊಂದಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ. ಇಬ್ಬರು ಪ್ರಮುಖ ನಾಯಕರಾದ ಪಕ್ಷದ ಸಂಸದ ವರುಣ್ ಗಾಂಧಿ ಮತ್ತು ಮಾಜಿ ಕೇಂದ್ರ ಸಚಿವ ಚೌಧರಿ ಬೀರೇಂದ್ರ ಸಿಂಗ್ ಅವರನ್ನೂ ಹೊರಗಿಟ್ಟಿದೆ. ಈ ಇಬ್ಬರೂ ಒಕ್ಕೂಟ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಎಎಪಿಯನ್ನು ಎದುರಿಸಲು ‘ಆಮ್ ಆದ್ಮಿ ಅವತಾರ್’?; ಸಾಮಾನ್ಯರತ್ತ ಹೊರಟ ಪಂಜಾಬ್‌ ಚನ್ನಿ ಸರ್ಕಾರ!

ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರನ್ನು ಒಳಗೊಂಡಂತೆ, ಪಕ್ಷದ ಹಿರಿಯರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸಮಿತಿಯ ಸದಸ್ಯರಾಗಿದ್ದಾರೆ.

ಗುರುವಾರ ಘಟನೆಯ ಸ್ಪಷ್ಟ ಮತ್ತು ದೀರ್ಘ ವಿಡಿಯೊವನ್ನು ಟ್ವೀಟ್ ಮಾಡಿರುವ ವರುಣ್‌ ಗಾಂಧಿ, “ವೀಡಿಯೊ ಅತ್ಯಂತ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆ ಮಾಡುವ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಅಂದು ಚೆಲ್ಲಿದ ರೈತರ ಮುಗ್ಧ ರಕ್ತಕ್ಕೆ ಹೊಣೆಗಾರಿಕೆ ವಹಿಸಬೇಕು. ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿ ಹಠ ಮತ್ತು ಕ್ರೌರ್ಯದ ಸಂದೇಶ ಪ್ರವೇಶಿಸುವ ಮೊದಲು ನ್ಯಾಯ ಒದಗಿಸಬೇಕು” ಎಂದು ಹೇಳಿದ್ದಾರೆ.

ಮಂಗಳವಾರವೂ ಘಟನೆಯ ಬಗ್ಗೆಗಿನ ಸಣ್ಣ ವೈರಲ್ ವಿಡಿಯೊವನ್ನು ಹಂಚಿಕೊಂಡಿದ್ದ ವರುಣ್‌, “ಲಖಿಂಪುರ್ ಖೇರಿಯಲ್ಲಿ ಉದ್ದೇಶಪೂರ್ವಕವಾಗಿ ವಾಹನವನ್ನು ರೈತರ ಮೇಲೆ ಹರಿಸಿರುವ ಈ ವಿಡಿಯೋ ಎಲ್ಲರ ಆತ್ಮವನ್ನೂ ಕಲಕುತ್ತದೆ. ಪೊಲೀಸರು ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿ ಈ ವಾಹನಗಳ ಮಾಲೀಕರು, ಅದರಲ್ಲಿ ಕುಳಿತಿರುವ ಜನರು ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು” ಎಂದು ಬರೆದಿದ್ದರು.

ರೈತರ ಪರವಾಗಿ ಟ್ವೀಟ್ ಮಾಡಿದ್ದ ಕಾರಣ ತಾಯಿ ಮಗನನ್ನು ಕಾರ್ಯಕಾರಿಣಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಶೇರ್‌ ಮಾಡಲಾಗುತ್ತಿದೆ.

ಇದನ್ನೂ ಓದಿ: ಲಖಿಂಪುರ್ ಖೇರಿಯಲ್ಲಿ ಏನಾಯ್ತು? : ಕ್ರಿಸ್ಟಲ್ ಕ್ಲಿಯರ್ ವಿಡಿಯೋ ಹಂಚಿಕೊಂಡ ಬಿಜೆಪಿ ಸಂಸದ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights