ಬೆಂಗಳೂರಿನ ಆಪಾರ್ಟ್ ಮೆಂಟ್ ನ ಮೇಲ್ಛಾವಣಿಯಲ್ಲಿ ಬೃಹತ್ ಸೌರ ವಿದ್ಯುತ್ ಸ್ಥಾವರ ಸ್ಥಾಪನೆ!
ಪ್ರಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ನೀರನ್ನು ಮತ್ತು ಕಸವನ್ನು ರೀಸೈಕಲ್ ಮಾಡುವ ಮೂಲಕ ಹೆಸರಾಗಿದ್ದ ಬೆಂಗಳೂರಿನ ಯಶವಂತಪುರದಲ್ಲಿರುವ ಬ್ರಿಗೇಡ್ ಗೇಟ್ ವೇ ಆಪಾರ್ಟ್ ಮೆಂಟ್ ನಿವಾಸಿಗಳು ಮತ್ತೊಂದು ಕ್ರಾಂತಿಕಾರಕ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ಹೌದು… ಬ್ರಿಗೇಡ್ ಗೇಟ್ ವೇ ಆಪಾರ್ಟ್ ಮೆಂಟ್ ನಿವಾಸಿಗಳ ಸಂಘ ಗ್ರೀನ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ ಮೊಟ್ಟ ಮೊದಲ ಬಾರಿ ಬ್ರಿಗೇಡ್ ಗೇಟ್ ವೇ ಆಪಾರ್ಟ್ ಮೆಂಟ್ ನ ಮೇಲ್ಛಾವಣಿಯಲ್ಲಿ ರೆನ್ ಎಕ್ಸೆಲ್ ಇಕೊಟೆಕ್ ಸಂಸ್ಥೆಯು ನಿರ್ಮಾಣ ಮಾಡಿರುವ ಬೃಹತ್ ಸೌರ ವಿದ್ಯುತ್ ಸ್ಥಾವರನ್ನು ಸ್ಥಾಪಿಸಿದೆ. ಈ ಮೂಲಕ ಅಪಾರ್ಟ್‌ಮೆಂಟ್ ಛಾವಣಿಯ ಮೇಲ್ಭಾಗದ ಜಾಗ ಅಥವಾ ವಸತಿ ಮೇಲ್ಛಾವಣಿಯ ಜಾಗವನ್ನು ಹೇಗೆ ಸೋಲಾರ್ ಶಕ್ತಿಯ ಉತ್ಪಾದನೆಗೆ ಉಪಯೋಗಿಸಬಹುದು ಎನ್ನುವುದನ್ನು ಸಾಬೀತು ಮಾಡಿದ ಎಕ್ಸ್‌ಸೋಲ್ ಇಕೋಟೆಕ್ ಸಂಸ್ಥೆಯ ಮಾಲೀಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಿವಾಸ್ ಕುಮಾರ್, ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮಾಲೀಕರ ಸಂಘಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನು ಉದ್ಘಾಟಿಸಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವಥ ನಾರಾಯಣ, ” ಬ್ರಿಗೇಡ್ ಗೇಟ್ ವೇ ನಿವಾಸಿಗಳು ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಪ್ರಕೃತಿಯನ್ನು ಕಾಪಾಡುವ ದೃಷ್ಟಿಯಿಂದ ಹಲವಾರು ಮಹತ್ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ನೀರು, ಕಸ ರೀಸೈಕಲ್ ಮಾಡುವುದರ ಜೊತೆಗೆ ಕರೆಂಟ್ ಉತ್ಪಾದನೆಗೂ ಸಹ ಅವರು ಸ್ವಯಂ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯವಾಗಿ ಹೇಳಬೇಕು ಅಂದ್ರೆ ಭಾರತದಲ್ಲಿ ಅತಿ ಹೆಚ್ಚು ಕರೆಂಟ್ ಉತ್ಪಾದನೆ ಮಾಡುತ್ತಿರುವ ಅಪಾರ್ಟ್ ಮೆಂಟ್ ಇದು. ಇಲ್ಲಿ ೩೫೪.೪ ಕಿಲೊ ವ್ಯಾಟ್ ಕರೆಂಟ್ ಉತ್ಪಾದನೆ ಮಾಡುತ್ತಿದ್ದಾರೆ” ಎಂದು ಅಪಾರ್ಟ್ ಮೇಂಟ್ ನಿವಾಸಿಗಳ ಕಾರ್ಯದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಜೊತೆಗೆ “ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಂಧನ ಉತ್ಪದನೆ ಮಾಡುವ ಮೂಲಕ ನಾವು ನೇರವಾಗಿ ಸರ್ಕಾರಕ್ಕೆ ಸಹಾಯ ಮಾಡಬಹುದಾಗಿದೆ. ಭವಿಷ್ಯದಲ್ಲಿ ಸೌರವಿದ್ಯುತ್ ನಮ್ಮ ಏಕೈಕ ನವೀಕರಿಸಬಹುದಾದ ಶಕ್ತಿ ಮೂಲವಾದ ಕಾರಣ ಸಾಧ್ಯವಾದಷ್ಟು ನಾವು ನಮ್ಮ ಸಂಪನ್ಮೂಲಗಳನ್ನು ಬಳಸಿಕೊಳ್ಳುವತ್ತ ಚಿಂತಿಸಬೇಕು ಎಂದು ಎಕ್ಸ್‌ಸೋಲ್ ಇಕೋಟೆಕ್ ಸಂಸ್ಥೆಯ ಮಾಲೀಕರು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಎನ್ ಎಲ್, “ಅಂದಾಜಿನ ಪ್ರಕಾರ ಬ್ರಿಗೇಡ್ ಗೇಟ್ ವೇ ರೂಫ್ ಟಾಪ್ ಪವರ್ ಪ್ಲಾಂಟ್‌ನಲ್ಲಿ ಉತ್ಪತ್ತಿಯಾಗುವ ನವೀಕರಿಸಬಹುದಾದ ವಿದ್ಯುತ್ ಅಂದಾಜು ವಾರ್ಷಿಕ ಉತ್ಪಾದನೆಗೆ 4.78 ಲಕ್ಷ ಯೂನಿಟ್ಗಳು. ಅಂದರೆ ಪ್ರಸ್ತುತ ಅಂದಾಜು ಬಳಕೆಯ ಶೇ.69%ವರೆಗೆ ಇಂಧನ ಉಳಿಸಲು ಮತ್ತು ವಾರ್ಷಿಕವಾಗಿ 530 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ” ಎಂದರು.
ಆಧುನಿಕ ತಾಂತ್ರಿಕತೆಯ ವೇಗದಲ್ಲಿ ನಾಗಾಲೋಟದಿಂದ ಚಲಿಸುತ್ತಿರುವ ವಿಶ್ವದರ್ಜೆಯ ನಗರಿ ಬೆಂಗಳೂರಿನಲ್ಲಿ ಈ ಬಗೆಯ ಸುಸ್ಥಿರ ಅಭಿವೃದ್ಧಿಯ ಪರಿಕ್ರಮಗಳು ನಿಜಕ್ಕೂ ಶ್ಲಾಘನೀಯವೆಂದು ವರ್ಣಿಸಲಾಗುತ್ತಿದೆ. ಈ ರೀತಿಯ ಪ್ರಕೃತಿ ಪ್ರಣೀತ ಅಭಿವೃದ್ಧಿ ಭವಿಷ್ಯದ ದೃಷ್ಟಿಕೋನದಲ್ಲಿ ಹೆಚ್ಚಿನ ಮಹತ್ವ ಗಳಿಸಿಕೊಂಡಿದೆ.
ಕೋವಿಡ್ ಲಾಕ್‌ಡೌನ್‌ಗಳ ಹೊರತಾಗಿಯೂ 45-75 ದಿನಗಳ ದಾಖಲೆಯ ಅವಧಿಯಲ್ಲಿ ಪೂರ್ಣಗೊಳಿಸಿ, 9, ಸೆಪ್ಟೆಂಬರ್, 2021ರಂದೇ ಕಾರ್ಯಾರಂಭ ಮಾಡಿದೆ. 1255 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡ 13ಕ್ಕೂ ಹೆಚ್ಚು ವಸತಿ ಗೋಪುರಗಳಿರುವ ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ಗಳ ಈ ಸೋಲಾರ್ ಮೇಲ್ಛಾವಣಿಯ ಸ್ಥಾಪನೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಗತಗೊಳಿಸಿರುವ ಒಂದು ಬೃಹತ್ ಸೋಲಾರ್ ಪ್ಲಾಂಟ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.