ಲಖಿಂಪುರ್ ಖೇರಿ ಹಿಂಸಾಚಾರ: ಆಶಿಶ್ ಮಿಶ್ರಾ ಅರೆಸ್ಟ್…!

ಕೊನೆಗೂ ಲಖಿಂಪುರ್ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಆಶಿಶ್ ಮಿಶ್ರಾರನ್ನು ಬಂಧಿಸಲಾಗಿದೆ.

ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ಸಂಭವಿಸಿದ ಹಿಂಸಾಚಾರದ ತನಿಖೆಗೆ ಸಹಕರಿಸದಿದ್ದಕ್ಕಾಗಿ ಕೇಂದ್ರ ರಾಜ್ಯ ಸಚಿವ (ಅ) ಅಜಯ್ ಮಿಶ್ರಾ ಅವರ ಮಗ ಆಶೀಶ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಲಖಿಂಪುರ್ ಖೇರಿ ಜಿಲ್ಲೆಯ ಟಿಕುನಿಯಾದಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ರೈತರ ಮೇಲೆ ಚಲಾಯಿಸಿದ ವಾಹನದಲ್ಲಿ ಆಶಿಶ್ ಇದ್ದ ಎಂದು ಆರೋಪಿಸಲಾಗಿತ್ತು. ಜೊತೆಗೆ ಎಫ್ಐಆರ್ ನಲ್ಲಿ ಹೆಸರಿಸಲಾದ ಆಶಿಶ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ರೈತರು ಮತ್ತು ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಇದರ ಬೆನ್ನಲ್ಲೆ ಆಶಿಶ್ ಮಿಶ್ರಾರನ್ನು ಬಂಧಿಸಲಾಗಿದೆ.

ಜೊತೆಗೆ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಮತ್ತು ಹೊಣೆಗಾರರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಭಾನುವಾರ ಯುಪಿ ಯಲ್ಲಿ ಕಿಸಾನ್ ನ್ಯಾಯ ರ್ಯಾಲಿ ನಡೆಸಲು ಸಜ್ಜಾಗಿದೆ.

ಯುಪಿ ಪೊಲೀಸರು ಆಶಿಶ್ ಮಿಶ್ರಾ ಅವರನ್ನು ಬಂಧಿಸಿ ಶನಿವಾರ ರಾತ್ರಿ ರಿಮಾಂಡ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಈ ವೇಳೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

ಆಶಿಶ್ ಮಿಶ್ರಾ ಅವರನ್ನು ಲಖಿಂಪುರ್ ಜೈಲಿಗೆ ಕರೆದೊಯ್ಯಲಾಗಿದೆ.

“ಅಸಹಕಾರ ಮತ್ತು ತಪ್ಪಿಸಿಕೊಳ್ಳುವ ಉತ್ತರಗಳ ಆಧಾರದ ಮೇಲೆ ನಾವು ಆತನನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ನಿರಂತರ ಕಸ್ಟಡಿಯಲ್ ವಿಚಾರಣೆ ನಡೆಸಲಾಗುವುದು” ಎಂದು ಲಖಿಂಪುರ್ ಖೇರಿ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರಾಗಿರುವ ಡಿಐಜಿ ಉಪೇಂದ್ರ ಅಗರ್ವಾಲ್  ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights