ಮತ್ತೆ ರಾಜಕೀಯಕ್ಕೆ ನಟ ಶಶಿಕುಮಾರ್; ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಪರ್ಧೆ!

ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಟ, ಮಾಜಿ ಸಂಸದ ಶಶಿಕುಮಾರ್ ಘೋಷಿಸಿದ್ದಾರೆ.

“ಚಿತ್ರದುರ್ಗ ಜಿಲ್ಲೆಯ ಎಸ್‌ಟಿ ಮೀಸಲು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.

“ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಆದರೆ ಕ್ಷೇತ್ರ ಎಂಬುದು ಅಂತಿಮವಾಗಿಲ್ಲ. ಶೀಘ್ರವೇ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ತಿಳಿಸುತ್ತೇನೆ” ಎಂದು ಶಶಿಕುಮಾರ್ ಹೇಳಿದ್ದಾರೆ.

“ನಾನು ಸಂಸದನಾಗಿದ್ದಾಗ ಕೇವಲ 2 ಕೋಟಿ ಮಾತ್ರ ಅನುದಾನ ಬರುತ್ತಿತ್ತು. ಅದರಲ್ಲಿ ಜನರು ಗುರುತಿಸುವ ಕೆಲಸಗಳನ್ನು ಮಾಡಿದ್ದೇನೆ. ಬಂದ ಅನುದಾನದಲ್ಲಿ ಕ್ಷೇತ್ರದ ಜನರು ಹೇಳಿದ ಹಾಗೆ ಕೆಲಸ ಮಾಡಲಾಗಿದೆ” ಎಂದು ನಟ ಶಶಿಕುಮಾರ್ ತಿಳಿಸಿದರು.

ಶಶಿಕುಮಾರ್ ರಾಜಕೀಯ ಹಾದಿ:

1999ರಲ್ಲಿ ನಡೆದ (1999-2004) ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಯುಕ್ತ ಜನತಾದಳದ ಬಾಣದ ಗುರುತಿನಿಂದ ಸ್ಪರ್ಧಿಸಿ, ಹಳ್ಳಿ ಹಳ್ಳಿಗಳಲ್ಲಿ ಹಾಡು ಹೇಳಿಕೊಂಡು, ಡ್ಯಾನ್ಸ್ ಮಾಡಿ ಮತದಾರರನ್ನು ರಂಜಿಸಿ ಮತಪಡೆದು ಅಮೋಘ ಗೆಲುವನ್ನು ಶಶಿಕುಮಾರ್ ಪಡೆದಿದ್ದರು.

ಅದೇ ಹುರುಪಿನಲ್ಲಿಯೂ ಕೆಲಸವನ್ನು ಮಾಡಿದ್ದರು. ಒಂದು ಹಂತದಲ್ಲಿ ತಾನು ಹುಟ್ಟಿ ಬೆಳೆದ ಚಿತ್ರದುರ್ಗದಲ್ಲಿಯೇ ಚುನಾವಣೆಯಲ್ಲಿ ಸ್ವರ್ಧಿಸಿ ಗೆದ್ದ ಮೇಲೆ ಮತದಾರರ ನಿರೀಕ್ಷೆಯಂತೆ ಕೆಲಸ ಮಾಡಲು ಬರುವ ಎರಡು ಕೋಟಿ‌ ಅನುದಾನದಲ್ಲಿ ಸಾಧ್ಯವಾಗದೇ ಹೋದರು ಸಾಕಷ್ಟು ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ನಗರಸಭೆಗೆ ನೀಡಿದ್ದರು.

ನಗರಗಳಲ್ಲಿ ಬೀದಿ ದೀಪಗಳನ್ನು ನೀಡುವ ಸಲುವಾಗಿ ಸೋಡಿಯಂ ಲೈಟ್‌ಗಳನ್ನು ವಿತರಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಭದ್ರವಾದ ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲು ಅನುದಾನ ಖರ್ಚು ಮಾಡಿದ್ದರು.

ಚಿತ್ರದುರ್ಗದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಶಶಿಕುಮಾರ್ ಬಸ್ ನಿಲ್ದಾಣ ಎಂದು ಕೂಡ ಕರೆಯುವಷ್ಟು ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ್ದರು. ಆದರೆ ಅವರ ಅವಧಿ ಮುಗಿದ ಮೇಲೆ ಮತ್ತೆ ಅವರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.

2008ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಚಿವ ತಿಪ್ಪೇಸ್ವಾಮಿ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲುಕಂಡಿದ್ದರು.

ನಂತರ 2018ರಲ್ಲಿ ಮತ್ತೆ ಚಳ್ಳಕೆರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಟಿಕೆಟ್ ದೊರೆಯದ ಕಾರಣ ಕೊನೆ ಕ್ಷಣದಲ್ಲಿ ಜೆಡಿಎಸ್ ಪಕ್ಷ ಸೇರಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಪ್ರಚಾರ ನಡಸದೇ ಸುಮಾರು 1500 ಹೆಚ್ಚು ಮತಗಳನ್ನು ಪಡೆದು ಹೀನಾಯವಾಗಿ ಸೋತಿದ್ದರು.

ಮುಂದಿನ ಚುನಾವಣೆಗೆ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಾರೋ? ಅಥವಾ ಬೇರೊಂದು ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೋ ತಿಳಿದು ಬಂದಿಲ್ಲ.

ಜಿಲ್ಲೆಯ ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಶಶಿಕುಮಾರ್ ಹೇಳಿದ್ದಾರೆ. ಆದರೆ ಯಾವ ಮೀಸಲು ಕ್ಷೇತ್ರ ಎಂದು ನಿಖರವಾಗಿ ತಿಳಿಸಿಲ್ಲ. ಜಿಲ್ಲೆಯಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಎರಡು ಎಸ್‌ಟಿ ಮೀಸಲು ಕ್ಷೇತ್ರಗಳಾಗಿವೆ. ಈ ಎರಡರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೋ? ಕಾದು ನೋಡಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.