ನಾನು ಜಾತಿವಾದಿ ಏನಿವಾಗ?: ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ

ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅವರೇ ಜಾತಿಗಳನ್ನು ವಿಭಜಿಸುತ್ತಿದ್ದಾರೆ. ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿಯ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಹೌದು, ನಾನು ಜಾತಿವಾದಿ ಏನಿವಾಗ ಎಂದು ಟಾಂಗ್ ಕೊಟ್ಟಿದ್ದಾರೆ.

“ಶೋಷಿತ ಜಾತಿಗಳು ತಮಗಾಗಿರುವ ಅನ್ಯಾಯವನ್ನು ಹೇಳಿಕೊಳ್ಳಲು ಸಂಘಟಿತರಾಗಿವುದು‌ ತಪ್ಪಲ್ಲ, ಅದು ಜಾತಿವಾದವೂ ಅಲ್ಲ. ಅಂತಹ ಜಾತಿ ಸಮಾವೇಶಗಳಲ್ಲಿ ಭಾಗವಹಿಸುವುದು ಜಾತಿವಾದವಾದರೆ.. ಹೌದು, ನಾನು ಜಾತಿವಾದಿ.. ಏನೀಗ ಬಿಜೆಪಿ…? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಮಾಜದ ಎಲ್ಲಾ ಜಾತಿ, ಸಮುದಾಯದ ಜನರನ್ನು ಒಟ್ಟಾಗಿ ಕರೆದೊಯ್ಯಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದ ಬಿಜೆಪಿ, ’ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ. ವೀರಶೈವ, ಲಿಂಗಾಯತ ಎಂದು ವಿಭಜನೆಯ ಬೆಂಕಿ ಹಚ್ಚಿದ ನೀವು ಯಾವ ಆಧಾರದಲ್ಲಿ ಜಾತಿ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತೀರಿ ಸಿದ್ದರಾಮಯ್ಯ?’ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಖಾಸಗೀಕರಣ; ಮೈಶುಗರ್ ಪುನಶ್ಚೇತನಕ್ಕೆ ಸಿದ್ದರಾಮಯ್ಯ ಆಗ್ರಹ!

ಸಿದ್ದರಾಮಯ್ಯ ಅವರು ಇಂದು ಸಿಂಧಗಿಯಲ್ಲಿ ನಡೆದ ಬಂಜಾರ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರ ಪ್ರಚಾರ ನಡೆಸಿದ್ದಾರೆ.

ಬಿಜೆಪಿಯ ಜಾತಿವಾದಿ ಆರೋಪಕ್ಕೆ ಪ್ರತಿಕ್ರಿಯೆ ನಿಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳನ್ನು ಮಾಡಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. “ನಾನು ಮುಖ್ಯಮಂತ್ರಿಯಾಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿದ್ದ ಬಡವರ ಸಾಲವನ್ನು ಮನ್ನಾ ಮಾಡಿದ್ದೆ. ಇದು ಜಾತಿವಾದವೇ ಬಿಜೆಪಿ…? ಎಂದಿದ್ದಾರೆ.

“ನಮ್ಮ ಸರ್ಕಾರ ಬಂಜಾರ ಸಮಾಜದ ಅಭಿವೃದ್ಧಿಗೆ ವಾರ್ಷಿಕ 200 ಕೋಟಿ ರೂಪಾಯಿಗಳನ್ನು ನೀಡಿತ್ತು. ರಾಜ್ಯ ಬಿಜೆಪಿ ಸರ್ಕಾರ ಈ ಅನುದಾನವನ್ನು ಬರೀ 10 ಕೋಟಿಗೆ ಇಳಿಸಿದೆ. ಸರ್ಕಾರವೇ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಬೇಕೆಂದು ಆದೇಶ ಹೊರಡಿಸಿದವನು ನಾನೆ. ಇದು ಜಾತಿವಾದವೇ ಬಿಜೆಪಿ…? ಎಂದು ಮತ್ತೊಂದು ಪ್ರಶ್ನಿ ಹಾಕಿದ್ದಾರೆ.

“ತಾಂಡಾಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕ್ರಾಂತಿಕಾರಕ “ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆ” ಯನ್ನು ಜಾರಿಗೊಳಿಸಿ, ಲಕ್ಷಾಂತರ ಬಡ ಜನರಿಗೆ ಭೂಮಿಯ ಒಡೆತನದ ಹಕ್ಕು ನೀಡಿದ್ದು ನಮ್ಮ ಸರ್ಕಾರ. ಇದು ಜಾತಿವಾದವೇ ಬಿಜೆಪಿ…?’ಎಂದು ಮಗದೊಂದು ಪ್ರಶ್ನೆ ಎಸೆದಿದ್ದಾರೆ.

“ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಬಂಜಾರ ಸಮುದಾಯದ ಕುಲಕಸುಬಾದ ಕಸೂತಿ ವೃತ್ತಿಯನ್ನು ಅಭಿವೃದ್ಧಿ ಪಡಿಸಲು ರೂ.100 ಕೋಟಿ ಅನುದಾನ ನೀಡುತ್ತೇವೆ ಮತ್ತು ಕಸೂತಿ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುತ್ತೇವೆ. ತಾಕತ್ತಿದ್ದರೆ ಬಿಜೆಪಿ ಇವುಗಳಿಗೆ ವಿರೋಧಿಸಲಿ” ಎಂದು ಜಾತಿವಾದಿ ಆರೋಪಕ್ಕೆ ಪ್ರತಿಯಾಗಿ ಸವಾಲು ಹಾಕಿದ್ದಾರೆ.

ಇತ್ತ ಬಿಜೆಪಿ ಜಾತಿವಿಭಜಕಸಿದ್ದರಾಮಯ್ಯ ಎಂದು ಹ್ಯಾಶ್‌ಟ್ಯಾಗ್ ಬಳಸಿದರೆ, ಸಿದ್ದರಾಮಯ್ಯ #SocialJustice ಎಂಬ ಹ್ಯಾಶ್‌ಟ್ಯಾಗ್ ಬಳಸುತ್ತಿದ್ದಾರೆ. ಒಟ್ಟಾರೆ ಹಾನಗಲ್, ಸಿಂದಗಿ ಉಪಚುನಾವಣೆಯಿಂದ ಎರಡು ಪಕ್ಷಗಳ ಟ್ವೀಟ್ ಸಮರ ದಿನ ದಿನಕ್ಕೆ ರಂಗೇರುತ್ತಿದೆ.

Read Also: 21% ಮಾತ್ರ ಸಂಪೂರ್ಣ ಕೋವಿಡ್ ಲಸಿಕೆ ಹಾಕಲಾಗಿದೆ; ಬಿಜೆಪಿ ಸಂಭ್ರಮ ಹಾಸ್ಯಾಸ್ಪದ!: ಸಿದ್ದರಾಮಯ್ಯ

Spread the love

Leave a Reply

Your email address will not be published. Required fields are marked *