ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಖಾಸಗೀಕರಣ; ಮೈಶುಗರ್ ಪುನಶ್ಚೇತನಕ್ಕೆ ಸಿದ್ದರಾಮಯ್ಯ ಆಗ್ರಹ!

ರಾಜ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾಗಿರುವ ‘ಮೈಶುಗರ್‌ ಕಾರ್ಖಾನೆ’ಯನ್ನು ಖಾಸಗೀಕರಣ ಮಾಡಬಾರದು, ಅದು ಸರ್ಕಾರಿ ಸ್ವಾಮ್ಯದಲ್ಲೇ ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ರೈತ ಹಿತರಕ್ಷಣಾ ಸಮಿತಿಯಿಂದ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಕಾರ್ಖಾನೆ ಸ್ಥಾಪಿಸಿದ್ದರು. ರಾಜ್ಯದಲ್ಲಿ ಇಂದು 65 ಸಕ್ಕರೆ ಕಾರ್ಖಾನೆಗಳಿವೆ. ಇವುಗಳಲ್ಲಿ ಮೈಶುಗರ್‌ ಒಂದೇ ಸರ್ಕಾರಿ ಕಾರ್ಖಾನೆ, ಅದನ್ನು ಖಾಸಗೀಕರಣ ಮಾಡುವುದು ಜನದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಶುಗರ್ ಕಾರ್ಖಾನೆ ಹಲವು ವರ್ಷಗಳ ಕಾಲ ಲಾಭದಲ್ಲೇ ಇತ್ತು. ಇತ್ತೀಚೆಗೆ ಕಾರಣಾಂತರಗಳಿಂದ ನಷ್ಟ ಎದುರಿಸುತ್ತಿರಬಹುದು. ಅದಕ್ಕೆ ಸರ್ಕಾರವೇ ಕಾರಣ, ರೈತರಲ್ಲ. ನಷ್ಟದಲ್ಲಿದೆ ಎಂಬ ಕಾರಣಕ್ಕೆ ಅದನ್ನು ಮಾರಾಟ ಮಾಡುವುದು ಸರಿಯಲ್ಲ. ಹಲವು ಸರ್ಕಾರಿ ಕಾರ್ಖಾನೆಗಳು, ಸಂಸ್ಥೆಗಳು ನಷ್ಟದಲ್ಲಿವೆ.‌ ಅವುಗಳನೆಲ್ಲ ಮಾರಾಟ ಮಾಡಿ ಬಿಡಬಹುದಾ? ನಷ್ಟಕ್ಕೆ ಕಾರಣಗಳನ್ನು ಪತ್ತೆಹಚ್ಚಿ, ಪುನರುಜ್ಜೀವನಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಒಂದು ವರ್ಷದಲ್ಲಿ 1.36 ಲಕ್ಷ ಜನರು ಆತ್ಮಹತ್ಯೆ; ಮಾನಸಿಕ ಒತ್ತಡವೇ ಮೂಲ ಕಾರಣ

ಮಂಡ್ಯದಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು ಲಾಭಗಳಿಸುತ್ತಿವೆ. ಆದರೆ ಸರ್ಕಾರಿ ಕಾರ್ಖಾನೆಗೆ ಏಕೆ ಲಾಭ ಗಳಿಸಲು ಸಾಧ್ಯವಿಲ್ಲ ಎಂಬುದು ನನ್ನ ಪ್ರಶ್ನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕಾರ್ಖಾನೆಯ ಉಳಿಸುವುದಕ್ಕಾಗಿ 145 ಕೋಟಿ ರೂ. ಅನುದಾನ ನೀಡಿದ್ದೆ. ಬಿ.ಎಸ್ ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯವರು, ಅವರು ಈ ಕಾರ್ಖಾನೆಯನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರ ಕಾಲದಲ್ಲೇ ಖಾಸಗೀಕರಣಗೊಳಿಸುವ ಕೆಲಸವನ್ನು ಆರಂಭಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಖಾನೆಗೆ ಸಂಬಂಧಿಸಿದ ಆಸ್ತಿ ಇದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಎದುರು ಭಾಗದಲ್ಲಿ ಕಾರ್ಖಾನೆಗೆ ಸೇರಿದ ಭೂಮಿ ಇದೆ. ಆ ಭೂಮಿಯನ್ನು ಅಭಿವೃದ್ಧಿಪಡಿಸಿ, ಅದರಿಂದ ಬರುವ ಆದಾಯವನ್ನು ಕಾರ್ಖಾನೆಗೆ ಬಳಕೆ ಮಾಡಿಕೊಳ್ಳಬೇಕು. ಸಿಎಂ ಬೊಮ್ಮಾಯಿಯವರು ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನ ನೀಡಬೇಕು. ಅವರು ಈ ಕೆಲಸ ಮಾಡದಿದ್ದರೆ ಮತ್ತೆ ನಾವು ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಕಾರ್ಖಾನೆಯನ್ನು ಪುನರ್ ಆರಂಭಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆಯ ಮಾತನಾಡಿದ್ದಾರೆ

ಇದನ್ನೂ ಓದಿ: ಆಧುನಿಕ ಮಹಿಳೆಯರು ಮಕ್ಕಳನ್ನು ಹೆರಲು ಬಯಸುತ್ತಿಲ್ಲ ಎಂದ ಸುಧಾಕರ್; ಸಚಿವರಿಗೆ ಚಿಕಿತ್ಸೆ ಅಗತ್ಯವಿದೆ ಎಂದ ನೆಟ್ಟಿಗರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights