ಟೀಂ ಇಂಡಿಯಾ ಒಳಗೇ ಮುಂಬೈ ಗುಂಪಿದೆ; ತಂಡವನ್ನೂ ತೊರೆಯಲಿದ್ದಾರೆ ಕೊಹ್ಲಿ: ಮಾಜಿ ಕ್ರಿಕೆಟಿಗ
ಯುಎಇಯಲ್ಲಿ ನಡೆದ ಐಪಿಎಲ್ ಮತ್ತು ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಬಳಿಕ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆಗಳು ಆಗುತ್ತಿವೆ. ಐಪಿಎಲ್ ಟೂರ್ನಿ ಮುಗಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತೊರೆದು, ತಂಡದಲ್ಲಿ ಓರ್ವ ಆಟಗಾರನಾಗಿ ಮುಂದುವರಿಯಲಿದ್ದೇನೆ ಎಂದು ಹೇಳಿದ್ದ ವಿರಾಟ್ ಕೊಹ್ಲಿ, ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುವ ನಿರ್ಣಯವನ್ನು ಸಹ ತೆಗೆದುಕೊಂಡಿದ್ದರು.
ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳತ್ತ ಹೆಚ್ಚಿನ ಗಮನ ಹರಿಸಲು ಹಾಗೂ ತನ್ನ ಪ್ರದರ್ಶನದ ಕುರಿತು ಹೆಚ್ಚು ಒತ್ತನ್ನು ನೀಡಲು ಈ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಿರುವುದಾಗಿ ವಿರಾಟ್ ಕೊಹ್ಲಿ ಕಾರಣವನ್ನು ಸಹ ನೀಡಿದ್ದರು.
ಆದರೆ ವಿರಾಟ್ ಕೊಹ್ಲಿ ತೆಗೆದುಕೊಂಡಿರುವ ಈ ರೀತಿಯ ನಿರ್ಧಾರಕ್ಕೆ ಬೇರೆಯದ್ದೇ ಕಾರಣಗಳಿವೆ ಎಂಬ ಮಾತುಗಳು ಆಗಿಂದಾಗ್ಗೆ ಕೇಳಿಬರುತ್ತಿವೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುಷ್ತಾಕ್ ಅಹ್ಮದ್ ಕೂಡ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿರುವುದಕ್ಕೆ ಗುಂಪುಗಾರಿಕೆ ಕಾರಣ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅತಿ ಶೀಘ್ರದಲ್ಲಿಯೇ ಭಾರತ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ವಿದಾಯವನ್ನು ಹೇಳಲಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂದುವರಿಯಲಿದ್ದಾರೆ ಎಂಬ ಅಭಿಪ್ರಾಯವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಿದ ನಂತರ ಯಾವುದೇ ವಿರಾಮವಿಲ್ಲದೇ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಭಾಗವಹಿಸಿದ್ದು ಟೀಮ್ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು ಎಂದು ಮುಷ್ತಾಕ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ. ಸತತವಾಗಿ ಬಯೋ ಬಬಲ್ ಒಳಗಡೆ ಇದ್ದ ಟೀಮ್ ಇಂಡಿಯಾ ಆಟಗಾರರಿಗೆ ಸರಿಯಾದ ವಿಶ್ರಾಂತಿ ಸಿಗದೇ ನೀರಸ ಪ್ರದರ್ಶನ ನೀಡಿದರು ಎಂದು ಮುಷ್ತಾಕ್ ಅಹ್ಮದ್ ತಿಳಿಸಿದ್ದಾರೆ.