ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುತ್ತೇವೆ ಎಂದ ಮೋದಿ ವಿರುದ್ದ ಬಿಜೆಪಿ ನಾಯಕರ ವಾಗ್ದಾಳಿ!

ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದುಕೊಳ್ಳುವುದಾಗಿ ಪ್ರಧಾನಿ ಮೋದಿ ಘೋಷಿಸಿದ ಬೆನ್ನಲೇ, ಅವರ ಈ ನಡೆಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕ ರಾಮ್‌ ಇಕ್ಬಾಲ್ ಸಿಂಗ್ ಅವರು ತಮ್ಮದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಮತ್ತು ಮಾಜಿ ಶಾಸಕ ರಾಮ್ ಇಕ್ಬಾಲ್ ಸಿಂಗ್, “ರೈತರ ಆಂದೋಲನ ಆರಂಭದ 30 ದಿನಗಳಲ್ಲಿ ಕೇಂದ್ರ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆದಿದ್ದರೇ 700 ಕ್ಕೂ ಹೆಚ್ಚು ರೈತರು ಸಾವನ್ನಪ್ಪುವುದನ್ನು ತಡೆಯಬಹುದಿತ್ತು” ಎಂದು ಹೇಳಿದ್ದಾರೆ.

” ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಈ ನಿರ್ಧಾರವು ಒಂದು ಕಡೆ ಸಂತೋಷ ನೀಡಿದ್ದರೇ, ಮತ್ತೊಂದೆಡೆ ತಡವಾಗಿ ತೆಗೆದುಕೋಮಡ ಕ್ರಮವಾಗಿದೆ” ಎಂದು ಉತ್ತರ ಪ್ರದೇಶದ ಬಲಿಯಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಅಲ್ಲದೆ ರೈತರ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: MSP ಖಾತರಿಗೆ ಆಗ್ರಹಿಸಿ ನ.29ರಂದು ಸಂಸತ್‌ ಚಲೋ; ಸಂಸತ್‌ನತ್ತ ರೈತರ ಟ್ರಾಕ್ಟರ್‌ಗಳು!

“ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬ ರೈತರ ಕುಟುಂಬಕ್ಕೆ ಒಕ್ಕೂಟ ಸರ್ಕಾರ ಕನಿಷ್ಠ 50 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಮೃತ ರೈತರ ಕುಟುಂಬ ಸದಸ್ಯರು ಅನಕ್ಷರಸ್ಥರಾಗಿದ್ದರೆ, ಅಂತಹ ಕುಟುಂಬಗಳಿಗೆ ಮಾಸಿಕ 20,000 ರೂ ಗೌರವಧನವನ್ನು ನೀಡಬೇಕು. ಇದಲ್ಲದೆ, ಅಪ್ರಾಪ್ತ ವಯಸ್ಕರಿದ್ದರೆ ಅವರ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಕೃಷಿ ಕಾನೂನುಗಳನ್ನು ಜಾರಿಗೊಳಿಸುವ ಮೊದಲು ಕೇಂದ್ರವು ರೈತರೊಂದಿಗೆ ಸಮಾಲೋಚನೆ ನಡೆಸಿದ್ದರೆ ರೈತರು ಪ್ರತಿಭಟನೆ ನಡೆಸುತ್ತಿರಲಿಲ್ಲ ಎಂದು ಈ ಹಿಂದೆ ಬಿಜೆಪಿ ನಾಯಕ ಹೇಳಿದ್ದರು. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನನ್ನು ತರಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಟೀಕೆಗೊಳಗಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್‌ ಬಗ್ಗೆ ಮಾತನಾಡಿರುವ ಸಿಂಗ್, ಆಕೆಯನ್ನು ಹುಚ್ಚಿ ಎಂದಿದ್ದಾರೆ. ಜೊತೆಗೆ ಸರ್ಕಾರ ಆಕೆಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

ಇನ್ನು ರಾಮ್ ಇಕ್ಬಾಲ್ ಸಿಂಗ್, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಕೊರೊನಾ ನಿರ್ವಹಣೆ ವಿಚಾರವಾಗಿ ಹಲವು ಬಾರಿ ಟೀಕಿಸಿದ್ದರು.

ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ಮೋದಿ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಇದನ್ನೂ ಓದಿ: ಯುಪಿಯಲ್ಲಿ ಅಧಿಕಾರಕ್ಕೆ ಬಂದರೆ ಹುತಾತ್ಮ ರೈತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ: ಅಖಿಲೇಶ್‌ ಯಾದವ್

Spread the love

Leave a Reply

Your email address will not be published. Required fields are marked *