ಬಿಜೆಪಿ ಮುಖಂಡನಿಂದ ಕಿರುಕುಳ: ಮಹಿಳೆ ಮತ್ತು ಆಕೆಯ ಮಗ ಸುಟ್ಟಗಾಯಗಳಿಂದ ಸಾವು
ನೆರೆಹೊರೆಯ ಬಿಜೆಪಿ ಮುಖಂಡನಿಂದ ನಿರಂತರವಾಗಿ ಕಿರುಕುಳಕ್ಕೊಳಗಾದ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ವೈಪೀನ್ ದ್ವೀಪದ ನಾಯರಂಬಲಂನಲ್ಲಿ ನಡೆದಿದೆ. ತಾಯಿ-ಮಗನ ಮೃತದೇಹದ ಮೇಲೆ ಸುಟ್ಟಗಾಯಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ದಿ. ಸಾಜು ಅವರ ಪತ್ನಿ ಸಿಂಧು (42) ಮತ್ತು ಅವರ ಮಗ ಅತುಲ್ (17) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಸಿಂಧು ಅವರು ಮನೆಗೆ ಒಳಗಿನಿಂದ ಬೀಗ ಹಾಕಿಕೊಂಡಿದ್ದು, ತನಗೂ ತನ್ನ ಮಗನಿಗೂ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮನೆಯಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಕಂಡು ನೆರೆಹೊರೆಯವರು ಬಾಗಿಲು ಒಡೆದು ತಾಯಿ ಮತ್ತು ಮಗನನ್ನು ಎರ್ನಾಕುಲಂನ ಲೂರ್ಡ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಲೂರ್ಡ್ಸ್ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ ಸಿಂಧು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಆಕೆಯ ಮಗ ಅತುಲ್ ಕೂಡ ಚಿಕಿತ್ಸೆ ಫಲಕಾರಿಯದೇ ಸೋಮವಾರ ಸಾವನ್ನಪ್ಪಿದ್ದಾನೆ.
ಸಿಂಧು ಅವರಿಗೆ ನೆರೆಮನೆಯವನಾದ ಬಿಜೆಪಿ ಮುಖಂಡ ಪಿ.ಟಿ.ದಿಲೀಪ್ ಎಂಬಾತ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಿಂಧು ಅವರ ಸಹೋದರ ಜೋಜೊ ಅವರನ್ನು ಕೂಡ ದಿಲೀಪ್ ಥಳಿಸಿದ್ದ ಎಂದು ಅವರು ಹೇಳಿದ್ದಾರೆ.
ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ, ಸಿಂಧು ತಾವು ಈ ನಿರ್ಧಾರ ತೆಗೆದುಕೊಳ್ಳಲು ಬಿಜೆಪಿ ಮುಖಂಡ ದಿಲೀಪ್‌ನ ಹೆಸರನ್ನು ಹೇಳಿದ್ದಾರೆ ಎಂದು ಸಿಂಧು ಕುಟುಂಬ ಆರೋಪಿಸಿದೆ. ಆಕೆ ಆತನ ಹೆಸರು ಹೇಳುವ ಆಡಿಯೋವನ್ನು ಆಕೆಯ ಸಂಬಂಧಿಗಳು ರೆಕಾರ್ಡ್ ಮಾಡಿದ್ದಾರೆ.
ಕೆಲ ದಿನಗಳಿಂದ ಆತ ಚುಡಾಯಿಸುತ್ತಿದ್ದ ಎಂದು ಮೃತರು ಕೆಲ ದಿನಗಳ ಹಿಂದೆ ಜಾರಕಲ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ದಿಲೀಪ್ ವಿರುದ್ಧ ಜಾಮೀನು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಇದೇ ವೇಳೆ, ಸಂಬಂಧಿಕರು ಹಾಗೂ ಸ್ಥಳೀಯರು ಇದೊಂದು ಕೊಲೆಯೇ ಹೊರತು ಆತ್ಮಹತ್ಯೆಯಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಸದನದಿಂದ 12 ಸಂಸದರ ಅಮಾನತು: ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ಸಂಸದೆ ಪ್ರಿಯಾಂಕ ಚತುರ್ವೇದಿ ರಾಜೀನಾಮೆ!