ಮತಾಂತರ ಆರೋಪ: ಶಾಲೆಯ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ; ವಿದ್ಯಾರ್ಥಿಗಳಲ್ಲಿ ಆತಂಕ

ಕ್ರಿಶ್ಚಿಯನ್‌‌ ಮಿಷನರಿ ಸಂಸ್ಥೆ ನಡೆಸುತ್ತಿರುವ ಶಾಲೆಯಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿರುವ ಹಿಂದೂತ್ವವಾದಿ ಸಂಘಟನೆ ಬಜರಂಗದಳದ ಕಾರ್ಯಕರ್ತರು ಶಾಲೆಗೆ ನುಗ್ಗಿ ಕಟ್ಟಡದ ಮೇಲೆ ಕಲ್ಲು ಎಸೆದು ಹಿಂಸಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಜಿಲ್ಲೆಯ ಗಂಜ್ ಬಸೋಡಾ ಪಟ್ಟಣದಲ್ಲಿರುವ ಸೇಂಟ್ ಜೋಸೆಫ್ ಶಾಲೆಯ ಆಡಳಿತ ಮಂಡಳಿಯು ಎಂಟು ವಿದ್ಯಾರ್ಥಿಗಳನ್ನು ಮತಾಂತರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿತ್ತು. ಈ ಬಳಿಕ ಶಾಲೆಯ ಮುಂದೆ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು, ಶಾಲೆಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ, ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ, 12ನೇ ತರಗತಿಯ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆಯುತ್ತಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಆದಿವಾಸಿ ಯುವಕನಿಗೆ ಗುಂಡೇಟು: ಅರಣ್ಯ ಸಿಬ್ಬಂದಿ ವಿರುದ್ದ ಭುಗಿಲೆದ್ದ ಆಕ್ರೋಶ

“ಪರೀಕ್ಷೆ ನಡೆಯುವ ವೇಳೆ ದಾಳಿ ನಡೆದಿದ್ದರಿಂದ ನಮಗೆ ಏಕಾಗ್ರತೆ ಇಲ್ಲದಾಗಿದೆ. ಆದ್ದರಿಂದ ಪರೀಕ್ಷೆಯನ್ನು ಮತ್ತೆ ನಡೆಸಬೇಕೆಂದು ಕೋರುತ್ತಿದ್ದೇವೆ” ಎಂದು ಹಲ್ಲೆಯಿಂದ ಭಯಭೀತರಾದ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಶಾಲೆಯ ಮೇಲೆ ದಾಳಿ ನಡೆಯುತ್ತದೆ ಎಂದು ಸ್ಥಳೀಯ ಮಾಧ್ಯಮಗಳ ಮೂಲಕ ಶಾಲೆಯ ಮ್ಯಾನೇಜರ್ ಆಗಿರುವ ಬ್ರದರ್ ಆಂಟನಿ ಅವರಿಗೆ ಒಂದು ದಿನದ ಮುಂಚೆಯೆ ಮಾಹಿತಿ ದೊರಕಿತ್ತು. ಹೀಗಾಗಿ ಅವರು ಪೊಲೀಸರಿಗೆ ಮತ್ತು ರಾಜ್ಯದ ಆಡಳಿತವನ್ನು ಎಚ್ಚರಿಸಿದ್ದರು. ಆದರೆ, ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ.

ಶಾಲೆಯಲ್ಲಿ ಧಾರ್ಮಿಕ ಮತಾಂತರ ನಡೆದಿದೆ ಎಂಬ ಪ್ರತಿಪಾದನೆಯನ್ನು ಅವರು ನಿರಾಕರಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಯಾವುದೇ ಹೆಸರುಗಳು ಯಾವುದೇ ವಿದ್ಯಾರ್ಥಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ ಪ್ರದೇಶದ ಇತರ ಮಿಷನರಿ ಶಾಲೆಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ವಿಧ್ವಂಸಕ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆಪಾದಿತ ಧಾರ್ಮಿಕ ಮತಾಂತರದ ಬಗ್ಗೆ ತನಿಖೆ ಆರಂಭವಾಗಿದ್ದು, ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲಾಗುವುದು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರೋಶನ್ ರೈ ಹೇಳಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಹಿಂದೆ ವಿದಿಶಾ ಜಿಲ್ಲಾಧಿಕಾರಿಗೆ ಪತ್ರ ಬರೆದು ಶಾಲೆಯ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿತ್ತು.

ಇದನ್ನೂ ಓದಿ: ಸದನದಿಂದ 12 ಸಂಸದರ ಅಮಾನತು: ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ಸಂಸದೆ ಪ್ರಿಯಾಂಕ ಚತುರ್ವೇದಿ ರಾಜೀನಾಮೆ!

Spread the love

Leave a Reply

Your email address will not be published. Required fields are marked *