ರಾಜಸ್ಥಾನ: 4 ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರಿಂದಲೇ ಸಾಮೂಹಿಕ ಅತ್ಯಾಚಾರ: ಶಾಲೆಯ 15 ಸಿಬ್ಬಂದಿ ವಿರುದ್ಧ ಎಫ್‌ಐಆರ್
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಾಲ್ವರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಕೃತ್ಯಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರು ಸೇರಿದಂತೆ 15 ಸಿಬ್ಬಂದಿಗಳ ವಿರುದ್ದ ರಾಜಸ್ಥಾನ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ದೌರ್ಜನ್ಯಕ್ಕೆ ತುತ್ತಾದ ವಿದ್ಯಾರ್ಥಿಯರು 3, 4, 6 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆಯರು ಹೇಳಿದ್ದಾರೆ.
“ತನ್ನ ಮೇಲೆ ಶಾಲೆಯ ಪ್ರಾಂಶುಪಾಲ ಮತ್ತು ಇತರ ಶಿಕ್ಷಕರು ಒಂದು ವರ್ಷದಿಂದ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ. ಇಬ್ಬರು ಮಹಿಳಾ ಶಿಕ್ಷಕರು ಆ ಕೃತ್ಯದ ವಿಡಿಯೋಗಳನ್ನು ಕೂಡ ಮಾಡಿದ್ದಾರೆ” ಎಂದು 10ನೇ ತರಗತಿಯ ಸಂತ್ರಸ್ತ ವಿದ್ಯಾರ್ಥಿನಿ ಹೇಳಿದ್ದಾರೆ.
ಈ ಕೃತ್ಯದ ಬಗ್ಗೆ ಸಂತ್ರಸ್ತೆಯೊಬ್ಬರು ಮಹಿಳಾ ಶಿಕ್ಷಕರಿಗೆ ದೂರು ನೀಡಿದಾಗ, ಅವರೂ ಕೂಡ ಬಾಲಕಿಗೆ ಶಾಲಾ ಶುಲ್ಕ ಮತ್ತು ಪುಸ್ತಕಗಳನ್ನು ಕೊಡಿಸುವುದಾಗಿ “ಆಮಿಷ” ವೊಡ್ಡಿದರು ಮತ್ತು ಈ ಬಗ್ಗೆ ಯಾರಿಗೂ ದೂರು ನೀಡದಂತೆ ಕೇಳಿಕೊಂಡರು ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
“ನಾಲ್ವರು ಸಂತ್ರಸ್ತ ಅಪ್ರಾಪ್ತ ಬಾಲಕಿಯರ ಕುಟುಂಬದ ಸದಸ್ಯರು ಮಂಗಳವಾರ ರಾತ್ರಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಶಾಲೆಯ ಒಟ್ಟು ಸಿಬ್ಬಂದಿಗಳಾ 15 ಜನರ ವಿರುದ್ದ ಸಾಮೂಹಿಕ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಹೊರಿಸಿದ್ದಾರೆ” ಎಂದು ಭಿವಾಡಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಮೂರ್ತಿ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ: ವಾರಣಾಸಿ: 3ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಶಾಲಾ ಸಿಬ್ಬಂದಿ ಅತ್ಯಾಚಾರ
ಆದಾಗ್ಯೂ, ಈ ಪ್ರಕರಣದಲ್ಲಿ ಸಾಕ್ಷಿಗಳು ಹಾಗೂ ಕಿರುಕುಳ ಸಂಭವನೀಯ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕವಾಗಿ, ಈ ಪ್ರಕರಣಗಳು ಕಳೆದ ವರ್ಷ ಅದೇ ಶಾಲೆಯ ಇನ್ನೊಬ್ಬ ಶಿಕ್ಷಕನ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿವೆ ಎಂದು ಪೊಲೀಸರು ಜೋಶಿ ತಿಳಿಸಿದ್ದಾರೆ.
“ಕಳೆದ ವರ್ಷ ಡಿಸೆಂಬರ್ 17 ರಂದು ಅದೇ ಶಾಲೆಯ ಶಿಕ್ಷಕರೊಬ್ಬರು ದಲಿತ ವಿದ್ಯಾರ್ಥಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ಶಿಕ್ಷಕನನ್ನು ಬಂಧಿಸಿ, ಪ್ರಕರಣದ ಆರೋಪಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಆರೋಪಿ ಶಿಕ್ಷಕನಿಗೆ ಇತ್ತೀಚೆಗೆ ಜಾಮೀನು ಸಿಕ್ಕಿದೆ. ಈಗ ಹೊಸದಾಗಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಬ್ಬಂದಿಗಳೆಲ್ಲರೂ ಆ ಆರೋಪಿ ಶಿಕ್ಷಕನ ವಿರುದ್ಧದ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರೇ ಆಗಿದ್ದಾರೆ. ಹೀಗಾಗಿ, ಇತ್ತೀಚೆಗೆ ದಾಖಲಾದ ಎಫ್‌ಐಆರ್‌ಗಳ ಹಿಂದೆ ಆತನ ಕೈವಾಡವಿದೆಯೇ ಎಂದು ಅನುಮಾನಿಸಲಾಗಿದೆ. ಅದಕ್ಕಾಗಿ, ನಾವು ಸಂಭವನೀಯ ಸಾಕ್ಷಿ, ಕಿರುಕುಳದ ಆಯಾಮವನ್ನು ಸಹ ತನಿಖೆ ಮಾಡುತ್ತಿದ್ದೇವೆ” ಎಂದು ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲೇ ವೇಗದ ತೀರ್ಪು: ಒಂದೇ ದಿನದಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ನೀಡಿದ ಕೋರ್ಟ್!
“ಇತ್ತೀಚಿನ ಪ್ರಕರಣವನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಏಕೆಂದರೆ ಎಲ್ಲಾ ಆರೋಪಿಗಳು ತಮ್ಮ ಮಾಜಿ ಸಹೋದ್ಯೋಗಿಯ ವಿರುದ್ಧ ಸಾಕ್ಷ್ಯ ನೀಡಿದ್ದಾರೆ. ಆ ಆರೋಪಿ ಶಿಕ್ಷಕ ನಿನ್ನೆ ಎಫ್‌ಐಆರ್ ದಾಖಲಿಸಲು ಬಾಲಕಿಯರ ಪೋಷಕರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾನೆ ಎಂದು ನಂಬಲು ನಮಗೆ ಕಾರಣವಿದೆ. ಆತ ಪೊಲೀಸ್ ಠಾಣೆಗೆ ಪ್ರವೇಶಿಸಲಿಲ್ಲ. ಆದರೆ ಹೊರಗೆ ಕಾಯುತ್ತಿದ್ದ. ಇದು ಅನುಮಾನವನ್ನು ಹುಟ್ಟುಹಾಕಿದ್ದು, ನೈಜವಾಗಿ ಅಪರಾಧ ನಡೆದಿದೆಯೇ ಎಂಬುದನ್ನೂ ಒಳಗೊಂಡಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಪಿ ಜೋಶಿ ತಿಳಿಸಿದ್ದಾರೆ.
ಈವರೆಗೆ ಯಾರನ್ನೂ ಬಂಧಿಸಿಲ್ಲ. ಐಪಿಸಿ ಸೆಕ್ಷನ್‌ಗಳು ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಪಕ್ಷಗಳು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಪ್ರಕರಣದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸದಿದ್ದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ತನ್ನ ತಾಯಿಯೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು ದೂರು ನೀಡಿದ್ದ ಬಾಲಕ; ಪ್ರಕರಣ ವಜಾ