ಸೇನೆಯಿಂದ ಜನರ ಹತ್ಯೆ: ಕೇಂದ್ರವು ಜನರ ಕ್ಷಮೆ ಕೇಳಬೇಕು; AFSPA ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ!

ನಾಗಲ್ಯಾಂಡ್‌ನಲ್ಲಿ ಅಮಾಯಕ ಜನರನ್ನು ಸೇನೆಯು ಹತ್ಯೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರವು ಕ್ಷಮೆ ಕೇಳಬೇಕು ಮತ್ತು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು (ಎಎಫ್‌ಎಸ್‌ಪಿಎ) ಹಿಂಪಡೆಯಲು ಒತ್ತಾಯಿಸಿ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ತಿಜಿತ್‌ನ ಸಿವಿಲ್ ಸೊಸೈಟಿ ಕಾರ್ಯಕರ್ತರು ಶನಿವಾರ ಪ್ರತಿಭಟನಾ ರ್‍ಯಾಲಿ ನಡಸಿದ್ದಾರೆ.

ಈ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿರುವ ಪ್ರತಿಭಟನಾಕಾರರು, ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ತೀಝಿತ್ ಜನರು ಸುಮ್ಮನಿರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

“ಭದ್ರತಾ ಪಡೆಗಳ ಹೊಂಚುದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಸರ್ಕಾರ ಇದುವರೆಗೆ ಕ್ಷಮೆ ಕೇಳಿಲ್ಲ. ಅಲ್ಲದೆ, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂತ್ರಸ್ತರು ಭದ್ರತಾ ಪಡೆಗಳು ಸಿಗ್ನಲ್ ನೀಡಲಿದಾಗ ನಿಲ್ಲಿಸಲಿಲ್ಲ ಎಂದು ಗೃಹ ಸಚಿವರು ಸುಳ್ಳು ಹೇಳಿದ್ದಾರೆ. ಸುಳ್ಳು ಹಬ್ಬಿಸುತ್ತಿರುವವರು ಯಾರು?” ಎಂದು ಪ್ರತಿಭಟನಾಕಾರರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

AFSPA ಸಮಸ್ಯೆಗೆ ಮೂಲ ಕಾರಣವಾಗಿದೆ. “ಈಶಾನ್ಯ ರಾಜ್ಯಗಳಲ್ಲಿರುವ AFSPA ಅನ್ನು ರದ್ದುಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ನಮಗೆ ಭದ್ರತಾ ಪಡೆಗಳ ಅಗತ್ಯವಿಲ್ಲ. ನಾವು ಸ್ವತಂತ್ರವಾಗಿ ಬದುಕಲು ಬಯಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

“ಭಾರತೀಯ ಸೈನಿಕರು ಅಮಾಯಕರನ್ನು ಕೊಲ್ಲುತ್ತಿದ್ದಾರೆ”, “ನಮಗೆ ನ್ಯಾಯ ಬೇಕು”, “ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ಹಿಂಪಡೆಯಿರಿ”, “ಪ್ರಭುತ್ವ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಿ” ಇತ್ಯಾದಿ ಬ್ಯಾನರ್‌ಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು.

ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನವನ್ನು ನಿಲ್ಲಿಸಲು ಭದ್ರತಾ ಸಿಬ್ಬಂದಿ ಕೇಳಿತು. ಆದರೆ, ಅದು ಪರಾರಿಯಾಗಲು ಪ್ರಯತ್ನಿಸಿತು. ಹೀಗಾಗಿ, ಈ ಘಟನೆ ಸಂಭವಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿದ್ದರು. ಇದು ನಾಗಾಲ್ಯಾಂಡ್‌ ಜನರನ್ನು ಮತ್ತಷ್ಟು ಕೋಪಗೊಳಿಸಿದ್ದು, ಪ್ರತಿಭಟನೆಗಳು ಭುಗಿಲೆದ್ದಿವೆ.

ಇದನ್ನೂ ಓದಿ: ನಕಲಿ ಅಂಕಪತ್ರ: ವಿಧಾನಸಭೆಯಿಂದ ಬಿಜೆಪಿ ಶಾಸಕ ಅನರ್ಹ; ಐದು ವರ್ಷ ಜೈಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights