ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ; ಬಾವುಟಕ್ಕೆ ಬೆಂಕಿ ಹಚ್ಚಿದವರಿಗೆ ಕಠಿಣ ಶಿಕ್ಷೆಗೆ ನಟಿ ಹರಿಪ್ರಿಯಾ ಆಗ್ರಹ
ಮಹಾರಾಷ್ಟ್ರದಲ್ಲಿ ಕೆಲ ಕಿಡಗೇಡಿಗಳು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ, ಕನ್ನಡ ಬಾವುಟಕ್ಕೆ ಅಪಮಾನ ಮಾಡಿದ್ದಾರೆ. ಇದರಿಂದಾಗಿ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಘಟನೆಯನ್ನು ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಕೂಡ ಖಂಡಿಸಿದ್ದು, ತಮ್ಮ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ನಟಿ ಹರಿಪ್ರಿಯಾ, ‘ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟವರಿಗೆ ಸೂಕ್ತ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ‘ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ. ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟವರಿಗೆ ಸೂಕ್ತ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿ, ರಾರಾಜಿಸುತ್ತಿರುವ ಕನ್ನಡ ಭಾವುಟದ ವಿಡಿಯೊ ಹಂಚಿಕೊಂಡಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿರುವ ನಟ ಪ್ರೇಮ್ ಅವರು, ‘ರಾಜ್ಯದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಅದನ್ನು ಹಾಳು ಮಾಡುವ ಕೆಲಸಕ್ಕೆ ಎಂಇಎಸ್ ಕೈ ಹಾಕಬಾರದು. ರಾಜ್ಯದಲ್ಲಿ ಮರಾಠಿ ಮತ್ತು ಹಿಂದಿ ಚಿತ್ರಗಳಿಗೂ ಅವಕಾಶ ನೀಡಲಾಗಿದೆ. ಇವುಗಳನ್ನು ಎಂಇಎಸ್ ಅರ್ಥ ಮಾಡಿಕೊಳ್ಳಬೇಕು. ಬಾವುಟ ಸುಟ್ಟವರಿಗೆ ಶಿಕ್ಷೆಯಾಗಬೇಕು’ ಎಂದಿದ್ದಾರೆ.
ಇತ್ತೀಚೆಗಷ್ಟೆ ನಟ ದರ್ಶನ್ ಸೇರಿದಂತೆ ಅನೇಕ ನಟ ನಟಿಯರು ಕನ್ನಡ ಭಾವುಟ ಸುಟ್ಟಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಭಾಷಾ ಸೌಹಾರ್ದತೆ ಕದಡುವ ಪುಂಡರನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಲವ್ ಜಿಹಾದ್- ನಿಜವೆಷ್ಟು? ಸುಳ್ಳೆಷ್ಟು?

