ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಎಂದರೇನು?; ವಿರೋಧಕ್ಕೆ ಕಾರಣಗಳೇನು?

ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅನ್ನು ವಿಪಕ್ಷಗಳ ವಿರೋಧದ ನಡುವೆಯೂ ಅಂಗೀಕರಿಸಲಾಗಿದೆ. ಈ ಮಸೂದೆಯು ಮತದಾರರ ಪಟ್ಟಿಯನ್ನು ಆಧಾರ್‌ ಜೊತಗೆ ಜೋಡಿಸುವ ಉದ್ದೇಶವನ್ನು ಹೊಂದಿದೆ. ಮಸೂದೆಯನ್ನು ಕಾನೂನು ಸಚಿವ ಕಿರಣ್ ರಿಜಿಜು ಅವರು ಮಂಡಿಸಿದ್ದು, ಮಸೂದೆಯ ಭಾಗವಾಗಿರುವ ವಿವಿಧ ಪ್ರಸ್ತಾವನೆಗಳನ್ನು ಕಾನೂನು ಮತ್ತು ಸಿಬ್ಬಂದಿಗಳ ಸ್ಥಾಯಿ ಸಮಿತಿಯು ಶಿಫಾರಸ್ಸು ಮಾಡಿದೆ. ಇದು ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಎಂದರೇನು?

ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಮತದಾರರಾಗಿ ನೋಂದಾಯಿಸಲು ಬಯಸುವ ಜನರಿಂದ ಅವರ ಗುರುತನ್ನು ದೃಢಪಡಿಸಲು ಆಧಾರ್ ಸಂಖ್ಯೆಯನ್ನು ಪಡೆಯುವ ಅಧಿಕಾರವನ್ನು ಚುನಾವಣಾ ಅಧಿಕಾರಿಗಳಿಗೆ ನೀಡುತ್ತದೆ. ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರುಗಳ ದೃಢೀಕರಿಸುವ ಉದ್ದೇಶಕ್ಕಾಗಿ ಮತ್ತು ಮತದಾರರ ಪಟ್ಟಿಯಲ್ಲಿ ಅದೇ ವ್ಯಕ್ತಿಯ ಹೆಸರನ್ನು ನೋಂದಾಯಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿದೆ. ಅದಕ್ಕಾಗಿ, ಈಗಾಗಲೇ  ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿರುವ ಜನರಿಂದಲೂ ಆಧಾರ್ ಸಂಖ್ಯೆಗಳನ್ನು ಪಡೆದುಕೊಳ್ಳಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅವಕಾಶವನ್ನು ಈ ಮಸೂದೆ ನೀಡುತ್ತದೆ.

ಒಂದು ಕ್ಷೇತ್ರ ಅಥವಾ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಬ್ಬನೇ ವ್ಯಕ್ತಿ ಒಂದಕ್ಕಿಂತಲೂ ಹೆಚ್ಚು ಮತದಾರ ಗುರುತಿನ ಚೀಟಿಯನ್ನು ಹೊಂದುವುದನ್ನು ಇದು ತಡೆಯುತ್ತದೆ ಎಂದುಯ ಹೇಳಲಾಗಿದೆ.

ಮಸೂದೆ ಕುರಿತು ಮಾತನಾಡಿದ ರಿಜಿಜು, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಸ್ವಯಂಪ್ರೇರಿತವಾಗಿರುತ್ತದೆ. ತಿದ್ದುಪಡಿ ಮಸೂದೆಯು “ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಯಾವುದೇ ಅರ್ಜಿಯನ್ನು ನಿರಾಕರಿಸುವಂತಿಲ್ಲ. ಆಧಾರ್‌ ನೀಡದ ಕಾರಣಕ್ಕಾಗಿ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದುಗಳನ್ನು ಅಳಿಸಲಾಗುವುದಿಲ್ಲ. ಆಧಾರ್‌ ನೀಡಲು ವಿಫಲರಾದಂತಹ ಜನರು ಸೂಚಿಸಬಹುದಾದಂತೆ ಇತರ ದಾಖಲೆಗಳನ್ನು ಒದಗಿಸಲು ಅನುಮತಿಸಲಾಗುವುದು ಎಂದು ಹೇಳಿದ್ದಾರೆ.

ತಿದ್ದುಪಡಿಗಳ ಅಡಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು

ಈ ಮಸೂದೆಯ ಮೂಲಕ ಪ್ರಜಾಪ್ರತಿನಿಧಿ ಕಾಯಿದೆ, 1950 ಮತ್ತು 1951 ರ ವಿವಿಧ ವಿಭಾಗಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಮಸೂದೆಯ ಉದ್ದೇಶ ಮತ್ತು ಕಾರಣಗಳ ಹೇಳಿಕೆಯು RP ಕಾಯಿದೆ, 1950ರ ಸೆಕ್ಷನ್ 23ಕ್ಕೆ ತಿದ್ದುಪಡಿ ಮಾಡಿ, ಮತದಾರರ ಪಟ್ಟಿಯ ಡೇಟಾವನ್ನು ಆಧಾರ್‌ ಲಿಂಕ್ ಮಾಡಲು ಅನುಮತಿಸಲಾಗುತ್ತದೆ. ಇದು ವಿವಿಧ ಸ್ಥಳಗಳಲ್ಲಿ ಒಂದೇ ವ್ಯಕ್ತಿಯ ಹೆಚ್ಚು ಮತದಾರ ಗುರುತಿನ ಚೀಟಿಯನ್ನು ಹೊಂದುವುದನ್ನು ನಿಯಂತ್ರಿಸುತ್ತದೆ.

ಆರ್‌ಪಿ ಕಾಯಿದೆ, 1950ರ ಸೆಕ್ಷನ್ 14ಕ್ಕೆ ಮಾಡಲಾಗುವ ತಿದ್ದುಪಡಿಯು ಅರ್ಹ ಜನರು ಮತದಾರರಾಗಿ ನೋಂದಾಯಿಸಲು ನಾಲ್ಕು ಅರ್ಹತಾ ದಿನಾಂಕಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಉದಾ: ಪ್ರಸ್ತುತ ಜನವರಿ 1ನ್ನು ತೆಗೆದುಕೊಂಡರೆ. ಈಗಿನಂತೆ, ಜನವರಿ 1 ರಂದು ಅಥವಾ ಅದಕ್ಕಿಂತ ಮೊದಲು 18 ವರ್ಷ ತುಂಬುವ ಜನರು ಮತದಾರರಾಗಿ ನೋಂದಾಯಿಸಿಕೊಳ್ಳಬಹುದು. ಆದರೆ ಜನವರಿ 1 ರ ನಂತರ 18 ವರ್ಷ ವಯಸ್ಸಿನವರು ನೋಂದಣಿಗಾಗಿ ಇಡೀ ವರ್ಷ ಕಾಯುತ್ತಾರೆ. ಹೀಗಾಗಿ, ಈ ಮಸೂದೆಯು ಜನವರಿ 1 ನೇ ದಿನ, ಏಪ್ರಿಲ್ 1 ನೇ ದಿನ, ಜುಲೈ 1 ನೇ ದಿನ ಮತ್ತು ಅಕ್ಟೋಬರ್ 1 ನೇ ದಿನವನ್ನು ಅರ್ಹತಾ ದಿನಾಂಕಗಳಾಗಿ ನಿಗದಿ ಪಡಿಸಲು ಪ್ರಸ್ತಾಪಿಸುತ್ತದೆ.

ಆರ್‌ಪಿ ಆಕ್ಟ್, 1950ರ ಸೆಕ್ಷನ್ 20ರ ಮತ್ತು ಆರ್‌ಪಿ ಆಕ್ಟ್, 1951ರ ಸೆಕ್ಷನ್ 60ರ  ತಿದ್ದುಪಡಿಯು ಸೇವಾ ಮತದಾರರಿಗೆ ಚುನಾವಣೆಗಳಲ್ಲಿ ಲಿಂಗ-ತಟಸ್ಥ  ಮಾಡಲು ಪ್ರಯತ್ನಿಸುತ್ತದೆ. ತಿದ್ದುಪಡಿಯು ಕಾನೂನುಗಳನ್ನು ಲಿಂಗ-ತಟಸ್ಥಗೊಳಿಸಲು ‘ಹೆಂಡತಿ’ ಪದವನ್ನು ‘ಸಂಗಾತಿ’ ಎಂದು ಬದಲಿಸುತ್ತದೆ.

ಆರ್‌ಪಿ ಆಕ್ಟ್, 1950ರ ಸೆಕ್ಷನ್ 28 ರಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಯು ಆಧಾರ್ ಸಂಖ್ಯೆಯನ್ನು ತಿಳಿಸುವ ರೂಪ ಮತ್ತು ವಿಧಾನ ಮತ್ತು ಆಧಾರ್ ಬದಲಿಗೆ ಒದಗಿಸಬೇಕಾದ ಪರ್ಯಾಯ ದಾಖಲೆಗಳ ಕುರಿತು ಸಾಕಷ್ಟು ಕಾರಣಗಳನ್ನು ಒದಗಿಸುವಿಕೆಯ ಬಗ್ಗೆ ಕೇಂದ್ರ ಸರ್ಕಾರವು ನಿಯಮಗಳನ್ನು ರೂಪಿಸಿದಾಗ ತಿಳಿಯುತ್ತದೆ ಎಂದು ಸ್ಪಷ್ಟಪಡಿಸುತ್ತದೆ. ಈ ನಿಟ್ಟಿನಲ್ಲಿ ಮತ್ತು ಅಧಿಕೃತ ಗೆಜೆಟ್‌ನಲ್ಲಿ ತಿದ್ದುಪಡಿಯನ್ನು ತಿಳಿಸುತ್ತದೆ.

ವಿರೋಧ, ಕಾನೂನು ಮತ್ತು ರಾಜಕೀಯ

ಮಸೂದೆಯನ್ನು ಪರಿಚಯಿಸುವ ಸಂದರ್ಭದಲ್ಲಿ, ಕಾನೂನು ಸಚಿವ ರಿಜಿಜು ಅವರು ಮತದಾರರ ಪಟ್ಟಿಯಿಂದ ನಕಲಿ ಮತದಾರರನ್ನು ತೆಗೆದುಹಾಕುವ ಅಗತ್ಯವಿರುವುದರಿಂದ ಅಸ್ತಿತ್ವದಲ್ಲಿರುವ ಕಾನೂನಿನಲ್ಲಿರುವ ಕೆಲವು ಲೋಪವನ್ನು ತೆಗೆದುಹಾಕಲು ಸರ್ಕಾರ ಪ್ರಯತ್ನಿಸಿದೆ ಎಂದು ಒತ್ತಿ ಹೇಳಿದ್ದಾರೆ. ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ನಿಬಂಧನೆಯು “ಕಡ್ಡಾಯವಾಗಿರುವುದಿಲ್ಲ. ಆದರೆ ಸ್ವಯಂಪ್ರೇರಿತವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ. ಆದರೆ, ವಿರೋಧ ಪಕ್ಷಗಳ ಸಂಸದರು, ಈ ಮಸೂದೆಯು ಜನರ ಮೂಲಭೂತ ಮತ್ತು ಶಾಸನಬದ್ಧ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಆಧಾರ್ ಕೇವಲ ವಾಸಸ್ಥಳದ ಪುರಾವೆಯಾಗಿದೆ. ಅದು ಪೌರತ್ವದ ಪುರಾವೆಯಲ್ಲ. ಇದಲ್ಲದೆ, ನಾಗರಿಕರಿಗೆ ಮಾತ್ರ ಮತ ಚಲಾಯಿಸಲು ಅವಕಾಶ ಇದ್ದಾಗ, ಮತದಾರರ ಪಟ್ಟಿಗ ಆಧಾರ್ ಸಂಖ್ಯೆ ಜೋಡಿಸುವುದು ನಕಲಿ ಮತದಾರರನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಇದು ಪುಟ್ಟಸ್ವಾಮಿ ಪ್ರಕರಣ (ಗೌಪ್ಯತೆಯ ಹಕ್ಕು)ದಲ್ಲಿ ಆಧಾರ್‌ ಬಗ್ಗೆ ಸುಪ್ರೀಂ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.

ಆಧಾರ್‌ ಒಂದು ಗುರುತಿನ ಚೀಟಿ ಮಾತ್ರವೇ ಆಗಿದ್ದು, ಇದನ್ನು ಮತದಾರರ ಪಟ್ಟಿಗೆ ಲಿಂಕ್‌ ಮಾಡುವುದರಿಂದ ಭಾರತದ ಪೌರತ್ವವನ್ನು ಪಡೆಯದೇ ಇರುವವರೂ ಕೂಡ ಮತದಾನದ ಹಕ್ಕನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದು, ಭಾರತೀಯ ಪ್ರಜೆಗಳ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ಕಾರಣಗಳು ಹೀಗಿವೆ:

  1. ಆಧಾರ್ ಪೌರತ್ವದ ಪುರಾವೆ ಅಲ್ಲ. ಮತದಾರರ ಪಟ್ಟಿಯಿಂದ ನಾಗರಿಕರ ಹೆಸರನ್ನು ಪರಿಶೀಲಿಸಲು ಅಥವಾ ಅಳಿಸಲು ಕಾನೂನುಬದ್ಧ ಆಧಾರವಾಗ ಆಧಾರ್‌ಅನ್ನು ಬಳಸಲಾಗುವುದಿಲ್ಲ.
  2. ಆಧಾರ್ ಬಳಸಿ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಹಿಂದಿನ ಪ್ರಯತ್ನಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆದಿದ್ದು, ಈ ಪ್ರಯತ್ನವು ಮತದಾರರಿಗೆ ಅನ್ಯಾಯ ಮತ್ತು ಸಾಮೂಹಿಕ ಅಮಾನ್ಯೀಕರಣಕ್ಕೆ ಕಾರಣವಾಗಿವೆ. 2015 ರಲ್ಲಿ, ರಾಷ್ಟ್ರೀಯ ಚುನಾವಣಾ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮದ (ಎನ್‌ಇಆರ್‌ಪಿಎಪಿ) ಮೂಲಕ ಮತದಾರರ ಪಟ್ಟಿಗೆ ಆಧಾರ್  ಜೋಡಿಸುವ ಕಾರ್ಯಕ್ರಮವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದೀಗ ಮತ್ತೆ ಅಂತದ್ದೇ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದು ಆಧಾರ್ ಲಿಂಕ್ ಕುರಿತು ಸುಪ್ರೀಂ ಕೋರ್ಟ್‌ನ ಆದೇಶಗಳ ಉಲ್ಲಂಘನೆಯಾಗಿದೆ.
  3. MNREGA ಅಥವಾ PDS ಫಲಾನುಭವಿಗಳ ಡೇಟಾವನ್ನೂ ಶುದ್ಧಗೊಳಿಸಲು ಆಧಾರ್ ಅನ್ನು ಲಿಂಕ್‌ ಮಾಡಲು ಪ್ರಯತ್ನಿಸಲಾಗಿತ್ತು. ಆದರೆ, ಅದು ನಿಜವಾದ ಫಲಾನುಭವಿಗಳನ್ನು ಅಳಿಸಲು ಕಾರಣವಾಯಿತು. ಅಲ್ಲದೆ, ನೈಜ ಫಲಾನುಭವಿಗಳನ್ನು ಕಲ್ಯಾಣ ಯೋಜನೆಗಳಿಂದ ಹೊರಗಿಡಲು ಕಾರಣವಾಯಿತು.
  4. ಆಧಾರ್ ಡೇಟಾಬೇಸ್ ಅನೇಕ ಡೇಟಾ ಗುಣಮಟ್ಟದ ಸಮಸ್ಯೆಗಳನ್ನು ಹೊಂದಿದ್ದು, ಅದು ಮತದಾರರ ಡೇಟಾದ ಗುಣಮಟ್ಟ ಮತ್ತು ಪವಿತ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ವಂಚನೆಗಳಿಗೆ ಹೆಚ್ಚು ಕಾರಣವಾಗುತ್ತದೆ. ವಾಸ್ತವವಾಗಿ, ವಿವಾದದಲ್ಲಿ ಮುಳುಗಿರುವ ಆಧಾರ್ ಯೋಜನೆಗೆ ನ್ಯಾಯಸಮ್ಮತತೆಯನ್ನು ಒದಗಿಸುವ ಮಾರ್ಗವಾಗಿ ಯುಐಡಿಎಐ ಈ ಪ್ರಸ್ತಾಪಕ್ಕಾಗಿ ತೀವ್ರವಾಗಿ ಲಾಬಿ ನಡೆಸುತ್ತಿದೆ ಎಂದು ಕಂಡುಬಂದಿದೆ.
  5. ಮತದಾರರ ಡೇಟಾಬೇಸ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಮತದಾರರ ಗೌಪ್ಯತೆಯ ಮೇಲಿನ ದಾಳಿಯಾಗಿದೆ. ಇದು ಮತದಾರರ ಪ್ರೊಫೈಲ್‌ಗಳ ಮೇಲೆ ಕಣ್ಗಾವಲು ಸಕ್ರಿಯಗೊಳಿಸುತ್ತದೆ. ಇದು ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಹೆಚ್ಚು ಹಾನಿಕಾರಕವಾಗಿದೆ. ಹಿಂದಿನ ಕೆಲವು ಅನುಭವಗಳು ಸೂಚಿಸುವಂತೆ, ಪಕ್ಷ ಅಥವಾ ಅದರ ಸಿದ್ಧಾಂತವನ್ನು ವಿರೋಧಿಸುವವರನ್ನು ಹಕ್ಕುಚ್ಯುತಿಗೊಳಿಸಲು ಇದನ್ನು ಬಳಸಬಹುದು.
  6. ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡುವುದು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿರುವ ಮತದಾನದ ಗೌಪ್ಯತೆಯನ್ನು ಹಾಳುಮಾಡಲು ದಾರಿ ಮಾಡಿಕೊಡುತ್ತದೆ.

ಪುಟ್ಟಸ್ವಾಮಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಪ್ರಮಾಣಾನುಗುಣ ಪರೀಕ್ಷೆಯನ್ನು ಪೂರೈಸದ ಕಾರಣ ಆಧಾರ್ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡುವುದು ಅಸಂವಿಧಾನಿಕವಾಗಿದೆ. ಇದು ಪ್ರಮಾಣಾನುಗುಣವಾಗಿರಲು, ಕಾನೂನುಬದ್ಧ ಗುರಿಯನ್ನು ಅನುಸರಿಸಲು ಅಗತ್ಯವಾದ ಸಾಧನವಾಗಿದೆ ಎಂದು ಸರ್ಕಾರವು ತೋರಿಸಬೇಕಾಗಿದೆ.

ಮತದಾರರ ಡೇಟಾದಲ್ಲಿ ಎಷ್ಟು ನಕಲಿ ದೋಷಗಳು ಅಸ್ತಿತ್ವದಲ್ಲಿವೆ ಎಂಬುದನ್ನು ತೋರಿಸಲು ಸರ್ಕಾರದ ಬಳಿ ಅಗತ್ಯ ಪುರಾವೆಗಳೂ ಇಲ್ಲ ಅಥವಾ ಮತದಾರರ ಐಡಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದರಿಂದ ಅಂತಹ ದೋಷಗಳನ್ನು ಕಡಿಮೆ ಮಾಡುತ್ತದೆ ಎಂದು ತೋರಿಸುವಂತಹ ಯಾವುದೇ ಪುರಾವೆಗಳನ್ನೂ ಸರ್ಕಾರ ಇಟ್ಟುಕೊಂಡಿಲ್ಲ.

ಈಗಿರುವ ಕಾನೂನುಗಳು ಏನು ಹೇಳುತ್ತವೆ

RPAಯ ಸೆಕ್ಷನ್ 15ರ ಪ್ರಕಾರ ಪ್ರತಿ ಕ್ಷೇತ್ರಕ್ಕೆ ಮತದಾರರ ಪಟ್ಟಿಯನ್ನು ಹೊಂದಿರಬೇಕು ಎಂದು ಹೇಳುತ್ತದೆ. ಇದನ್ನು ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಡಿಯಲ್ಲಿ ಈ ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತದೆ.

ಸೆಕ್ಷನ್ 16 ಹೇಳುವಂತೆ ಒಬ್ಬ ವ್ಯಕ್ತಿಯು ಭಾರತದ ಪ್ರಜೆಯಾಗಿಲ್ಲದಿದ್ದರೆ ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಅನರ್ಹನಾಗುತ್ತಾನೆ.

ಸೆಕ್ಷನ್ 17ರ ಪ್ರಕಾರ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಯಾವುದೇ ವ್ಯಕ್ತಿಗೆ ಅರ್ಹತೆ ಇರುವುದಿಲ್ಲ.

ಎಂದು  ಹೇಳುತ್ತದೆ, ಆದರೆ ಸೆಕ್ಷನ್ 18 ಯಾವುದೇ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅರ್ಹತೆ ಹೊಂದಿರುವುದಿಲ್ಲ ಎಂದು ನಿರ್ದಿಷ್ಟವಾಗಿ ಒದಗಿಸುತ್ತದೆ.

ಸೆಕ್ಷನ್ 19ರ ಪ್ರಕಾರ ಅರ್ಹತಾ ದಿನಾಂಕದಂದು 18 ವರ್ಷಕ್ಕಿಂತ ಕಡಿಮೆಯಿಲ್ಲದ ವಯಸ್ಸಿನ ಮತ್ತು ಸಾಮಾನ್ಯವಾಗಿ ಕ್ಷೇತ್ರದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಎಸ್ಮಾ ಜಾರಿ: ಆರು ತಿಂಗಳುಗಳ ಕಾಲ ಪ್ರತಿಭಟನೆ ನಡೆಸದಂತೆ ನಿರ್ಬಂಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights