ಎಂಇಎಸ್ ನಿಷೇಧಕ್ಕೆ ಆಗ್ರಹ: ಡಿಸೆಂಬರ್‌ 31ಕ್ಕೆ ಕರ್ನಾಟಕ ಬಂದ್!

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಬೆಳಗಾವಿಯಲ್ಲಿ ನಡೆಸಿರುವ ಪುಂಡಾಟಿಕೆ ವಿರೋಧಿಸಿ, ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್‌ 31 ರಂದು ಕರ್ನಾಟಕ ಬಂದ್ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ.

ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದರು, ನಗರದಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಎಲ್ಲಾ ಕಾರಣಗಳಿಂದ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

“ಇದು 6 ಕೋಟಿ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಎಲ್ಲ ಕನ್ನಡ ಪರ ಸಂಘಟನೆಗಳು, ಕನ್ನಡಿಗರು ಈ ಪ್ರತಿಭಟನೆಯಲ್ಲಿ ಸಾಥ್‌ ನೀಡಲಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಸಭೆ ಸೇರಿ ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ಹೇಳಿದರು.

“ಇದರಲ್ಲಿ ಯಾರು ಅಪಸ್ವರ ಎತ್ತಬಾರದು. ನಾವು ಇದು ಪ್ರತಿಷ್ಠಗಾಗಿ ಮಾಡುತ್ತಿಲ್ಲ. ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಕನ್ನಡ ಬಾವುಟ ಸುಟ್ಟಿದ್ದಾರೆ. ಬಂದ್ ಬಿಟ್ಟು ಬೇರೆ ದಾರಿ ನಮಗೆ ಇಲ್ಲ. ನಮಗೆ ನೈತಿಕ ಬೆಂಬಲ ಬೇಡ. ಎಲ್ಲರೂ ನೇರವಾದ ಬೆಂಬಲ ನೀಡಿ. ಅಂದು ಟೌನ್‌ಹಾಲ್‌ನಿಂದ ಕನ್ನಡಿಗರ ಶಕ್ತಿ ಪ್ರದರ್ಶನ ನಡೆಯಲಿದೆ. ಎಲ್ಲರೂ ಬೆಂಗಳೂರಿಗೆ ಬನ್ನಿ. ಕನಿಷ್ಠ 5 ಲಕ್ಷ ಮಂದಿ ಶಕ್ತಿ ಪ್ರದರ್ಶನದಲ್ಲಿ ಭಾಗವಹಿಸಬೇಕು. ಡಿ. 31ಕ್ಕೆ ಸಂಪೂರ್ಣ ರಾಜ್ಯ ಒಂದಾಗಬೇಕು’ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

“ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿ‌‌‌‌‌‌‌‌‌‌‌‌‌‌‌‌ದ್ದೇವೆ. ಇದು ಮಾಮೂಲಿ ಬಂದ್ ಅಲ್ಲ. ಕನ್ನಡಿಗರ ಹೃದಯದ ಬಂದ್ ಇದು. ಇಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬುದಿಲ್ಲ. ಎಲ್ಲರೂ ಪಕ್ಷಾತೀತವಾಗಿ ನಮ್ಮ ಜೊತೆ ನಿಲ್ಲಬೇಕು. ಇದು ನಮ್ಮ ಕಳಕಳಿಯ ಮನವಿ’ ಎಂದಿದ್ದಾರೆ.

’ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್ ) ನ್ನು ಡಿಸೆಂಬರ್‌ 31 ರ ಒಳಗೆ ನಿಷೇಧ ಮಾಡಿದರೆ ನಾವು ಬಂದ್ ಹಿಂತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಸಾ.ರಾ.ಗೋವಿಂದು ಸೇರಿದಂತೆ ಕನ್ನಡಪರ ಸಂಘಟನೆಯ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ʼಗೊಬೆಲಪ್ಪʼ, ʼಬ್ರೋಕರಪ್ಪʼ: ಮಾಜಿ ಸಿಎಂ ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights