ಕನ್ನಡಿಗರ ಮೇಲೆಯೇ ರಾಜ್ಯ ಸರ್ಕಾರದ ಅತಿರೇಕದ ಕ್ರಮ: ಕರವೇ ಆಕ್ರೋಶ

ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ ಆರೋಪ ಮೇರೆಗೆ ಬಂಧಿತರಾಗಿರುವ ಹದಿಮೂರು ಮಂದಿ ಕನ್ನಡ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಅತಿರೇಕದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಈ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಸೆಕ್ಷನ್ ಗಳನ್ನು ಹೂಡಲಾಗುತ್ತಿದೆ. ಇದು ಆಘಾತಕಾರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಬುಧವಾರ ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೊಶ ವ್ಯಕ್ತಪಡಿಸಿರುವ ನಾರಾಯಣ ಗೌಡ, “ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಕನ್ನಡಿಗರ ಅಸ್ಮಿತೆಯಾದ ಕನ್ನಡ ಬಾವುಟಗಳನ್ನು ಸುಡಲಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಿಶ್ವಗುರು ಬಸವಣ್ಣನವರ ಪ್ರತಿಮೆ, ಭಾವಚಿತ್ರಗಳನ್ನು ವಿರೂಪಗೊಳಿಸಲಾಯಿತು. ಇದರಿಂದ ಪ್ರಚೋದನೆಗೆ ಒಳಗಾದ ಕೆಲವು ಯುವಕರು ಆವೇಶದಿಂದ ಮಾಡಿದ ಕೃತ್ಯಕ್ಕೆ ರಾಜ್ಯ ಸರ್ಕಾರ ಇಷ್ಟು ಅತಿರೇಕದ ಕ್ರಮ ಕೈಗೊಳ್ಳುವ ಅಗತ್ಯವಿರಲಿಲ್ಲ” ಎಂದು ಹೇಳಿದ್ದಾರೆ.

“ಕನ್ನಡ ಕಾರ್ಯಕರ್ತರು ಮಾಡಿದ್ದು ಸರಿಯಲ್ಲ. ಇದನ್ನು‌ ಕರ್ನಾಟಕ ರಕ್ಷಣಾ ವೇದಿಕೆ ಸಮರ್ಥಿಸುವುದಿಲ್ಲ. ಆದರೆ ಮೂವರು ಮಾಡಿದ ಕೃತ್ಯಕ್ಕೆ ಹದಿಮೂರು ಜನರನ್ನು ಬಂಧಿಸಲಾಗಿದೆ. ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ವಿಡಿಯೋ‌ ಶೇರ್ ಮಾಡಿದವರನ್ನು ಬಂಧಿಸಲಾಗಿದೆ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಾರ್ಮೆಂಟ್‌ ಮಹಿಳೆಯರಿಗೆ ಗುಡ್ ಸುದ್ದಿ: ಉಚಿತ ಬಸ್‌ ಪಾಸ್‌ ಪಡೆಯಲು ಅರ್ಜಿ ಆಹ್ವಾನ!

“ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ನಿನ್ನೆ ನ್ಯಾಯಾಂಗ ಬಂಧನದಲ್ಲಿದ್ದ ಕನ್ನಡ ಕಾರ್ಯಕರ್ತರನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಇದರ ಉದ್ದೇಶ ಸ್ಪಷ್ಟವಾಗಿದೆ. ಕನ್ನಡ ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸರ‌ನ್ನು‌ ಬಳಸಿಕೊಳ್ಳಲಾಗುತ್ತಿದೆ. ಇದು ಅತ್ಯಂತ ನಾಚಿಗೆಗೇಡಿನ ವಿಷಯ” ಎಂದು ಅವರು ಕಿಡಿ ಕಾರಿದ್ದಾರೆ.

“ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟು, ಕನ್ನಡಿಗರ‌ ಮೇಲೆ ಹಲ್ಲೆ ನಡೆಸಿ, ಕನ್ನಡಿಗರ ಆಸ್ತಿಪಾಸ್ತಿ ನಷ್ಟಗೊಳಿಸಿದವರ ಮೇಲೆ‌ ಅಲ್ಲಿನ ಶಿವಸೇನೆ ನೇತೃತ್ವದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಅಮಾಯಕ ಕನ್ನಡ ಕಾರ್ಯಕರ್ತರನ್ನು‌ ಹಿಂಸಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಕನ್ನಡ ಯುವಕರು ಕನ್ನಡ ಚಳವಳಿಯಲ್ಲಿ ತೊಡಗದಂತೆ ಪಟ್ಟಭದ್ರ‌ಹಿತಾಸಕ್ತಿಗಳು ಕುತಂತ್ರ ನಡೆಸುತ್ತಿರುವ ಪರಿಣಾಮವಾಗಿ ಕನ್ನಡ ಕಾರ್ಯಕರ್ತರನ್ನು‌ ಗುರಿ ಮಾಡಲಾಗುತ್ತಿದೆ ಎಂದು ಹೇಳಿರುವ ನಾರಾಯಣ ಗೌಡ ಅವರು, “ರಾಜ್ಯ ಸರ್ಕಾರ‌ ಕೂಡಲೇ ಬಂಧಿತ‌ ಕನ್ನಡ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಸುಳ್ಳು‌ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚೆನ್ನೈ: ವಿದ್ಯಾರ್ಥಿನಿಯರ ಖಾಸಗಿ ಪೋಟೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಯುವಕನ ಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights