ಗಾರ್ಮೆಂಟ್‌ ಮಹಿಳೆಯರಿಗೆ ಗುಡ್ ಸುದ್ದಿ: ಉಚಿತ ಬಸ್‌ ಪಾಸ್‌ ಪಡೆಯಲು ಅರ್ಜಿ ಆಹ್ವಾನ!

ಬೆಂಗಳೂರಿನಲ್ಲಿರುವ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಲು ಉಚಿತ ಬಸ್‌ ಪಾಸ್‌ ನೀಡಲು ಸರ್ಕಾರ ಮುಂದಾಗಿದೆ. ಅರ್ಹರು ಅರ್ಜಿ ಸಲ್ಲಿಸಲು ಬಿಎಂಟಿಸಿ ಅರ್ಜಿ ಆಹ್ವಾನಿಸಿದೆ.

ದುಡಿಯುವ ಮಹಿಳೆಯರಿಗೆ ನೆರವು ನೀಡುವ ಉದ್ದೇಶದಿಂದ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್‌ ನೀಡುವುದಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ಮಂಡನೆಯ ಸಂದರ್ಭದಲ್ಲಿ ಘೋಷಿಸಿದ್ದರು.

ಇದೀಗ, ಅವರ ಭರವಸೆ ಜಾರಿಗೆ ಬಂದಿದ್ದು, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆಗಾಗಿ ಬಿಎಂಟಿಸಿ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು ನಗರದಲ್ಲಿ ಸುಮಾರು 850ಕ್ಕಿಂತಲೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಿವೆ. ಈ ಎಲ್ಲಾ ಕಾರ್ಖಾನೆಗಳಲ್ಲಿ ಸುಮಾರು 3 ಲಕ್ಷಕ್ಕಿಂತಲೂ ಹೆಚ್ಚಿನ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ, ಶೇ.80 ಕ್ಕಿಂತ ಹೆಚ್ಚು ಕಾರ್ಮಿಕರು ಮಹಿಳೆಯರಾಗಿದ್ದಾರೆ. ಈ ಎಲ್ಲಾ ಮಹಿಳಾ ಕಾರ್ಮಿಕರು ಪ್ರತಿ ನಿತ್ಯ ತಮ್ಮ ಕರ್ತವ್ಯ ಸ್ಥಳಕ್ಕೆ ಹೋಗಲು ಹಾಗೂ ವಾಸಸ್ಥಳಕ್ಕೆ ಹಿಂದಿರುಗಲು ಖಾಸಗಿ ಬಸ್ಸು, ಆಟೋ ಹಾಗೂ ಇತರೆ ಖಾಸಗಿ ಸಂಸ್ಥೆಯ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಿರುವುದು ಕಂಡುಬಂದಿರುತ್ತದೆ. ಅವರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ಹಾಗೂ ಆರ್ಥಿಕ ಸಹಾಯವನ್ನು ಮಾಡಲು ‘ವನಿತಾ ಸಂಗಾತಿ’ ಯೋಜನೆಯಡಿಯಲ್ಲಿ ಉಚಿತವಾಗಿ ಮಾಸಿಕ ಬಸ್‌ ಪಾಸುಗಳನ್ನು ಜನವರಿ-22 ರಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ವನಿತಾ ಸಂಗಾತಿ ಪಾಸು ಪಡೆಯಲು ಬಯಸುವ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರು, ತಾವು ಕರ್ತವ್ಯ ನಿರ್ವಹಿಸುವ ಗಾರ್ಮೆಂಟ್ಸ್‌ ಕಾರ್ಖಾನೆಯ ಮಾಲೀಕರಿಗೆ ಮನವಿ ಸಲ್ಲಿಸಬೇಕು. ಮಾಲೀಕರು ಅರ್ಜಿ ಸಲ್ಲಿಸಿರುವ ಮಹಿಳಾ ಕಾರ್ಮಿಕರ ಪಟ್ಟಿಯನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಇ-ಮೇಲ್‌ ವಿಳಾಸ [email protected] ಗೆ ಸಲ್ಲಿಸಬೇಕು. ಅವರ ಕೋರಿಕೆಗಳನ್ನು ಪರಿಶೀಲಿಸಿದ ಬಳಿಕ ಅರ್ಹ ಮಹಿಳಾ ಕಾರ್ಮಿಕರ ಪಟ್ಟಿಯನ್ನು ಬೆಂ.ಮ.ಸಾ. ಸಂಸ್ಥೆಗೆ ಒದಗಿಸುತ್ತದೆ ಎಂದು ಸಾರಿಗೆ ಸಂಸ್ಥೆ ಹೇಳಿದೆ.

ಬೆಂ.ಮ.ಸಾ. ಸಂಸ್ಥೆಯು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ವೀಕರಿಸುವ ಪಟ್ಟಿಗನುಸಾರವಾಗಿ, ಗಾರ್ಮೆಂಟ್ಸ್‌ ಮಾಲೀಕರಿಂದ ಅವ‍ಶ್ಯ ದಾಖಲೆಗಳ ಪ್ರತಿಗಳನ್ನು (ಹಾರ್ಡ್‌ ಕಾಫಿ) ಹಾಗೂ ಗಾರ್ಮೆಂಟ್ಸ್‌ ಮಾಲೀಕರ ಪಾಲಿನ ಮೊತ್ತ ಶೇ.40 ರಷ್ಟನ್ನು ಪಡೆದು (ಆರ್‌.ಟಿ.ಜಿ.ಎಸ್‌/ ಎನ್.ಇ.ಎಫ್‌.ಟಿ ಮೂಲಕ), ವನಿತಾ ಸಂಗಾತಿ ಪಾಸುಗಳನ್ನು ಕೆಂಪೇಗೌಡ ಬಸ್‌ ನಿಲ್ದಾಣ ಪಾಸು ಕೌಂಟರ್‌ನಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ವನಿತಾ ಸಂಗಾತಿ ಪಾಸುಗಳನ್ನು ಪಡೆದ ಮಹಿಳಾ ಕಾರ್ಮಿಕರು ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಗೋವಾ: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಟಿಎಂಸಿಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights