ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು: ಕನ್ನಡ ಭಾಷೆ ಕಟುಕರ ಕೈಯಲ್ಲಿ ಸಿಲುಕಿಕೊಂಡಿದೆ: ಹೆಚ್‌ಡಿಕೆ ಆಕ್ರೋಶ

ಡಿಸೆಂಬರ್ 26ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಯಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ನುಸುಳಿದ್ದು ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದ್ದರು. ಇದಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, “ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ” ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ಅವರು, “ನಾನು ಮೊದಲಿನಿಂದಲೂ ಹೇಳುತ್ತಿರುವ ಮಾತಿದು. ಈ ಮಾತು ಪದೇಪದೆ ಮರುಕಳಿಸುತ್ತಿರುವುದು ನನಗೆ ಬಹಳ ನೋವುಂಟು ಮಾಡಿದೆ. ಕೇಂದ್ರ ಸರಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ” ಎಂದು ಹೇಳಿದ್ದಾರೆ.

’ನಿನ್ನೆ ರಾಷ್ಟ್ರೀಯ ಪರಿಕ್ಷಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಯುಜಿಸಿ – ಎನ್‌ ಇಟಿ ಕನ್ನಡ ಐಚ್ಛಿಕ ಭಾಷಾ ಪಶ್ನೆ ಪತ್ರಿಕೆಯ 100 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹಿಂದಿಯಲ್ಲೇ ಇದ್ದವು. ಅದನ್ನು ಕಂಡ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿ ಪರೀಕ್ಷೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದಾರೆ. ಇದು ಕನ್ನಡದ ಮೇಲಿನ ತಾತ್ಸಾರ ಹಾಗೂ ಹಿಂದಿ ಹೇರಿಕೆಯ ವಿಪರೀತ. ಅಲ್ಲದೆ, ಪರೀಕ್ಷೆ ನಡೆಸಿದ ಸಂಸ್ಥೆ ಮಾಡಿರುವ ಕನ್ನಡ ದ್ರೋಹ. ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯಗಳನ್ನು ಕನ್ನಡದ ವಿರುದ್ಧ ಎಸಗಲಾಗುತ್ತಿದೆ. ಕನ್ನಡಿಗರ ಬಗ್ಗೆ ಈ ಕಠಿಣತೆ ಏಕೆ..?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಮತಾಂತರ ನಿಷೇಧ ಕಾಯ್ದೆ ರದ್ದು: ಸಿದ್ದರಾಮಯ್ಯ

’ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರಕಾರದ ಇನ್ನು ಹಲವಾರು ಉದ್ಯೋಗ ಅವಕಾಶಗಳಲ್ಲಿ ಕನ್ನಡದ ಪ್ರತಿಭಾವಂತ ಯುವಜನರಿಗೆ ಅನ್ಯಾಯ ಆಗುತ್ತಿದೆ. ಕನ್ನಡಿಗರ ಕಡೆಗಣನೆ ದೇಶಕ್ಕೆ ಒಳ್ಳೆಯದಲ್ಲ. ನಮ್ಮ ಮೌನ ನಮ್ಮ ದೌರ್ಬಲ್ಯವಲ್ಲ ಎಂಬುದು ನೆನಪಿರಲಿ. ಈ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೂಡಲೇ ಪರಿಕ್ಷಾ ಸಂಸ್ಥೆಯು ಆಗಿರುವ ಲೋಪ ಸರಿಮಾಡಿ ಪುನಾ ಪರೀಕ್ಷೆ ನಡೆಸಬೇಕು. ಎರಡು ವರ್ಷಗಳಿಂದ ಪರಿಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

’ಪರೀಕ್ಷೆ ಅವ್ಯವಸ್ಥೆ ಆಗರವಾಗಿತ್ತು ಎನ್ನುವುದು ತಿಳಿದುಬಂದಿದೆ. ಅದನ್ನು ಸರಿಪಡಿಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಬೇಕು’ ಎಂದು ಹೇಳಿದ್ದಾರೆ.

ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ನಿಗದಿಯಾಗಿತ್ತು. ಸಾಮಾನ್ಯಜ್ಞಾನ ಪ್ರಶ್ನೆಪತ್ರಿಕೆ (100 ಅಂಕಗಳು) ಸರಿಯಾಗಿತ್ತು. ಆದರೆ ಕನ್ನಡ ಪ್ರಶ್ನೆಪತ್ರಿಕೆ (200 ಅಂಕ) ಗೊಂದಲವನ್ನು ಉಂಟುಮಾಡಿತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಒಟ್ಟು ನೂರು ಪ್ರಶ್ನೆಗಳು ಇರುತ್ತವೆ. ತಾಂತ್ರಿಕ ದೋಷದಿಂದಾಗಿ ಮೊದಲ ಹತ್ತು ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದವು. ಉಳಿದ ಪ್ರಶ್ನೆಗಳೆಲ್ಲ ಹಿಂದಿ ಭಾಷೆಯದ್ದಾಗಿದ್ದವು. ಹೀಗಾಗಿ ಪರೀಕ್ಷಾ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರು.

ತಾಂತ್ರಿಕ ದೋಷದಿಂದಾಗಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಭಾಷೆಯ ಪ್ರಶ್ನೆಗಳು ಬಂದಿದ್ದು, ಮರು ಪರೀಕ್ಷೆ ನಡೆಸುವುದಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.

ಇದನ್ನೂ ಓದಿ: ಶಾಲೆಯ ದಲಿತ ಅಡುಗೆ ಮಹಿಳೆ ವಜಾ: ಮಧ್ಯಾಹ್ನದ ಊಟ ನಿರಾಕರಿಸಿದ ದಲಿತ ವಿದ್ಯಾರ್ಥಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights