FACT CHECK | ನಟ ಯಶ್ ದಂಪತಿ ಮತ್ತು ಮಕ್ಕಳು ಮಹಾಕುಂಭ ಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿದೇಶಗಳ ಗಣ್ಯರಿಂದ ಹಿಡಿದು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸಿನಿಮಾ ರಂಗದ ತಾರೆಯರು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ನಟ ಯಶ್ ಇತ್ತೀಚೆಗೆ ಕುಟುಂಬ ಸಮೇತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ ಎನ್ನುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Naveen Kumar Gowda AKA Yash, visited Mahakumbh, Prayagraj! https://t.co/77CTdmEHGR
— Keh Ke Peheno (@coolfunnytshirt) February 23, 2025
‘Keh Ke Peheno’ ಎಂಬ ಎಕ್ಸ್ ಖಾತೆಯಲ್ಲಿ ಯಶ್, ಅವರ ಪುತ್ರ ಹಾಗೂ ಪತ್ನಿ ರಾಧಿಕಾ ಪಂಡಿತ್ ಇರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದರ ಜೊತೆಗೆ, ‘ನವೀನ್ ಕುಮಾರ್ ಗೌಡ ಅಲಿಯಾಸ್ ಯಶ್ ಪ್ರಯಾಗ್‌ರಾಜ್‌ನ ಮಹಾಕುಂಭಕ್ಕೆ ಭೇಟಿ ನೀಡಿದರು’ ಎಂದು ಬರೆಯಲಾಗಿದೆ.
‘Sheetal Chopra’ ಹೆಸರಿನ ಇನ್ನೋರ್ವ ಎಕ್ಸ್ ಬಳಕೆದಾರರೂ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಕೂಡ, ಕುಟುಂಬ ಸಮೇತ ಮಹಾಕುಂಭಕ್ಕೆ ಆಗಮಿಸಿದ ಯಶ್. “ಕಾಂಗ್ರೆಸ್ಸಿಗರೇ, ಸಾಮಾನ್ಯ ಜನರು ಮಾತ್ರವಲ್ಲದೆ ದಕ್ಷಿಣದ ಸೆಲೆಬ್ರಿಟಿಗಳು ಕೂಡ ಮಹಾಕುಂಭಕ್ಕೆ ಭೇಟಿ ನೀಡುತ್ತಿದ್ದಾರೆ,” ಎಂದು ಬರೆದುಕೊಂಡಿದ್ದಾರೆ. ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವಂತೆ ಒಂದು ವೇಳೆ, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ಯಶ್ ಭೇಟಿ ನೀಡಿರುವುದು ನಿಜವೇ ಆಗಿರುತ್ತಿದ್ದರೆ, ಒಂದಿಲ್ಲೊಂದು ಕಡೆ ಸುದ್ದಿಯಾಗಲೇಬೇಕಿತ್ತು. ಆದರೆ ಈ ಬಗ್ಗೆ ಯಾವ ಮಾಹಿತಿಯೂ ಲಭ್ಯವಾಗಲಿಲ್ಲ.
ಮತ್ತಷ್ಟು ಮಾಹಿತಿಗಾಗಿ ವಿಡಿಯೋದ ಪ್ರಮುಖ ಕೀ ಫ್ರೇಮ್‌ನ ಸ್ಕ್ರೀನ್ ಶಾಟ್ ತೆಗೆದು ಅದನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದೆವು. ಆಗ ನಮಗೆ ‘viralbhayani’ಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಆಗಿರುವ ಇದೇ ವಿಡಿಯೋ ಸಿಕ್ಕಿತು. ಈ ವಿಡಿಯೋವನ್ನು 2024ರ ನವೆಂಬರ್ 25ರಂದು ಪೋಸ್ಟ್ ಮಾಡಲಾಗಿದೆ.
ಇದರ ಜೊತೆಗೆ, “ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ಮತ್ತು ಪುಟ್ಟ ಮಕ್ಕಳೊಂದಿಗೆ, ರಾಕಿ ಭಾಯ್ ಸಂಪೂರ್ಣ ಫ್ಯಾಮಿಲಿ ಮ್ಯಾನ್,” ಎಂದು ಬರೆಯಲಾಗಿದೆ. ಈ ಪೋಸ್ಟ್‌ನಿಂದ ಇದು ಕಳೆದ ವರ್ಷದ ವಿಡಿಯೋ ಎಂದು ತಿಳಿದು ಬಂದಿದೆ.
View this post on Instagram
‘Secretmediahacker’ ಎಂಬ ಇನ್ನೊಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಈ ವಿಡಿಯೋ ಇದ್ದು ಇದನ್ನು ನವೆಂಬರ್ 26ರಂದು ಪೋಸ್ಟ್ ಮಾಡಲಾಗಿದೆ.
View this post on Instagram
ಕುಂಭ ಮೇಳ ಶುರುವಾಗಿದ್ದೇ ಜನವರಿ 13, 2025ರಂದು. ಆದರೆ ಯಶ್ ಭೇಟಿ ನೀಡಿದ್ದು 2024ರ ನವೆಂಬರ್ 25ರಂದು. ಹಾಗಾಗಿ ಕುಂಭ ಮೇಳಕ್ಕೆ ಯಶ್ ಭೇಟಿ ನೀಡಿದ್ದಾರೆ ಎನ್ನುವ ವಿಡಿಯೋ ದಾರಿ ತಪ್ಪಿಸುವಂತಹದ್ದು ಎಂದು ತಿಳಿದು ಬಂದಿದೆ.
ರಾಕಿಂಗ್ ಸ್ಟಾರ್ ಯಶ್ ಕುಂಭ ಮೇಳಕ್ಕೆ ಭೇಟಿ ನೀಡಿಲ್ಲ. ಅವರು ಭೇಟಿ ನೀಡಿದ್ದಾರೆ ಎಂದು ಹರಿದಾಡುತ್ತಿರುವ ವಿಡಿಯೋ ಈಗಿನದಲ್ಲ, ಹಳೆಯದು ಎಂದು ತಿಳಿದು ಬಂದಿದೆ. ಹಳೆ ವಿಡಿಯೋವನ್ನು ಈಗ ಭೇಟಿ ನೀಡಿದ್ದಾರೆ ಎನ್ನುವ ಅರ್ಥ ಬರುವಂತೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೊ ಹಳೆಯದಾಗಿದ್ದು, ಯಶ್ ಅವರು 2024ರ ನವೆಂಬರ್‌ನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಮುಂಬೈಗೆ ತೆರಳಿದ್ದಾಗಿನ ವಿಡಿಯೊ ಆಗಿದೆ. ಹಳೆಯ ವಿಡಿಯೊವನ್ನು ತಪ್ಪಾಗಿ ಹಂಚಿಕೊಂಡು ಯಶ್ ಅವರು ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಫೆ.23ರಂದು ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಇರುವ ಚಿತ್ರ ಎಂದು AI ರಚಿತ ಫೊಟೊ ಹಂಚಿಕೆ

