ಮಧ್ಯಪ್ರದೇಶ: ಅಪಘಾತದಲ್ಲಿ 22 ಜನರ ಸಾವು ಪ್ರಕರಣ: ಬಸ್ ಚಾಲಕನಿಗೆ 190 ವರ್ಷಗಳ ಜೈಲು ಶಿಕ್ಷೆ!
ಮಧ್ಯಪ್ರದೇಶದ ಪನ್ನಾದಲ್ಲಿ ಸಂಭವಿಸಿದ್ದ ಬಸ್ ಅಪಘಾತದಲ್ಲಿ 22 ಜನರು ಸಾವನ್ನಪ್ಪಿದ ಪ್ರಕರಣಕದಲ್ಲಿ ಬಸ್ ಚಾಲಕನಿಗೆ 190 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಕೊರ್ಟ್ ತೀರ್ಪು ನೀಡಿದೆ.
ಘಟನೆ ನಡೆದು ಆರು ವರ್ಷಗಳ ಬಳಿಕ ತೀರ್ಪು ನೀಡಿರುವ ಸ್ಥಳೀಯ ಕೋರ್ಟ್, ವಲಸೆ ಕಾರ್ಮಿಕರು ಸೇರಿ 22 ಜನರ ಸಾವಿಗೆ ಚಾಲಕನ ನಿರ್ಲಕ್ಷ್ಯವೇ ಕಾರಣವಾಗಿದೆ ಎಂಬುದನ್ನು ಗಮಸಿ, 190 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
19 ಪ್ರತ್ಯೇಕ ಎಣಿಕೆಗಳಲ್ಲಿ ತಲಾ 10 ವರ್ಷಗಳ ಶಿಕ್ಷೆಯನ್ನು ಪ್ರತ್ಯೇಕವಾಗಿ ನೀಡಲಾಗಿದೆ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಅಪರಾಧಿ ಚಾಲಕ ಶಂಶುದ್ದೀನ್ ಎಂಬಾತ ಶಿಕ್ಷೆಗೆ ಒಳಗಾಗಿದ್ದಾರೆ. ಅಲ್ಲದೆ, ಬಸ್ ಮಾಲೀಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಕಪಿಲ್ ವ್ಯಾಸ್ ತಿಳಿಸಿದ್ದಾರೆ.
ಮೇ 4, 2015 ರಂದು, 65 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ಬಸ್ ಮಡ್ಲ ಬೆಟ್ಟದ ಬಳಿ ನೀರಿಲ್ಲದ ಕಾಲುವೆಗೆ ಉರುಳಿ ಬಿದ್ದಿತು. ಬಿದ್ದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಬಸ್ ಸುಟ್ಟು ಕರಕಲಾಗಿತ್ತು. ಈ ದುರಂತದಲ್ಲಿ 22 ಜನರು ಸಾವನ್ನಪ್ಪಿದರು. ಹಲವರು ಗಾಯಗೊಂಡಿದ್ದರು.
ಬಸ್ ನಲ್ಲಿ ತುರ್ತು ನಿರ್ಗಮನ ದ್ವಾರವನ್ನು ಕಬ್ಬಿಣದ ರಾಡ್ ಗಳಿಂದ ನಿರ್ಬಂಧಿಸಲಾಗಿತ್ತು. ಅದರ ಸ್ಥಳದಲ್ಲಿ ಹೆಚ್ಚುವರಿ ಆಸನವನ್ನು ಅಳವಡಿಸಲಾಗಿತ್ತು. ಹೀಗಾಗಿ, ಪ್ರಯಾಣಿಕರು ಬಸ್‌ನಿಂದ ಹೊರ ಬರಲಾಗದೆ ಜೀವಂತವಾಗಿ ಸುಟ್ಟು ಹೋಗಿದ್ದರು ಎಂಬುದು ತನಿಖೆಯ ಸಮಯದಲ್ಲಿ ಕಂಡುಬಂದಿತ್ತು.
ಪ್ರಯಾಣಿಕರು ವೇಗ ಕಡಿಮೆ ಮಾಡುವಂತೆ ಮನವಿ ಮಾಡಿದರೂ, ಶಂಶುದ್ದೀನ್ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304(ಎ) (ನಿರ್ಲಕ್ಷ್ಯದ ಕಾರಣ ಸಾವು), 304(ಅಪರಾಧೀಯ ನರಹತ್ಯೆ), 279 ಮತ್ತು 337(ಎರಡೂ ದುಡುಕಿನ ಚಾಲನೆ), ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ವಿಶೇಷ ನ್ಯಾಯಾಧೀಶ ಆರ್.ಪಿ. ಸೋಂಕರ್ ಅವರಿದ್ದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ತೀರ್ಪು ನೀಡಲಾಗಿದೆ. ತೀರ್ಪಿನ ಪ್ರಕಾರ, 10 ವರ್ಷಗಳ 19 ಶಿಕ್ಷೆಯನ್ನು ಪ್ರತ್ಯೇಕವಾಗಿ ನೀಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: ದೇವಾಲಯದಲ್ಲಿ ಕಾಲ್ತುಣಿತ; 12 ಯಾತ್ರಿಗಳು ಸಾವು