Fact Check: ಕರ್ನಾಟಕದ ಶಿಲ್ಪವನ್ನು ಉತ್ತರ ಪ್ರದೇಶದ ನಾಗ ವಾಸುಕಿ ದೇವಾಲಯದ್ದು ಎಂದು ಹಂಚಿಕೊಳ್ಳಲಾಗಿದೆ!

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ “ನಾಗ ವಾಸುಕಿ ದೇವಸ್ಥಾನ” ದಲ್ಲಿ ವಿಶಿಷ್ಟ ಶಿಲ್ಪವಿದೆ ಎಂಬ ಹೇಳಿಕೆಯೊಂದಿಗೆ ಶಿಲ್ಪವೊಂದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದೇ ಹೇಳಿಕೆಯೊಂದಿಗೆ ಆ ಫೋಟೋವನ್ನು ಟ್ವಿಟರ್ ಮತ್ತು ಫೇಸ್‌ಬುಕ್ ಎರಡರಲ್ಲೂ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಕರ್ನಾಟಕದವ ಉತ್ಸವ ರಾಕ್ ಗಾರ್ಡನ್‌ನಲ್ಲಿರುವ ಶಿಲ್ಪ:

ವೈರಲ್‌ ಆಗುತ್ತಿರುವ ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಅದೇ ಫೋಟೋವನ್ನು ಅಪ್‌ಲೋಡ್ ಮಾಡಿದ “Whereisthis.com” ಎಂಬ ವೆಬ್‌ಸೈಟ್ ದೊರೆತಿದೆ.

ಇದು ಬಳಕೆದಾರರಿಗಾಗಿ ನಡೆಸಲಾಗುತ್ತಿರುವ ಪ್ಲಾಟ್‌ಫಾರ್ಮ್ ಆಗಿದ್ದು, ಅಲ್ಲಿ ಒಬ್ಬ ವ್ಯಕ್ತಿಯು ತಾನು ಹುಡುಕುತ್ತಿರುವ ಸ್ಥಳದ ಕುರಿತು ಪ್ರಶ್ನೆಯನ್ನು ಕೇಳುತ್ತಾನೆ – ಇತರರು ಪ್ರಶ್ನೆಗೆ ಉತ್ತರಿಸುತ್ತಾರೆ. ಅದೇ ರೀತಿಯಲ್ಲಿ ವೈರಲ್‌ ಆಗುತ್ತಿರುವ ಚಿತ್ರದ ಬಗ್ಗೆಯೂ ಚಿತ್ರದ ಕುರಿತು ವ್ಯಕ್ತಿಯೊಬ್ಬರು ಪ್ರಶ್ನೆಯನ್ನು ಪೋಸ್ಟ್ ಮಾಡಿದ್ದು, ಈ ಶಿಲ್ಪವು ಕರ್ನಾಟಕದ ಉತ್ಸವ್ ರಾಕ್ ಗಾರ್ಡನ್‌ನಲ್ಲಿದೆ ಎಂದು ವೆಬ್‌ಸೈಟ್ ಪ್ರತಿಕ್ರಿಯಿಸಿದೆ.

ಉತ್ಸವ್ ರಾಕ್ ಗಾರ್ಡನ್‌ನ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ, “ಕಲಾತ್ಮಕ ಆಲದ ಮರ” ಎಂಬ ವಿಷಯದ ಅಡಿಯಲ್ಲಿ ಅಪ್‌ಲೋಡ್ ಮಾಡಿದ ಶಿಲ್ಪದ ಚಿತ್ರವು ಕಂಡುಬಂದಿದೆ.

ಉತ್ಸವ್ ರಾಕ್ ಗಾರ್ಡನ್ ಭಾರತದಲ್ಲಿನ ಒಂದು ರೀತಿಯ ಉದ್ಯಾನವಾಗಿದ್ದು, ಅದು “ಗ್ರಾಮೀಣ ಜೀವನವನ್ನು” ಪ್ರದರ್ಶಿಸುತ್ತದೆ. ಇದು ಶಿಲ್ಪಗಳಿಂದ ತುಂಬಿದ ಕಲಾತ್ಮಕ ಉದ್ಯಾನವನವಾಗಿದೆ. ಈ ಉದ್ಯಾನವನ್ನು ಖ್ಯಾತ ಕಲಾವಿದ ಡಾ ಟಿ ಬಿ ಸೋಲಬಕ್ಕನವರ್ ಅವರು ವಿನ್ಯಾಸಗೊಳಿಸಿದ್ದಾರೆ. ಉದ್ಯಾನವು ತನ್ನ ವಿಶಿಷ್ಟವಾದ ವಿಶ್ವ ದರ್ಜೆಯ ಶಿಲ್ಪಗಳಿಗಾಗಿ ಸುಮಾರು ಎಂಟು ದಾಖಲೆಗಳನ್ನು ಹೊಂದಿದೆ.

ಅದರ ವೆಬ್‌ಸೈಟ್‌ನಲ್ಲಿನ ವಿವರಣೆಯ ಪ್ರಕಾರ, “ದೊಡ್ಡ ಆಲದ ಮರ”ವು ಕರ್ನಾಟಕದ ಮೂವರು ಶ್ರೇಷ್ಠ ಕಲಾವಿದರಾದ ಡಾ ಎಂ ವಿ ಮಿಣಜಿಗಿ, ಶ್ರೀ ಡಿ ವಿ ಹಾಲಭಾವಿ ಮತ್ತು ಶ್ರೀ ಟಿ ಪಿ ಅಕ್ಕಿ ಅವರಿಗೆ ಸ್ಮಾರಕ ಗೌರವವಾಗಿದೆ. ಸ್ವಾತಂತ್ರ್ಯದ ಮೊದಲು, ಈ ಕಲಾವಿದರು ಕಲಾ ಶಿಕ್ಷಕರು ಮತ್ತು ಕಲಾವಿದರನ್ನು ಅಭಿವೃದ್ಧಿಪಡಿಸಲು ಲಲಿತಕಲಾ ಕಾಲೇಜುಗಳನ್ನು ಸ್ಥಾಪಿಸಿದ್ದರು.

“ಆಲದ ಮರವನ್ನು ಪ್ರಕೃತಿ ಮಾತೆ (ಸಾಂಕೇತಿಕವಾಗಿ) ಎಂದು ಆಚರಿಸಲಾಗುತ್ತದೆ. ಸೃಜನಶೀಲತೆ ಇಲ್ಲಿ ‘ಪ್ರಕೃತಿ’ಯನ್ನು ತಾಯಿಯಾಗಿ ಪರಿಶೋಧಿಸುತ್ತದೆ. ಕಲಾವಿದ ತನ್ನ ಮಕ್ಕಳನ್ನು ಮರದ ಕೊಂಬೆಗಳು ಮತ್ತು ಬೇರುಗಳ ಹಿಂದೆ ಮರೆಮಾಡಿದ ತಾಯಿಯನ್ನು ಪ್ರಕೃತಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಮರವು ವಿವಿಧ ಪಕ್ಷಿಗಳು, ಹಾವುಗಳು ಮತ್ತು ಮಂಗಗಳಂತಹ ಹಲವಾರು ಜೀವಿಗಳನ್ನು ಒಳಗೊಂಡಿದೆ. ಅವುಗಳು ಪ್ರಕೃತಿಯಲ್ಲಿ ಸಂತೋಷವನ್ನು ಪಡೆಯುತ್ತವೆ. ಆಲದ ಮರದ ಬೇರುಗಳನ್ನು ಇಲ್ಲಿ ಜ್ಞಾನಕ್ಕೆ ಹೋಲಿಸಲಾಗಿದೆ. ಆಲದ ಮರದ ಕೊಂಬೆಗಳು ಮತ್ತು ಬೇರುಗಳಂತೆ, ಕಲೆಯು ಭೂಮಿಯ ಮೇಲೆ ಹರಡುತ್ತದೆ ಮತ್ತು ಅದು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂತೋಷವನ್ನು ಸೃಷ್ಟಿಸುತ್ತದೆ” ಎಂದು ವಿವರಣೆಯಲ್ಲಿ ಹೇಳಲಾಗಿದೆ.

ಉತ್ಸವ ರಾಕ್ ಗಾರ್ಡನ್‌ನ ಅಧಿಕೃತ ಚಾನೆಲ್‌ನಿಂದ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ “ಕಲಾತ್ಮಕ ಆಲದ ಮರ”ದ ವೀಡಿಯೊವನ್ನು ಕೆಳಗೆ ಎಂಬೆಡ್ ಮಾಡಿದ್ದೇವೆ.

ವೆಬ್‌ಸೈಟ್‌ನಲ್ಲಿನ ಶಿಲ್ಪದ ಚಿತ್ರ ಮತ್ತು ವೈರಲ್ ಫೋಟೋ ನಡುವಿನ ಬಣ್ಣದ ಟೋನ್‌ಗಳಲ್ಲಿನ ವ್ಯತ್ಯಾಸವು ಕೆಲವರನ್ನು ಗೊಂದಲಗೊಳಿಸಬಹುದು. ಅವು ಒಂದೇ ಎಂದು ತೋರಿಸಲು ಕೆಳಗೆ ಹೋಲಿಕೆಗಳನ್ನು ಹೈಲೈಟ್ ಮಾಡಿದ್ದೇವೆ.

ದಾಸನೂರು ಗ್ರೂಪ್ ಮತ್ತು ಉತ್ಸವ ರಾಕ್ ಗಾರ್ಡನ್ ಸಂಸ್ಥಾಪಕ ಪ್ರಕಾಶ ದಾಸನೂರ ಅವರೊಂದಿಗೆ ಮಾತನಾಡಿದಾಗ, ವೈರಲ್ ಚಿತ್ರದಲ್ಲಿರುವ ಶಿಲ್ಪವು ನಿಜವಾಗಿಯೂ ಕಲಾತ್ಮಕ ಆಲದ ಮರವಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ. ಆದರೆ, ಶಿಲ್ಪವು ಇನ್ನೂ ನಿರ್ಮಾಣ ಹಂತದಲ್ಲಿದ್ದಾಗ ತೆಗೆಯಲಾಗಿರುವ ಫೋಟೋ ಕೆಲವು ವರ್ಷಗಳಷ್ಟು ಹಳೆಯದಾಗಿದೆ. ಈ ಶಿಲ್ಪವನ್ನು ಅವರ ಪತ್ನಿ ಶ್ರೀಮತಿ ವೇದರಾಣಿ ದಾಸನೂರ ಅವರು ಕಲಾವಿದರ ತಂಡದೊಂದಿಗೆ ರಚಿಸಿದ್ದಾರೆ. ಶ್ರೀಮತಿ ವೇದರಾಣಿ ದಾಸನೂರ್ ಅವರು ಉತ್ಸವ ರಾಕ್ ಗಾರ್ಡನ್‌ನ ಕ್ಯುರೇಟರ್ ಮತ್ತು ಕಲಾ ಪ್ರಚಾರಕರು.

ಮೇಲಿನ ಪರಿಶೀಲನೆಯೊಂದಿಗೆ, ಕರ್ನಾಟಕದ ಉತ್ಸವ ರಾಕ್ ಗಾರ್ಡನ್‌ನಲ್ಲಿರುವ ಶಿಲ್ಪದ ಚಿತ್ರವನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ನಾಗ ವಾಸುಕಿ ದೇವಸ್ಥಾನದ್ದು ಎಂದು ಹೇಳಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌

ಇದನ್ನೂ ಓದಿ: Fact Check: ಇದು ಪಾಕಿಸ್ತಾನದಲ್ಲಿ ಹತ್ಯೆಗೀಡಾದ ಶ್ರೀಲಂಕಾದ ವ್ಯಕ್ತಿಯ ದುಃಖಿತ ತಾಯಿಯ ಚಿತ್ರವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.