Fact Check: ಇದು ಪಾಕಿಸ್ತಾನದಲ್ಲಿ ಹತ್ಯೆಗೀಡಾದ ಶ್ರೀಲಂಕಾದ ವ್ಯಕ್ತಿಯ ದುಃಖಿತ ತಾಯಿಯ ಚಿತ್ರವೇ?

ಡಿಸೆಂಬರ್ 3, 2021 ರಂದು ಧರ್ಮನಿಂದೆಯ ಆರೋಪದ ಮೇಲೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಸಮೂಹವೊಂದು ಶ್ರೀಲಂಕಾದ 48 ವರ್ಷದ ಪ್ರಿಯಾಂತ ಕುಮಾರ ದೀಯವದನಾ ಅವರನ್ನು ಹತ್ಯೆಗೈದು ಸುಟ್ಟುಹಾಕಿತು. ಹಲ್ಲೆಗೊಳಗಾದ ಆತನ ದೇಹವನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಛಾಯಾಚಿತ್ರವೊಂದು ಹರಿದಾಡುತ್ತಿದ್ದು, ಅದರಲ್ಲಿ ಹತ್ಯೆಗೊಳಗಾದ ವ್ಯಕ್ತಿಯ ತಾಯಿ ಸುಟ್ಟ ದೇಹದ ಮುಂದೆ ಅಳುತ್ತಿರುವುದು ಎಂದು ಚಿತ್ರದೊಂದಿಗೆ ಬರೆದು ಹಂಚಲಾಗಿದೆ.

ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌:

ವೈರಲ್‌ ಆಗುತ್ತಿರುವ ಚಿತ್ರವನ್ನು ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ, ಚಿತ್ರದ ಮೂಲ ಆವೃತ್ತಿಯನ್ನು (ಫಿಲ್ಟರ್‌ಗಳಿಲ್ಲದೆಯೇ) ಕಳೆದ ಹಲವಾರು ತಿಂಗಳುಗಳಿಂದ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡು ಬಂದಿದೆ.

ಜುಲೈ 9, 2020 ರಂದು ಪಾಕಿಸ್ತಾನದ ಸಿಟಿ 42 ಎಂಬ ಮಾಧ್ಯಮದ ವರದಿಯಲ್ಲಿ ಈ ಫೋಟೋವನ್ನು ಪ್ರಕಟಿಸಲಾಗಿದೆ. ಈ ಆವೃತ್ತಿಯಲ್ಲಿ, ಮಹಿಳೆ ಪ್ರತಿಕೃತಿಯ ಮುಂದೆ ಕುಳಿತಿದ್ದಾಳೆ ಮತ್ತು ಅದು ದೇಹದಲ್ಲ ಎಂದು ಸ್ಪಷ್ಟವಾಗಿ ಕಾಣಬಹುದು.

ವರದಿಯ ಪ್ರಕಾರ, ಚಿತ್ರದಲ್ಲಿ ಕಾಣುವ ಮಹಿಳೆ ನಿರ್ಗತಿಕ ಮಹಿಳೆಯರ ಕಲ್ಯಾಣ ಕೇಂದ್ರದ ಮಾಜಿ ಸೂಪರಿಂಟೆಂಡೆಂಟ್ ಅಫ್ಶಾನ್ ಲತೀಫ್ ಆಗಿದ್ದಾರೆ. ಅವರು ಇಮ್ರಾನ್ ಖಾನ್ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ.

ಇದರಿಂದ ಒಂದು ಸೂಚನೆಯನ್ನು ತೆಗೆದುಕೊಂಡು, ಅಫ್ಶಾನ್ ಲತೀಫ್ ಬಗ್ಗೆ ಪಾಕಿಸ್ತಾನದ ಮುಖ್ಯವಾಹಿನಿಯ ಮಾಧ್ಯಮಗಳ ಅನೇಕ ವರದಿಗಳನ್ನು ಹುಡುಕಲಾಯಿತು. ಆಗ ಸಿಕ್ಕ ಹಲವು ವರದಿಗಳ ಪ್ರಕಾರ, ಅಫ್ಶಾನ್ ಲತೀಫ್ ಅವರು 2019 ರಲ್ಲಿ ಸೂಪರಿಂಟೆಂಡೆಂಟ್ ಆಗಿದ್ದರು. ಆ ಸಂದರ್ಭದಲ್ಲಿ ಕಲ್ಯಾಣ ಕೇಂದ್ರವನ್ನು ಪ್ರಬಲ ಮಂತ್ರಿಗಳಿಗೆ ಅಪ್ರಾಪ್ತ ಅನಾಥ ಹುಡುಗಿಯರನ್ನು ಪೂರೈಸಲು ಬಳಸಲಾಗುತ್ತಿದೆ ಎಂದು ಅವರು ಸರ್ಕಾರದ ವಿರುದ್ದ ಆರೋಪಿಸಿದ್ದರು. ನಂತರದ ವರ್ಷಗಳಲ್ಲಿ, ಅವರು ಮಂತ್ರಿಗಳು ಮತ್ತು ಸರ್ಕಾರಿ ಇಲಾಖೆಗಳ ವಿರುದ್ಧ ಅನೇಕ ಪ್ರತಿಭಟನೆಗಳು ಮತ್ತು ಆನ್‌ಲೈನ್ ಅಭಿಯಾನಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Fact Check: ಬಾಲಕಿಗೆ ಚಾಕುವಿನಿಂದ ಇರಿದ ಬಾಲಕ; ಇದು ಲವ್‌ ಜಿಹಾದ್‌ ಕೃತ್ಯವಾ? ಸತ್ಯವೇನು?

ಅಲ್ಲದೆ, ವೈರಲ್ ಆದ ಚಿತ್ರವು ಅಫ್ಶಾನ್ ಲತೀಫ್ ಅವರ ಹೆಸರಿನಲ್ಲಿ ಟ್ವಿಟರ್ ಹ್ಯಾಂಡಲ್‌ನಲ್ಲಿ ಕಂಡುಬಂದಿದೆ. ಆ ಚಿತ್ರದೊಂದಿಗೆ ಮಹಿಳೆಯ ಪ್ರತಿಭಟನೆಯ ಬಹು ಚಿತ್ರಗಳು ಮತ್ತು ವೀಡಿಯೊಗಳನ್ನು ಅವರು ಹಂಚಿಕೊಂಡಿದ್ದಾರೆ.

ಜುಲೈ 8, 2020 ರಂದು, ಲತೀಫ್ ಅವರು ಅದೇ ಉಡುಪಿನಲ್ಲಿರುವ ವೀಡಿಯೊವನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ವೀಡಿಯೋದಲ್ಲಿ ಪ್ರತಿಕೃತಿಯನ್ನು ದಹಿಸುತ್ತಿರುವುದನ್ನು ಸಹ ನೋಡಬಹುದು.

ಉರ್ದು ಭಾಷೆಯಲ್ಲಿರುವ ವೀಡಿಯೊದ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ: “ಅಫ್ಶಾನ್ ಲತೀಫ್ ಅವರು ಇಮ್ರಾನ್ ಖಾನ್ ಅವರ ಕುತ್ತಿಗೆಗೆ ಹಗ್ಗವನ್ನು ಕಟ್ಟಿ, ಗವರ್ನರ್ ಭವನದ ಹೊರಗೆ ಪ್ರತಿಕೃತಿಯನ್ನು ಸುಟ್ಟುಹಾಕಿದರು ಮತ್ತು ಅದನ್ನು ಲಾಹೋರ್ ಅಸೆಂಬ್ಲಿಯಿಂದ ಮಾಲ್ ರೋಡ್‌ಗೆ ಎಳೆದುಕೊಂಡು ಹೋಗುತ್ತಿದ್ದಾರೆ.”

ವೈರಲ್ ಚಿತ್ರ ಮತ್ತು ಟ್ವಿಟರ್ ವೀಡಿಯೊದ ಸ್ಕ್ರೀನ್‌ಶಾಟ್ ನಡುವಿನ ಹೋಲಿಕೆಯನ್ನು ಇಲ್ಲಿ ನೋಡಬಹುದು.

ಸಿಯಾಲ್‌ಕೋಟ್‌ನಲ್ಲಿ ಶ್ರೀಲಂಕಾದ ವ್ಯಕ್ತಿ ಗುಂಪು ಹತ್ಯೆ

ಶ್ರೀಲಂಕಾದ ಪ್ರಿಯಾಂತ ಕುಮಾರ ಅವರು ಪಾಕಿಸ್ತಾನದ ಸಿಯಾಲ್‌ಕೋಟ್‌ನ ಸ್ಥಳೀಯ ಕಾರ್ಖಾನೆಯೊಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾಗ, 2021 ರ ಡಿಸೆಂಬರ್ 3 ರಂದು, ಪ್ರವಾದಿ ಮುಹಮ್ಮದ್ ಅವರ ಹೆಸರಿನ ಪೋಸ್ಟರ್‌ಗಳನ್ನು ಅಪವಿತ್ರಗೊಳಿಸಿದ್ದಾರೆ ಎಂಬ ಆರೋಪದ ಮೇಲೆ ಗುಂಪೊಂದು ಅವರನ್ನು ಚಿತ್ರಹಿಂಸೆ ನೀಡಿ ಸುಟ್ಟುಹಾಕಿತು ಎಂದು ವರದಿಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು.

ಶವಪೆಟ್ಟಿಗೆಯನ್ನು ಶ್ರೀಲಂಕಾಕ್ಕೆ ಹಿಂತಿರುಗಿಸಿದ ನಂತರ ಪ್ರಿಯಂತ ಕುಮಾರ ಅವರ ತಾಯಿ ಅಳುತ್ತಿರುವ ಚಿತ್ರವನ್ನು ಅಸೋಸಿಯೇಟೆಡ್ ಪ್ರೆಸ್ ಪ್ರಕಟಿಸಿದೆ.

ಹೀಗಾಗಿ, ವೈರಲ್‌ ಚಿತ್ರವು ಪ್ರಿಯಂತ ಕುಮಾರ ಹತ್ಯೆಗೆ ಸಂಬಂಧಿಸಿಲ್ಲ. ಅದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿದ ಪ್ರತಿಭಟನೆಗೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗಿದೆ.

ಪ್ರತಿಪಾದನೆ: ಪಾಕಿಸ್ತಾನದಲ್ಲಿ ಹತ್ಯೆಗೀಡಾದ ವ್ಯಕ್ತಿಯ ತಾಯಿಯ ಚಿತ್ರ

ಸತ್ಯ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರತಿಕೃತಿಯನ್ನು ದಹಿಸಿದ ಪ್ರತಿಭಟನೆಯ ಹಳೆಯ ಫೋಟೋ.

ಕೃಪೆ: ಇಂಡಿಯಾ ಟುಡೆ

ಇದನ್ನೂ ಓದಿ: Fact Check: ಕ್ರಿಸ್‌ಮಸ್‌ ಹಬ್ಬಕ್ಕಾಗಿ ತೇಜಸ್‌ ಎಕ್ಸ್‌ಪ್ರೆಸ್‌ ರೈಲನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದು ಸತ್ಯವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.