Fact check: ಕಾಂಗ್ರೆಸ್ ಅಭ್ಯರ್ಥಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಾಯಿ ಎದುರು ಎಸ್ಪಿ ಅಭ್ಯರ್ಥಿ ನಿಲ್ಲುಸುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆಯೇ?
ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಸ್ಥಾನಗಳಿಗೆ 2022 ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆ ಇಡೀ ದೇಶದ ಗಮನವನ್ನು ಸೆಳೆದಿದ್ದು, ಚುನಾವಣೆ ಬಳಿಕ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿಯನ್ನು ಯಾವ ಪಕ್ಷ ಹಿಡಿಯಲಿದೆ ಎಂದು ಕಾತುರದಿಂದ ನೋಡುತ್ತಿದ್ದಾರೆ.
ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಿಗೆ ಬಿಜೆಪಿ, ಸಮಾಜವಾದಿ ಪಾರ್ಟಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಈಗಾಗಲೇ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಕಾಂಗ್ರೆಸ್ ಶೇ.40ರಷ್ಟು ಟಿಕೆಟ್ಗಳನ್ನು ಮಹಿಳೆಯರಿಗೇ ಮೀಸಲು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈಗಾಗಲೇ ಘೋಷಿಸಿದ್ದಾರೆ.
ಜೊತೆಗೆ ಇನ್ನೊಂದು ಮಹತ್ವದ ಘೋಷಣೆಯನ್ನು ಪ್ರಿಯಾಂಕಾ ಗಾಂಧಿ ಮಾಡಿದ್ದು, 2017ರಲ್ಲಿ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಈ ಬಾರಿ ಕಾಂಗ್ರೆಸ್ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
2017 ರ ಉನ್ನಾವೋ ಘಟನೆ:
2017ರಲ್ಲಿ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಇಡೀ ದೇಶವೇ ಮರುಗಿತ್ತು. ಹೀಗೊಂದು ಅತ್ಯಾಚಾರ ಆಗಿದೆ ಎಂದು ಗೊತ್ತಾಗಿದ್ದು, ಸಂತ್ರಸ್ತೆ ಯೋಗಿ ಆದಿತ್ಯನಾಥ್ ಅವರ ನಿವಾಸದ ಎದುರು ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ. ಏಕೆಂದರೆ ಅತ್ಯಾಚಾರದ ದುರ್ಘಟನೆ ನಡೆದಾಗ ಯುವತಿ ಇನ್ನೂ ಅಪ್ರಾಪ್ತೆಯಾಗಿದ್ದಳು. ಇದರಲ್ಲಿ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಯಾದವ್ ಬಿಜೆಪಿ ಶಾಸಕನಾಗಿದ್ದ!
2017ರಲ್ಲಿಯೇ ಸಂತ್ರಸ್ತೆ ದೂರು ನೀಡಿದ್ದರು ಸಹ ಪೊಲೀಸರ ಸಮರ್ಪಕವಾಗಿ ವಿಚಾರಣೆ ನಡೆಸಿರಲಿಲ್ಲ. ಬದಲಿಗೆ ಅಂದಿನಿಂದ ಆಕೆಯ ಮತ್ತು ಆಕೆಯ ಕುಟುಂಬದ ಮೇಲೆ ನಿರಂತರ ದೌರ್ಜನ್ಯ ನಡೆದಿದೆ. ಆಕೆಯ ತಂದೆಯನ್ನು ಕಾನೂನುಬಾಹಿರವಾಗಿ ಶಸ್ತಾಸ್ತ್ರ ಹೊಂದಿದರೆಂಬ ಆರೋಪದಿಂದ ಬಂಧಿಸಲಾಗಿತ್ತು. ತದನಂತರ ಸಂತ್ರಸ್ತೆಯ ತಂದೆ ಜೈಲಿನಲ್ಲಿಯೇ ಅನುಮಾನಸ್ಪದವಾಗಿ ಸಾವನಪ್ಪಿದ್ದರು. ಅದಕ್ಕೂ ಮೊದಲು ಅವರಿಗೆ ಶಾಸಕನ ತಮ್ಮ ಅತುಲ್ ಸೆಂಗಾರ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಇನ್ನು ಸಂತ್ರಸ್ತೆಯು ಉನ್ನಾವೊದಿಂದ ನ್ಯಾಯಾಲಯಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ರಾಯ್ ಬರೇಲಿಯಲ್ಲಿ ಅಪಘಾತಕ್ಕೀಡಾಗಿದ್ದಳು. ಆಗ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನಪ್ಪಿದ್ದಾರೆ. ಆಕೆಯು ಸಹ ಸದ್ಯ ಆಸ್ಪತ್ರೆಯಲ್ಲಿದ್ದಾಳೆ.
ಇಲ್ಲಿ ಪೊಲೀಸರ ಪಕ್ಷಪಾತಿತನ, ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕನ ಹಣಬಲದಿಂದ ಆರೋಪವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರವರ ಮನೆ ಮುಂದೆ ಪ್ರತಿಭಟಿಸಿದ್ದಳು. ಸಾರ್ವಜನಿಕರ ಆಕೆಗೆ ಬೆಂಬಲ ನೀಡಿದ್ದರು. ಆನಂತರವಷ್ಟೇ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆತ ಅಪರಾಧಿ ಎಂದು 2019ರಲ್ಲಿ ಸಾಬೀತಾಗಿದ್ದು 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದು ದೇಶಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆರೋಪಿಗಳ ಕ್ರೌರ್ಯಕ್ಕೆ ದೇಶವೇ ನಡುಗಿತ್ತು.
ಅಂದಾಹಾಗೆ, ಉನ್ನಾವೋದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ತಾಯಿಯ ಹೆಸರು ಆಶಾ ಸಿಂಗ್. ಇವರನ್ನು ಉನ್ನಾವೋದ ಬಂಗಾರ್ಮೌದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇವರ ಮಗಳನ್ನು ಅತ್ಯಾಚಾರಗೈದಿದ್ದ ಅಪರಾಧಿ, ಬಿಜೆಪಿಯಿಂದ ಉಚ್ಚಾಟಿತಗೊಂಡ ಕುಲ್ದೀಪ್ ಸಿಂಗ್ 2017ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕ್ಷೇತ್ರ ಇದು. ಈತನನ್ನು ಉಚ್ಚಾಟನೆ ಮಾಡಿದ ಬೆನ್ನಲ್ಲೇ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗಿತ್ತು. ಅದರಲ್ಲಿ ಕೂಡ ಬಿಜೆಪಿಯೇ ಗೆದ್ದಿತ್ತು. ಇಂದು ಆಶಾ ಸಿಂಗ್ ಹೆಸರನ್ನು ಪ್ರಕಟಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಯಾರೇ ಚಿತ್ರಹಿಂಸೆಗೆ ಒಳಗಾಗಿದ್ದರೂ, ಅವರಿಗೆ ಕಾಂಗ್ರೆಸ್ ನ್ಯಾಯ ಒದಗಿಸುತ್ತದೆ ಎಂಬ ಸಂದೇಶವನ್ನು ಕಾಂಗ್ರೆಸ್ ತನ್ನ ಚುನಾವಣಾ ಅಭ್ಯರ್ಥಿಗಳ ಪಟ್ಟಿಯ ಮೂಲಕ ನೀಡಲು ಬಯಸುತ್ತದೆ ಎಂದು ಹೇಳಿದ್ದಾರೆ.
ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ, ಬದಲಿಗೆ ಅಖಿಲೇಶ್ ಯಾದವ್ರವರು ಕಾಂಗ್ರೆಸ್ ಅಭ್ಯರ್ಥಿ ಆಶಾ ಸಿಂಗ್ರವರನ್ನು ಬೆಂಬಲಿಸುತ್ತಾರೆ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲ ಮಾಧ್ಯಮಗಳು ಸುದ್ದಿ ಸಹ ಮಾಡಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ಗಳು
ಫ್ಯಾಕ್ಟ್ ಚೆಕ್:
ಉನ್ನಾವೋದ ಬಂಗಾರ್ಮೌದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಬೆನ್ನಲ್ಲೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು ಸಾಮಾಜಿಕ ಮಾಧ್ಯವದಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ ಅದೇನೆಂದರೆ, ಬಂಗಾರ್ಮೌ ಕಾಂಗ್ರೆಸ್ ಅಭ್ಯರ್ಥಿ ಆಶಾ ಸಿಂಗ್ ಅತ್ಯಾಚಾರ ಸಂತ್ರಸ್ತೆಯ ತಾಯಿ ಎಂಬ ಕಾರಣಕ್ಕೆ ಸಮಾಜವಾದಿ ಪಾರ್ಟಿ ಉನ್ನಾವೋ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂಬ ಸುದ್ದಿ ವೈರಲ್ ಆಗುತ್ತಿದೆ. ಹಲವರ ಫೇಸ್ ಬುಕ್ ಖಾತೆಗಳಲ್ಲಿ ಈ ಪೋಸ್ಟರ್ ಹರಿದಾಡುತ್ತಿದೆ. ಹಾಗಾಗಿ ವೈರಲ್ ಆಗುತಿರುವ ಈ ಸುದ್ದಿಯ ನೈಜತೆಯನ್ನ ಪ್ರಶ್ನಿಸುತ್ತಿದ್ದಾರೆ.
ಮೊದಲಿಗೆ ಬಂಗಾರ್ಮೌ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ದ ಸಮಾಜವಾದಿ ಪಾರ್ಟಿ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಿಲ್ಲಾ ಎಂದರೆ ಇಡೀ ದೇಶದ ಸುದ್ದಿ ವಾಹಿನಿಗಳು ಮತ್ತು ರಾಷ್ಟ್ರ ಮಟ್ಟದ ಪತ್ರಿಕೆಗಳು ಸುದ್ದಿಯನ್ನು ವರದಿ ಮಾಡುತ್ತಿದ್ದವು, ಆದರೆ ಎರಡು ಮೂರು ಪತ್ರಿಕೆಗಳನ್ನು ಬಿಟ್ಟರೆ ಉಳಿದ ಯಾವ ಪತ್ರಿಕೆಗಲ್ಲೂ ಇಂತಹ ಸುದ್ದಿ ಪ್ರಕಟಗೊಂಡಿರುವುದಿಲ್ಲ. ದಿ ಕ್ವಿಂಟ್ ನಲ್ಲಿ ಒಂದು ವರದಿ ಪ್ರಕಟಗೊಂಡು ನಂತರ ಆ ರೀತಿ ಯಾವ ತೀರ್ಮಾನಗಳನ್ನು ಸಮಾಜವಾದಿ ಪಕ್ಷ ಮಾಡಿಲ್ಲ ಎಂಬುದು ಖಾತ್ರಿಯಾದ ಮೇಲೆ ದಿ ಕ್ವಿಂಟ್ ಕೂಡ ಸುದ್ದಿ ಪ್ರಕಟಿಸಿದ್ದಕ್ಕೆ ಕ್ಷಮೆಯಾಚಿಸಿದೆ.
ಮುಂದುವರಿದು ಆಶಾ ಸಿಂಗ್ರವರು ಮಾತನಾಡುತ್ತಾ, ಬಹುಶಃ ಸಮಾಜವಾದಿ ಪಕ್ಷ ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಕ್ವಿಂಟ್ ವರದಿ ಮಾಡಿದೆ.
ಸಮಾಜವಾದಿ ಪಕ್ಷದ ಯಾವ ಮುಖಂಡರಾಗಲಿ ಅಥವಾ ಅಧ್ಯಕ್ಷರಾದ ಅಖಿಲೇಶ್ ಯಾದವ್ ಆಗಲಿ ಈ ಕುರಿತು ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಉನ್ನಾವೋ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಸಂತ್ರಸ್ತೆಯ ಕುಟುಂಬದ ಪರವಾಗಿ ಅಖಿಲೇಶ್ ಯಾದವ್ ಬೆಂಬಲವಾಗಿ ಇದ್ದರು ಎಂಬ ಕಾರಣಕ್ಕೆ ಬಂಗಾರ್ಮೌ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ ಎಂಬುದಾಗಿ ಹಂಚಿಕೊಳ್ಳುತ್ತಿದ್ದಾರೆ ಹೊರತು, ಇದುವರೆಗೂ ಈ ಬಗ್ಗೆ ಅಧಿಕೃತ ಹೇಳಿಕೆಗಳು ಹೊರಬಂದಿಲ್ಲಾ.
ಹಾಗಾಗಿ ಅಖಿಲೇಶ್ ಯಾದವ್ ಬಂಗಾರ್ಮೌ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ ಎಂದು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸುಳ್ಳಾಗಿದೆ. ಆಶಾ ಸಿಂಗ್ರವರು ಹಾಗೆ ಹೇಳಿದ್ದಾರೆಯೇ ಹೊರತು ಅಖಿಲೇಶ್ ಯಾದವ್ ಅವರಲ್ಲ.
ಇದನ್ನು ಓದಿರಿ: Fact Check: ಭಾರತ-ಪಾಕ್ ವಿಭಜನೆ: 74 ವರ್ಷಗಳ ನಂತರ ಒಂದಾದ ಸಹೋದರರು – ಸುಳ್ಳು ಬಿತ್ತಿದ ಧರ್ಮಾಂಧರು!