ಆಳ್ವಾಸ್ ಸಾಂಸ್ಕೃತಿಕ ವೈಭವ : ಕಾಫಿನಾಡ ಮಂದಿಗೆ ಭರಪೂರ ಮನರಂಜನೆ
ಮೂರು ದಿನಗಳ ಅದ್ದೂರಿ ಚಿಕ್ಕಮಗಳೂರ ಹಬ್ಬಕ್ಕೆ ಅದ್ದೂರಿ ತೆರೆ ಬಿದ್ದಿದೆ.. ಮೂರು ದಿನಗಳೂ ಕಾಫಿನಾಡ ಮಂದಿಗೆ ಭರಪೂರ ಮನರಂಜನೆ ಸಿಕ್ಕಿದೆ.. 2 ದಶಕದ ಬಳಿಕ ನಡೀತಿರೋ ಉತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. ಕೊನೇ ದಿನವಾದ ನಿನ್ನೆ ಕೂಡ ಪ್ರೇಕ್ಷಕರು ಮಸ್ತ್ ಎಂಜಾಯ್ ಮಾಡಿದ್ರು.. ಅಷ್ಟಕ್ಕೂ ಹೇಗಿತ್ತು ಗೊತ್ತಾ.. ಇಲ್ಲಿದೆ ನೋಡಿ ಚಿಕ್ಕಮಗಳೂರು ಹಬ್ಬದ ಮಾಹಿತಿ.

ಕರಾವಳಿಯ ಗಂಡುಕಲೆಯೆನಿಸಿರೋ ಬಡಗು ತೆಂಕು ತಿಟ್ಟಿನ ಯಕ್ಷಗಾನ ಕಲೆಯನ್ನು ನಿರೂಪಿಸುತ್ತಿರೋ ಹೆಂಗಳೆಯರು. ಅಪರೂಪದ ಮೋಹಿನಿಯಾಟ್ಟಂ ನೃತ್ಯವನ್ನು ಸಿಂಗಾರದಿಂದ ಮಾಡುತ್ತಿರೋ ಕಲಾವಿದರು. ಗಿರ ಗಿರನೆ ಗಿರಕೆ ಹೊಡೆಯುತ್ತಾ ದೋಲ್ ಚಲಂ ನಡೆಸುತ್ತಿರೋ ಮಣಿಪುರದ ವಿದ್ಯಾರ್ಥಿಗಳು. ನೃತ್ಯ, ಭರತನಾಟ್ಯ, ಮೋಹಿನಿಯಾಟ್ಟಂನಂತಹ ದೇಶೀಯ ನೃತ್ಯ ಕಲೆಗಳೊಂದಿಗೆ ಶ್ರೀಲಂಕಾದ ಕ್ಯಾಂಡಿಯನ್, ಸ್ಟಿಕ್ ಡ್ಯಾನ್ಸ್ ಗಳು ಕೂಡ ನೆರೆದಿದ್ದವರ ಮನ ತಣಿಸಿದವು. ಹೌದು, ದೇಶದ ವಿವಿಧ ಕಲಾ ಪ್ರಕಾರಗಳೇ ಅಲ್ಲಿ ಅನಾವರಣಗೊಂಡಿತ್ತು.

ಕರಾವಳಿಯ ಗಂಡು ಕಲೆಯೆನಿಸಿರೋ ಯಕ್ಷಗಾನದೊಂದಿಗೆ ಬಂಜಾರ ನೃತ್ಯ, ಕೇರಳದ ಒಪ್ಪಣಂ, ಕಥಕ್ ಸಮ್ಮೋಹನಂ ನೃತ್ಯಗಳು ಎಲ್ಲರ ಗಮನ ಸೆಳೆದವು. ಇಂತಹ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಕಾಫಿನಾಡು ಚಿಕ್ಕಮಗಳೂರು. ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ಮಲೆನಾಡಿನಲ್ಲಿ ಚಿಕ್ಕಮಗಳೂರು ಹಬ್ಬದ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವ ನೆರೆದಿದ್ದ ಜನಸಾಗವರನ್ನ ಮೂಕವಿಸ್ಮಿತರನ್ನಾಗಿಸಿತು.

ಚಿಕ್ಕಮಗಳೂರು ಹಬ್ಬದ ಮೂರನೇ ದಿನದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ವೇದಿಕೆಯನ್ನ ಮತ್ತಷ್ಟು ಝಗಮಗಗೊಳಿಸಿದ್ರು.. ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳನ್ನ ಕಲರ್ಫುಲ್ಲಾಗಿ ತೋರಿಸೊದ್ರ ಜೊತೆಗೆ ಗಾಜಿನ ಬಾಟ್ಲಿನ ಮಲ್ಲಕಂಬ ಸೇರಿದಂತೆ ಮೈನವಿರೇಳಿಸೋ ಹಾಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜೊತೆಗೂಡಿ ಮಾಡಿದ ಮಲ್ಲಕಂಬ ಪ್ರೇಕ್ಷಕರನ್ನ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡ್ತು. ಹಗ್ಗದ ಜೊತೆಗೂಡಿ ಮಾಡಿದ ಈ ಸ್ಟಂಟ್ ನಿಜಕ್ಕೂ ಅದ್ಬುತ.. ಅತ್ಯಾದ್ಭುತ.. ರೋಚಕವಾದ ಮಲ್ಲಕಂಬದ ಕಸರತ್ತು ನಿಜಕ್ಕೂ ನೆರೆದಿದ್ದ ಜನರಲ್ಲಿ ಆರೋಗ್ಯದ ಮಹತ್ವವನ್ನ ಏನು ಎಂಬುದನ್ನ ಸಾರಿತು..

ಯಕ್ಷಗಾನ, ನೃತ್ಯ ಜೊತೆಗೆ ದೇಹದಾರ್ಢ್ಯ ಪ್ರದರ್ಶನ ಯುವ ಜನತೆಯನ್ನ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯ್ತು. ಚುಮು ಚುಮು ಚಳಿಯ ನಡುವಲ್ಲೂ ಮೋಹಿನಿಯಾಟ್ಟಂ, ಕಥಕ್ ಸಮ್ಮೋಹನಂ, ಒಪ್ಪಣಂ, ಪುರುಲಿಯಾ ಸಿಂಹದ ಬೇಟೆ ನೃತ್ಯ, ಡೋಲುಗಳನ್ನು ಹಿಡಿದು ಕುಣಿದಾಡೋ ಮಣಿಪುರ ದೋಲ್ ಚಲಮ್ ನೃತ್ಯ ನೆರೆದವರು ನಿಬ್ಬೆರಗಾಗುವಂತೆ ಮಾಡಿತು. ಇನ್ನು ವಿದೇಶಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಬಗೆಬಗೆಯ ನೃತ್ಯ ಎಲ್ಲರನ್ನು ಹೊಸತೊಂದು ಲೋಕಕ್ಕೆ ಕರೆದೊಯ್ದಿತ್ತು. ಒಟ್ಟಿನಲ್ಲಿ ಚಿಕ್ಕಮಗಳೂರು ಹಬ್ಬದ ಪ್ರಯುಕ್ತ ಕೊನೆದಿನದಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾಫಿನಾಡ ಮಂದಿಗೆ ವಿಶೇಷ ಅನುಭವನ್ನು ಉಣಬಡಿಸಿದಂತೂ ಸುಳ್ಳಲ್ಲ.


