ಕನ್ಹಯ್ಯ ಕುಮಾರ್ ಪೌರತ್ವ ರದ್ದುಗೊಳಿಸಲು ಪಿಐಎಲ್‌ ಸಲ್ಲಿಸಿದ್ದ ಅರ್ಜಿದಾರನಿಗೆ 25,000 ದಂಡ!

ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಯುವ ನಾಯಕ ಕನ್ಹಯ್ಯ ಕುಮಾರ್ ಅವರ ಪೌರತ್ವ ರದ್ದುಪಡಿಸುವಂತೆ ಕೋರಿ  ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಲಯ 25,000 ರೂ ದಂಡ ವಿಧಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.

2016 ರಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ರಾಷ್ಟ್ರವಿರೋಧಿ ಘೋಷಣೆ ಕೂಗಿದ್ದರು ಎಂದು ಆರೋಪಿಸಿ ಪೌರತ್ವ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. “ಅಂತಹ ಘೋಷಣೆ ಕೂಗಿಲ್ಲ ಮತ್ತು ಆ ವಿಡಿಯೋ ನಕಲಿ ಎಂದು ಕನ್ಹಯ್ಯ ಸಮರ್ಥಿಸಿಕೊಂಡಿದ್ದರು”.

ನ್ಯಾಯಮೂರ್ತಿ ಎಸ್.ಕೆ.ಗುಪ್ತಾ ಮತ್ತು ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ. ಅಗ್ಗದ ಪ್ರಚಾರ ಪಡೆಯಲು ಮತ್ತು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿ ಸಲ್ಲಿಸಿದ್ದ ವಾರಣಾಸಿಯ ನಾಗೇಶ್ವರ ಮಿಶ್ರಾ ಅವರಿಗೆ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ. ರಿಜಿಸ್ಟರ್ ಮೂಲಕ ಕೋರ್ಟ್‌ಗೆ ದಂಡ ಕಟ್ಟಲು ತಾಕೀತು ಮಾಡಿದೆ.

ಅರ್ಜಿದಾರರ ಅರ್ಜಿಯು 1955 ರ ಭಾರತೀಯ ಪೌರತ್ವ ಕಾಯ್ದೆಯ ಸೆಕ್ಷನ್ 10 ಅನ್ನು ಅವಲಂಬಿಸಿರುವುದರಿಂದ ಅರ್ಜಿಯು ‘ಅರ್ಹತೆಯಿಲ್ಲದ’ ಮತ್ತು ‘ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲ್ಪಟ್ಟಿದೆ’ ಎಂದು ನ್ಯಾಯಾಲಯ ಹೇಳಿದೆ. ಈ ಕಾಯ್ದೆಯು ನಾಗರಿಕರಲ್ಲದವರಿಗೆ ಕೇಂದ್ರ ಸರ್ಕಾರವು ಪೌರತ್ವವನ್ನು ನೀಡುವ ಸಂದರ್ಭಗಳಲ್ಲಿ ಅನ್ವಯಿಸುತ್ತದೆ. ಆದರೆ ಹುಟ್ಟಿನಿಂದ ಭಾರತೀಯ ಪ್ರಜೆಯಾಗಿದ್ದವರಿಗಲ್ಲ ಎಂದು ಕೋರ್ಟ್ ಹೇಳಿದೆ.

ಕನ್ಹಯ್ಯ ಕುಮಾರ್ ಪೌರತ್ವವನ್ನು ಕಳೆದುಕೊಳ್ಳುವ ಪ್ರಶ್ನೆಯು ಉದ್ಭವಿಸುವುದಿಲ್ಲ, ಏಕೆಂದರೆ ಅವರು (ಕನ್ಹಯ್ಯ ಕುಮಾರ್) ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿಯ ನ್ಯಾಯಾಲಯದ ಮುಂದೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

No Longer Seen as Threat to Tejashwi Yadav, Kanhaiya Kumar May Headline  Left-Congress-RJD Campaign in Bihar

“ಪೌರತ್ವವನ್ನು ಕಳೆದುಕೊಳ್ಳುವುದು ಗಂಭೀರ ಅಂಶವಾಗಿದೆ, ಏಕೆಂದರೆ ಇದು ಭಾರತದಲ್ಲಿ ವಾಸಿಸುವ ವ್ಯಕ್ತಿಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ“ ಎಂದು ನ್ಯಾಯಪೀಠ ಹೇಳಿದೆ.

ಕನ್ಹಯ್ಯ ಅವರು ಫೆಬ್ರವರಿ 9, 2016 ರಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಅರ್ಜಿದಾರರು ಹೇಳಿಕೊಂಡಿದ್ದರು ಆದರೆ ಕೇಂದ್ರವು ಈವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಜೊತೆಗೆ “ಕುಮಾರ್ ಮತ್ತು ಅವರ ಸಹಚರರು ಭಯೋತ್ಪಾದಕ ಗುಂಪುಗಳ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ, ಅವರು ಐಕ್ಯತೆಯನ್ನು ಅಸ್ಥಿರಗೊಳಿಸಲು ಮತ್ತು ನಮ್ಮ ದೇಶದ ಶಾಂತಿಯನ್ನು ಭಂಗಗೊಳಿಸಲು ಪಾಕಿಸ್ತಾನದ ಪ್ರಚೋದನೆಯ ಮೇಲೆ ಕೆಲಸ ಮಾಡುತ್ತಿದ್ದಾರೆ” ಎಂಬ ಗಭೀರ ಆರೋಪಗಳನ್ನು ಅರ್ಜಿದಾರರು ಆರೋಪಿಸಿದ್ದರು. ಆದರೆ ನ್ಯಾಯಾಲಯ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿ, ಯಾವುದೇ ಸಾಕ್ಷ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.


Read Also: ನಿರುದ್ಯೋಗ ಸಮಸ್ಯೆಗೆ ಮೋದಿ ಸರ್ಕಾರ ಎಚ್ಚರಗೊಳ್ಳುತ್ತದೆಯೇ? ಯೋಜನೆ ಫಲಿಸುತ್ತದೆಯೆ?

Spread the love

Leave a Reply

Your email address will not be published. Required fields are marked *