Fact check: ರೈಲಿನಲ್ಲಿ ವಯಸ್ಕರ ಪ್ರಯಾಣವನ್ನು ಲವ್ ಜಿಹಾದ್ ಎಂದು ತಪ್ಪಾಗಿ ಆರೋಪಿಸಿದ ಬಜರಂಗದಳ

ರೈಲಿನಲ್ಲಿ ವಿವಾಹಿತ ಜೈನ ಮಹಿಳೆಯನ್ನು ಅಪಹರಿಸಲು ಯತ್ನಿಸಿದ ಮುಸ್ಲಿಂ ವ್ಯಕ್ತಿ ಆತಿಫ್‌ನನ್ನು ಬಜರಂಗದಳವು ಪೊಲೀಸರಿಗೆ ಒಪ್ಪಿಸಿದೆ ಎಂದು ಜನವರಿ 16 ರಂದು ಹಮ್ಲಾಗ್ ಎಂಬ ಹಿಂದಿ ವೆಬ್‌ಸೈಟ್ ಲೇಖನವನ್ನು ಪ್ರಕಟಿಸಿತು. ಅಂದಿನಿಂದ ಅದು ಲವ್ ಜಿಹಾದ್ ಪ್ರಕರಣ ಎಂದು ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಪೋಸ್ಟ್ ಅನ್ನು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಪುಟಗಳು, ಗುಂಪುಗಳಲ್ಲಿ ಹಂಚಿಕೊಳ್ಳಲಾಗಿದೆ. ಉದಾಹರಣೆಗೆ — RSS ರಾಷ್ಟ್ರೀಯ ಸ್ವಯಂಸೇವಕ ಸಂಘ [2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು]; ಸಿಎಂ ಯೋಗಿ ಆದಿತ್ಯನಾಥ್ [1.5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು]; ಪೂಛತಾ ಹೆ ಭಾರತ ®️  [4 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು]; ಸೋನು ಸೂದ್ (ನಟ) ಕಿಂಗ್‌ಸ್ಟಾರ್  [2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು]; ಡಾ. ಸುಧಾಂಶು ತ್ರಿವೇದಿ ಅಭಿಮಾನಿಗಳ ಸಂಘ [2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು]; ಶಿಫುಜಿ [4 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು].

ಹಮ್ಲಾಗ್‌ ಲೇಖನದಲ್ಲಿ ಬಜರಂಗದಳದ ಸದಸ್ಯರೊಬ್ಬರು  ಲೋಕಮಂಚ್ ಟುಡೇಗೆ ನೀಡಿದ ಬೈಟ್ ಅನ್ನು ಪ್ರಸಾರ ಮಾಡಿದ್ದು, “ಅಜ್ಮೀರ್‌ನಿಂದ ಜೈಪುರಕ್ಕೆ ಹೋಗುತ್ತಿದ್ದ ರೈಲಿನ ಬೋಗಿ ಸಂಖ್ಯೆ B1 (13, 14) ನಿಂದ ಪುರುಷ ಮತ್ತು ಮಹಿಳೆಯನ್ನು ಬಂಧಿಸಿ ಸರ್ಕಾರಿ ರೈಲ್ವೆ ಪೊಲೀಸ್ ಫೋರ್ಸ್ (GRPF) ನಿಲ್ದಾಣಕ್ಕೆ ಕರೆದುಕೊಂಡು ಹೋದೆವು. ಆ ವ್ಯಕ್ತಿ 30 ವರ್ಷದವನಾಗಿದ್ದು ಮೋವ್ ಮೂಲದವನು ಎಂದು ಹೇಳಿದ್ದಾರೆ, ಆ ವ್ಯಕ್ತಿ ಒಂದು ಮಗುವಿನ ತಂದೆ” ಎಂದು ಆ ಗುಂಪು ಆಪಾದಿಸಿದೆ.

ಹಿಂದಿ ಸುದ್ದಿವಾಹಿನಿಗಳಾದ ಅಮರ್ ಉಜಾಲಾ ಮತ್ತು ದೈನಿಕ್ ಭಾಸ್ಕರ್ ಕೂಡ ಇದೇ ರೀತಿಯ ವರದಿಗಳನ್ನು ಪ್ರಕಟಿಸಿದ್ದಾರೆ. ಯುವತಿಯೊಬ್ಬಳು ಮುಸ್ಲಿಂ ಪುರುಷನೊಂದಿಗೆ ಪ್ರಯಾಣಿಸುತ್ತಿದ್ದಳು, ಇಬ್ಬರೂ ವಿವಾಹಿತರು ಎಂದು ಅಮರ್ ಉಜಾಲಾ ಹೇಳಿದರೆ, ಆತಿಫ್ ಹಿಂದೂ ಮಹಿಳೆಯನ್ನು ಮದುವೆಯಾಗಲು ಅಜ್ಮೀರ್‌ಗೆ ಕರೆದೊಯ್ಯುತ್ತಿದ್ದಾನೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಎರಡೂ ವರದಿಗಳ ಪ್ರಕಾರ, ಪುರುಷ ಮತ್ತು ಮಹಿಳೆ ಮೊವ್‌ನಿಂದ ಬಂದವರು.

ಟ್ವಿಟರ್ ಬಳಕೆದಾರರು @Saffron_Smoke ವಿವಾದದ ಸುದೀರ್ಘ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಬಜರಂಗದಳದ ಸದಸ್ಯರೊಬ್ಬರು ರೈಲು ಕಂಪಾರ್ಟ್‌ಮೆಂಟ್‌ನೊಳಗೆ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಪುರುಷ ಮತ್ತು ಮಹಿಳೆಯನ್ನು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿರುವ ಜಿಆರ್‌ಪಿಎಫ್ ನಿಲ್ದಾಣಕ್ಕೆ ಕರೆದೊಯ್ಯೂತ್ತಿರುವುದು ಕಾಣುತ್ತದೆ. ಈ ಬಗ್ಗೆ  ಬಜರಂಗದಳದ ಸದಸ್ಯರು ಲೋಕಮಂಚ್ ಟುಡೇಗೆ ನೀಡಿದ ಹೇಳಿಕೆಯನ್ನು ನೋಡಬಹುದು. ಈ ವೀಡಿಯೊ 50,000 ಕ್ಕೂ ಹೆಚ್ಚು ವೀವ್ಸ್ ಆಗಿದೆ.

Do Politics ನ ಸಹ-ಸಂಸ್ಥಾಪಕ ಮತ್ತು ಮಾಜಿ Op India ಹಿಂದಿ ಸಂಪಾದಕ ಅಜೀತ್ ಭಾರ್ತಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ

ಫ್ಯಾಕ್ಟ್ ಚೆಕ್:

ಲವ್ ಜಿಹಾದ್ ನಂತಹ ಘಟನೆಯಂತಹ ಸುದ್ದಿ ಬಂದಾಗಲೆಲ್ಲಾ ಆ ಘಟನೆಗೆ ಸಂಬಂಧಿಸಿದ ಯುವಕ ಯುವತಿಯರು ಸಾಕಷ್ಟು ಬಾರಿ ಸಂತ್ರಸ್ತರಾಗಿರುತ್ತಾರೆ. ಹಾಗಾಗಿ ಈ ಘಟನೆಯನ್ನು ಫ್ಯಾಕ್ಟ್ ಚೆಕ್ ಮಾಡುವ ಮೂಲಕ ಘಟನೆಯ ವಾಸ್ತವವನ್ನು ತಿಳಿಯುವ ಪ್ರಯತ್ನ ಮಾಡಲಾಗಿದೆ.

ಲವ್ ಜಿಹಾದ್ ಎಂದು ಹೇಳಲಾಗುತ್ತಿರುವ  ಘಟನೆಯಲ್ಲಿ “ಪುರುಷ ಮತ್ತು ಮಹಿಳೆ ಇಬ್ಬರು ಪರಸ್ಪರ ಸ್ನೇಹಿತರು ಮತ್ತು ಪುರುಷ ಮತ್ತು ಮಹಿಳೆ ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದಾರೆ [ಪರಸ್ಪರ ಅಲ್ಲ]. ಅವರು ಇಂದೋರ್‌ನಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದರು, ಆಗ ರೈಲಿನೊಳಗೆ ಏಕಾಏಕಿ ನುಗ್ಗಿದ ಬಜರಂಗದಳದ ಸದಸ್ಯರು ಲವ್ ಜಿಹಾದ್ ಆರೋಪ ಹೊರಿಸಿ ಯುವಕನನ್ನು ವಶಕ್ಕೆ ಪಡೆದು ಆಧಾರ ರಹಿತವಾಗಿ ಆರೋಪಿಸಿ ಆತನನ್ನು ರೈಲಿನಿಂದ ಹೊರಗೆಳೆದು ರೈಲ್ವೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ನಂತರ ಯುವತಿ ಬಜರಂಗದಳದ ಸದಸ್ಯರನ್ನು ಪ್ರಶ್ನೆ ಮಾಡಲು ಮುಂದಾಗುತ್ತಾಳೆ. ಆದರೂ ಅವರು ಕೇಳುವುದಿಲ್ಲ. ನಂತರ ರೈಲ್ವೆ ಅಧಿಕಾರಿಗಳ ಮಧ್ಯ ಪ್ರವೇಶದಿಂದಾಗಿ ಎರಡೂ ಕಟುಂಬದವರೂ ಪರಸ್ಪರ ಪರಿಚಿತರು ಎಂದು ತಿಳಿದು ಬಂದಿದೆ. ಈ ಘಟನೆ ಜನವರಿ 14 ರಂದು ನಡೆದಿದ್ದು ಇದರಲ್ಲಿ ಯಾವುದೇ ‘ಲವ್ ಜಿಹಾದ್’ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ.  ಈ ಘಟನೆ ಬಳಿಕ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ. ಸಂತ್ರಸ್ತರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ರೈಲು ಅಧಿಕಾರಿ ಮಹಾಜನ್ ಹೇಳಿದ್ದಾರೆ.

ಜಿಆರ್‌ಪಿಯ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಗುಪ್ತಾ ಅವರು ಮಾಹಿತಿ ನೀಡಿದ್ದು, ಘಟನೆಯು ‘ಲವ್ ಜಿಹಾದ್’ಗೆ ಸಂಬಂಧಿಸಿಲ್ಲ ಎಂದು ದೃಢಪಡಿಸಿದ್ದಾರೆ ಮತ್ತು ಅವರ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಸಂತ್ರಸ್ತರಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಹಂಚಿಕೊಳ್ಳುಲು ನಿರಾಕರಿಸಿದ್ದಾರೆ.

YouTube ನಲ್ಲಿ ಕೀವರ್ಡ್ ಸರ್ಚ್ ಮೂಲಕ  ಲೈವ್ ಹಿಂದೂಸ್ತಾನ್ ವರದಿಯನ್ನು ಪತ್ತೆಮಾಡಲಾಗಿದೆ. 1:20 ಕ್ಕೆ, ಮಹಿಳೆ ಪೊಲೀಸ್ ಠಾಣೆಯೊಳಗೆ ಹೇಳುವುದನ್ನು ಕೇಳಬಹುದು, “ನಿಮ್ಮ ತಪ್ಪು ತಿಳುವಳಿಕೆ ನನ್ನ ಇಡೀ ಜೀವನವನ್ನು ಹಾಳು ಮಾಡಿದೆ ಎಂದು ನಿಮಗೆ ಅರ್ಥವಾಗಿದೆಯೇ? ನೀವು ವೀಡಿಯೊಗಳನ್ನು ಮಾಡುತ್ತಿದ್ದೀರಿ ಮತ್ತು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದೀರಿ, ನೀವು ನಮ್ಮನ್ನು ಕೇಳಬೇಕಿತ್ತು. ನಾನು ವಯಸ್ಕಳಾಗಿದ್ದೇನೆ, ಯಾವುದು ಸರಿ ಮತ್ತು ತಪ್ಪು ಎಂದು ನನಗೆ ತಿಳಿದಿದೆ. ವೃತ್ತಿಪರವಾಗಿ, ನಾನು ಶಿಕ್ಷಕಿ, ನಾನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಿಸುತ್ತೇನೆ ಎಂದಿದ್ದಾರೆ, ನಿಮಗೆ ಈ ರೀತಿ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಮಹಿಳೆ ಪ್ರಶ್ನಿಸಿದಾಗ ಭಜರಂಗದಳದ ಕಾರ್ಯಕರ್ತರು ತಬ್ಬಿಬ್ಬಾಗಿದ್ದಾರೆ. ನಾವು ನಿಮಗೆ ಏನು ತೊಂದರೆ ಕೊಟ್ಟಿಲ್ಲ ಎಂದು ಬಜರಂಗದಳದ ವ್ಯಕ್ತಿಯೊಬ್ಬ ಹೇಳುವುದನ್ನು ನೋಡಬಹುದಾಗಿದೆ.

ಮಧ್ಯ ಪ್ರದೇಶದ ವರದಿಗಾರರ ಸಹಾಯದಿಂದ, ಆಲ್ಟ್ ನ್ಯೂಸ್ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಬಜರಂಗದಳದ ಸದಸ್ಯರನ್ನು ಗುರುತಿಸಲು ಸಾಧ್ಯವಾಯಿತು. ಅವನ ಹೆಸರು ಪಿಂಟು ಕೌಶಲ್ (ಕೆಳಗಿನ ಚಿತ್ರದಲ್ಲಿ ಮಧ್ಯದಲ್ಲಿರುವ ವ್ಯಕ್ತಿ).

ಆದ್ದರಿಂದ ಈ ಘಟನೆಯು ಯಾವದೇ “ಲವ್ ಜಿಹಾದ್” ನಂತಹ ಪ್ರಕರಣನಲ್ಲ. ಬದಲಿಗೆ ಬಜರಂಗದಳದ ಸದಸ್ಯರ ತಪ್ಪು ಗ್ರಹಿಕೆಯಿಂದ ಉಂಟಾದ ಗದ್ದಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಇದಕ್ಕೆ ಕೋಮು ಬಣ್ಣ ಹಚ್ಚಿ,  ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಉದ್ದೇಶದಿಂದ ಇದನ್ನು ಲವ್ ಜಿಹಾದ್ ಎಂದು ದಾಂಧಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಹಲ್ಲೆಗೊಳಗಾದ ಪುರುಷ ಮತ್ತು ಮಹಿಳೆ ಒಳ್ಳೆಯ ಸ್ನೇಹಿತರು. ಇದನ್ನು ತಿಳಿಯದ ಮತಾಂಧರು ಇದನ್ನು ಲವ್ ಜಿಹಾದ್ ಎಂಬ ತಪ್ಪು ಮಾಹಿತಿಯೊಂದಿಗೆ ವೈರಲ್ ಮಾಡುತ್ತಿದ್ದಾರೆ.

ಕೃಪೆ:ಆಲ್ಟ್ ನ್ಯೂಸ್


ಇದನ್ನು ಓದಿರಿ: Fact Check: ಅಖಿಲೇಶ್ ಯಾದವ್ ಹೇಳಿದ್ದು ಯುಪಿಗೆ ಯೋಗ್ಯ ಸರ್ಕಾರ ಬೇಕು ಎಂದು ಹೊರತು ಯೋಗಿ ಸರ್ಕಾರ ಅಂತಲ್ಲ…


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.