Fact check: ನಾನು ಹಿಂದೆ RSS ಮತ್ತು BJP ಯಲ್ಲಿ ಇದ್ದೆ ಎಂದು ಕೇಜ್ರಿವಾಲ್ ಹೇಳಿದ್ದಾರೆಯೇ?

ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಡುವೆ, ಆಮ್ ಆದ್ಮಿ ಪಕ್ಷವೂ ಸಹ ಸ್ಪರ್ಧಿಯಾಗಿದ್ದು, ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವೀಡಿಯೊ ಕ್ಲಿಪ್ ಒಂದು ವೈರಲ್ ಆಗಿದೆ. ಏಳು ಸೆಕೆಂಡುಗಳ ಕ್ಲಿಪ್‌ನಲ್ಲಿ ಕೇಜ್ರಿವಾಲ್ ಅವರು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಅನೇಕರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೊದಲ್ಲಿ, “ನಾವು ಜನಸಂಘದ ಕುಟುಂಬದಿಂದ ಬಂದವರು. ನಾವು ಜೀವನದುದ್ದಕ್ಕೂ ಬಿಜೆಪಿ ಬೆಂಬಲಿಗರು. ಜನಸಂಘಕ್ಕೆ ಸೇರಿದ ನನ್ನ ತಂದೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದರು ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಹೇಳುವುದನ್ನು ಕೇಳಬಹುದು.

ಕೇಜ್ರಿವಾಲ್ ಅವರು ನಾನು BJP-RSS ವ್ಯಕ್ತಿ ಎಂದು ಒಪ್ಪಿಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಟ್ವಿಟರ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದಾದ್ರಾ ಮತ್ತು ನಗರ್ ಹವೇಲಿ ಕಾಂಗ್ರೆಸ್ ಸೇವಾದಳದ ಅಧಿಕೃತ ಹ್ಯಾಂಡಲ್ ಕೂಡ ಈ ವೀಡಿಯೊವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ, “ನಾವು  ಹಿಂದೆಯೇ ಇದನ್ನು ಹೇಳುತ್ತಿದ್ದೆವು ಈಗ ಅವರೇ ಒಪ್ಪಿಕೊಂಡಿದ್ದಾರೆ, ಅವರು ಸದಾ ಬಿಜೆಪಿ ಮತ್ತು ಆರ್‌ಎಸ್‌ಎಸ್ ನ ಸಖ್ಯದಲ್ಲಿ ಇದ್ದವರು ಎಂದು ಪ್ರತಿಪಾದಿಸಿ ವಿಡಿಯೊ ಹಂಚಿಕೊಂಡಿದ್ದಾರೆ.

ಹಾಗಿದ್ದರೆ AAP ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಾವು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಲ್ಲಿ ಇದ್ದೆ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ಕಾಂಗ್ರೆಸ್ ಪಕ್ಷದ  ಟ್ವಿಟರ್ ಅಕೌಂಟ್ ಗಳಲ್ಲಿ ಹರಿದಾಡುತ್ತಿರುವ ಅರವಿಂದ್ ಕೇಜ್ರಿವಾಲ್ ಅವರ ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲಿ ಅರವಿಂದ್ ಕೇಜ್ರಿವಾಲ್ ಮಾತನಾಡುವಾಗ ಬೇರೆ ವ್ಯಕ್ತಿಯ ಕುರಿತು ಮಾತನಾಡಿರುವುದು ತಿಳಿಯುತ್ತದೆ, ಅವರು ಅನ್ಯ ವ್ಯಕ್ತಿಯ ಬಗ್ಗೆ ಮಾತನಾಡುವ ಹೇಳಿಕೆಯನ್ನು ಎಡಿಟ್ ಮಾಡುವ ಮೂಲಕ ಅದು ಅರವಿಂದ್ ಕೇಜ್ರಿವಾಲ್ ಸ್ವತಃ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿರುವಂತೆ ವಿಡಿಯೊವನ್ನು ಎಡಿಟ್ ಮಾಡಲಾಗಿದೆ.

ಈ ವೀಡಿಯೊದಲ್ಲಿ NDTV 24X7 ನ ಲೋಗೋ ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದ,  ಸಂಬಂಧಿತ ಕೀವರ್ಡ್‌ಗಳೊಂದಿಗೆ ಮೂಲ ವಿಡಿಯೊವನ್ನು ಸರ್ಚ್ ಮಾಡಿದಾಗ ನೈಜ ವಿಡಿಯೊ ಲಭ್ಯವಾಗಿದೆ.

ಫೆಬ್ರವರಿ 4, 2020 ರಂದು ಯೂಟ್ಯೂಬ್‌ನಲ್ಲಿ NDTV ಅಪ್‌ಲೋಡ್ ಮಾಡಿದ 4.11 ನಿಮಿಷಳ ವಿಡಿಯೊ ಲಭ್ಯವಾಗಿದೆ. 2020 ರಲ್ಲಿ ದೆಹಲಿ ವಿಧಾನ ಸಭಾ ಚುನಾವಣೆ ನಡೆಯುತ್ತಿದ್ದ ವೇಳೆ ಅರವಿಂದ್ ಕೇಜ್ರಿವಾಲ್ ತಾವು ಚುನಾವಣಾ ಪ್ರಚಾರ ಮಾಡುವ ವೇಳೆ, ಶಾಹೀನಾ ಬಾಗ್‌ನಲ್ಲಿ CAA ಮತ್ತು NRC ವಿರೋಧಿಸಿ ನಡೆದ ಪ್ರತಿಭಟನೆ ಕುರಿತು ಮಾತನಾಡಿ ಮತಯಾಚನೆ ಮಾಡುವಾಗ BJPಯ ನಾಯಕರನ್ನು ಟೀಕಿಸುತ್ತ ಮಾತನಾಡಿರುವುದು NDTV ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿದೆ.

ಒಂದು ನಿವಿಷ 39 ಸೆಕೆಂಡ್‌ಗಳ ಅವಧಿಯ ವಿಡಿಯೊದಲ್ಲಿ ಕೇಜ್ರಿವಾಲ್ ಹಿಂದಿಯಲ್ಲಿ ಮಾತನಾಡಿದ್ದು, “ನಾನು ಬಿಜೆಪಿ ವ್ಯಕ್ತಿ ಮಾತನಾಡುತ್ತಿದ್ದ ಚಾನಲ್ ಅನ್ನು ನೋಡುತ್ತಿದ್ದೆ. ಅವರು ‘ನಾವು ಜನಸಂಘದ ಕುಟುಂಬದಿಂದ ಬಂದವರು. ನಾವು ಜೀವನದುದ್ದಕ್ಕೂ ಬಿಜೆಪಿ ಬೆಂಬಲಿಗರು. ಜನಸಂಘಕ್ಕೆ ಸೇರಿದ ನನ್ನ ತಂದೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದರು. ಆದರೆ ಈ ಬಾರಿ ನಾನು ಕೇಜ್ರಿವಾಲ್‌ಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳುವ ವಿಡಿಯೊ ಲಭ್ಯವಾಗಿದೆ.

ವೈರಲ್ ಕ್ಲಿಪ್‌ನಲ್ಲಿ, ಕೇಜ್ರಿವಾಲ್ ಅವರ ಮಾತುಗಳ ಮೊದಲ ಮತ್ತು ಕೊನೆಯ ಭಾಗವನ್ನು ಎಡಿಟ್ ಮಾಡಲಾಗಿದೆ. ಈ ಸಂದರ್ಶನದ ಕುರಿತು NDTV ಸುದ್ದಿ ಮಾಡಿತ್ತು, ಆ ವರದಿಯೂ ಲಭ್ಯವಾಗಿದೆ. ಹೀಗಾಗಿ, ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ-ಆರ್‌ಎಸ್‌ಎಸ್‌ನವರು ಎಂದು ಹೇಳಿರುವ ವೈರಲ್ ವೀಡಿಯೊವನ್ನು ಎಡಿಟ್ ಮಾಡುವ ಮೂಲಕ ತಪ್ಪಾಗಿ ಹಂಚಿಕೊಳ್ಳಲಾಗಿದೆ.

  ಕೃಪೆ: India Today


ಇದನ್ನು ಓದಿರಿ: Fact check: ಎಚ್ಚರ: ಖಾತೆಯೇ ಇಲ್ಲದ “ಮುಸ್ಕಾನ್ ಖಾನ್” ಹೆಸರಿನಲ್ಲಿ ಸೃಷ್ಟಿಯಾಗಿವೆ ಹಲವು ನಕಲಿ ಟ್ವಿಟರ್ ಖಾತೆಗಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights