Fact check: ಫೆಬ್ರವರಿ 14 “ಪ್ರೇಮಿಗಳ ದಿನ” ಆಕಾಶಕಾಯದಲ್ಲಿ ಕಂಡ ವಿಚಿತ್ರ ದೃಶ್ಯಾವಳಿಗಳ ಹಿಂದಿನ ರಹಸ್ಯವೇನು?

ಫೆಬ್ರವರಿ  14 ಪ್ರೇಮಿಗಳ ದಿನ, ಈ ದಿನಕ್ಕಾಗಿಯೇ  ಅಸಂಖ್ಯ ಯುವಕ, ಯುವತಿಯರು ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳಲ್ಲು ಕಾಯುತ್ತಿರುತ್ತಾರೆ. ಫೆಬ್ರವರಿ 14 ಕೆಲವರ ಪಾಲಿಗೆ ಜೀವನೋತ್ಸಾಹವನ್ನು ಹೆಚ್ಚಿಸಿದರೆ, ಹಲವರು ತಮ್ಮ ಪ್ರೀತಿಯಿಚ್ಚೆಯನ್ನು ಹೇಳಿಕೊಳ್ಳಲಾಗದೆ ಪರಿತಪಿಸುತ್ತಾರೆ.  ಆದರೆ ಫೆಬ್ರವರಿ14 ರಂದು ಬೆಳ್ಳಂ ಬೆಳಗ್ಗೆಯೇ ಆಕಾಶಕಾಯದಲ್ಲಿ ಒಂದು ವಿಚಿತ್ರವಾದ  ದೃಶ್ಯಾವಳಿಗಳು ಕಾಣಿಸಿಕೊಂಡಿದ್ದು ಜನ ಆತಂಕಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಟಿವಿ9 ಕನ್ನಡ ವಾಹಿನಿಯ ವೆಬ್ ಪೋರ್ಟಲ್ ಕೂಡ ಈ ದೃಶ್ಯಗಳ ಬಗ್ಗೆ ಸುದ್ದಿಯನ್ನು ಮಾಡಿದೆ. ಅದು ಕೊಟ್ಟಿರುವ ಟೈಟಲ್  ಹೀಗಿದೆ “ಪ್ರೇಮಿಗಳ ದಿನ ಇದೇನು ವಿಚಿತ್ರ ಲೀಲೆ! ಮಾಗ ಮಾಸದ ಸೋಮವಾರ ಆಗಸದಲ್ಲಿ ಹಾವಿನ ಆಕಾರದ ದೃಶ್ಯಾವಳಿ” ಎಂದು ಸುದ್ದಿ ಮಾಡಿದೆ.

ಪ್ರೇಮಿಗಳ ದಿನ ಇದೇನು ವಿಚಿತ್ರ ಲೀಲೆ! ಮಾಗ ಮಾಸದ ಸೋಮವಾರ ಆಗಸದಲ್ಲಿ ಹಾವಿನ ಆಕಾರದ ದೃಶ್ಯಾವಳಿ

“ಇಂದು ಬೆಳ್ಳಂ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೂರ್ವ ದಿಕ್ಕಿನಲ್ಲಿ ಆಕಾಶದಲ್ಲಿ ವಿಚಿತ್ರ ದೃಶ್ಯಗಳು ಕಂಡು ಬಂದಿವೆ. ಲೈಟ್ ಮತ್ತು ಹಾವಿನ ಆಕಾರದ ದೃಶ್ಯಗಳ ದರ್ಶನವಾಗಿದೆ. ಚಿಕ್ಕಬಳ್ಳಾಪುರ, ಗುಡಿಬಂಡೆ, ಚಿಂತಾಮಣಿ ಸೇರಿದಂತೆ ವಿವಿಧೆಡೆ ದೃಶ್ಯ ಕಾಣಸಿಕ್ಕಿದೆ. ಇದೇ ಸಮಯದಲ್ಲಿ ಬಂದ ವಿಮಾನ ಹಾವಿನ ಆಕಾರ ಕಂಡು ಬೆಳಕು ಹಾಕಿಕೊಂಡು ಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಕಾಶದಲ್ಲಿ ವಿಚಿತ್ರವಾಗಿ ವಿವಿಧ ಆಕಾರಗಳನ್ನು ಒಳಗೊಂಡ ಚಿತ್ರ ಮೂಡಿದೆ. ಹಾವಿನ ರೂಪದಲ್ಲಿ ಕಾಣಿಸಿಕೊಂಡ ದೃಶ್ಯದಿಂದ ಜನರು ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ” ಎಂದು TV9 ಕನ್ನಡ ವರದಿ ಮಾಡಿದೆ.

ಏಷಿಯಾನೆಟ್ ಸುವರ್ಣ ನ್ಯೂಸ್ ತಮ್ಮ ಡಿಜಿಟಲ್ ಮೀಡಿಯಾದಲ್ಲಿ ಪ್ರಸಾರ ಮಾಡಿರುವ ವಿಡಿಯೋ

ಹಾಗಿದ್ದರೆ ಜನರ ಆತಂಕಕ್ಕೆ ಕಾರಣವಾಗಿದ್ದ ಆಕಾಶದಲ್ಲಿ ಕಾಣಿಸಿಕೊಂಡ ದೃಶ್ಯಾವಳಿಗಳ ಹಿಂದಿರುವ ಸತ್ಯವೇನು?

ಫ್ಯಾಕ್ಟ್‌ಚೆಕ್:

ಈ ವೈರಲ್ ಫೋಟೋ ಮತ್ತು ಸುದ್ದಿಯ ಲಿಂಕ್ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಇದು ಇಸ್ರೋ ದಿಂದ ಉಡಾವಣೆಯಾದ ಉಪಗ್ರಹದ ಚಿತ್ರಗಳು ಎಂದು ತಿಳಿದಿ ಬಂದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ವರ್ಷದ ಮೊದಲ ಮಿಷನ್ ಆರಂಭಿಸಿದೆ. ಫೆಬ್ರವರಿ 14  ಸೋಮವಾರ (ಅಂದರೆ ನಿನ್ನೆ) ಬೆಳಗ್ಗೆ 5.59ಕ್ಕೆ PSLV-C52 ಹೆಸರಿನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ  ಕೇಂದ್ರದಿಂದ ಇದನ್ನು ಉಡಾವಣೆ ಮಾಡಲಾಗಿದೆ.

ಈ ಉಪಗ್ರಹವು ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಷನ್​ಗಳಿಗಾಗಿ ಕೆಲಸ ಮಾಡಲಿದೆ. ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಫೋಟೋಗಳನ್ನು ಭೂಮಿಗೆ ರವಾನಿಸುವಂತೆ ಈ ಉಪಗ್ರಹವನ್ನು ವಿನ್ಯಾಸ ಮಾಡಲಾಗಿದೆ.

ಈ ಉಪಗ್ರಹ ಉಡಾವಣೆಯಾದ ಬಳಿಕ ಆಕಾಶಕಾಯದಲ್ಲಿ ಅದರ ಬೆಳಕು ಬೇರೆ ಬೇರೆ ಆಕಾರದಲ್ಲಿ ಕಾಣುವುದು ಸಹಜ. ಹಾಗೆಯೇ ನಿನ್ನೆ  ಶ್ರೀಹರಿಕೋಟಾದ ಕೇಂದ್ರದಲ್ಲಿ ಉಪಗ್ರಹ ಉಡಾವಣೆಯು ಬೆಳಗಿನ ಜಾವ ನಡೆದ ಕಾರಣಕ್ಕೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಈ ದೃಶ್ಯಗಳು  ಹಾವು ಮತ್ತು ಬೇರೆ ಬೇರೆ ಆಕಾರಗಳಲ್ಲಿ ಕಂಡುಬಂದಿದೆ. ಇದನ್ನೆ ಕೆಲವರು ಫೋಟೋ ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದರ ಜೊತೆಗೆ ವಿಚಿತ್ರ. ವಿಸ್ಮಯ ಎಂಬಂತಹ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ.

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಕಂಡು ಬಂದ ಫೋಟೋಗಳು

ಇದರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ “ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ  ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿ ವಿಶ್ವ ಕೀರ್ತಿ” ಯವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದ್ದು ಆಕಾಶಕಾಯದಲ್ಲಿ ಕಂಡು ಬಂದ ದೃಶ್ಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುಳ್ಳು ಸುದ್ದಿಗಳನ್ನು ತಳ್ಳಿಹಾಕಿದ್ದಾರೆ. ಹವಾಮಾನ ಸಂಬಂಧಿತ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿದ್ದು, ಅದು ಬೆಳಗಿನ ಜಾವ 5 ರಿಂದ 5.30ರ ಸುಮಾರಿಗೆ ಉಡಾವಣೆ ಮಾಡಿರುವುದರಿಂದ ಆ ರೀತಿ ದೃಶ್ಯಗಳು ಕಂಡುಬಂದಿವೆ ಎಂದಿದ್ದಾರೆ.

ಕೆಲವು ಸಲ ಉಪಗ್ರಹ ಉಡಾವಣೆಗಳು ಹಗಲು ವೇಳೆ ನಡೆಯುತ್ತವೆ ಆಗ ಬೆಳಕಿನ ಕಾರಣಕ್ಕೆ ಈ ದೃಶ್ಯಗಳು ಗೋಚರಿಸುವುದಿಲ್ಲ. ಆದರೆ ಇದು ನಸುಕಿನಲ್ಲಿ ನಡೆದಿದ್ದರಿಂದ ಕೋನ್ ಅಥವ ಹಾವಿನ ಆಕಾರದಲ್ಲಿ ಕಂಡುಬಂದಿದೆ. ಸೂರ್ಯ ಉದಯಿಸುವ ಮುನ್ನ ಫೋಟೋ ತೆಗೆದುಕೊಂಡಿರುವುದರಿಂದ ಈ ರೀತಿ ಕಾಣಿಸುತ್ತಿವೆ, ಬೆಂಗಳೂರಿನಿಂದಲೂ ಈ ದೃಶ್ಯಾವಳಿಗಳು ಕಂಡುಬಂದಿದ್ದು ಆ ಸಮಯದಲ್ಲಿ ತೆಗೆದಿರುವ ಫೋಟೋಗಳಲ್ಲಿ ಈ ರೀತಿಯ ದೃಶ್ಯಾವಳಿಗಳು ಕಂಡುಬಂದಿವೆ ಎಂದು ವಿಜ್ಞಾನಿಗಳಾದ ವಿಶ್ವ ಕೀರ್ತಿರವರು Ensuddi.com ಗೆ ತಿಳಿಸಿದ್ದಾರೆ.

ಡೆಕ್ಕನ್ ಹೆರಾಲ್ಡ್ ಕೂಡ ಇದರ ಬಗ್ಗೆ ವರದಿ ಮಾಡಿದ್ದು ಅದನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಕೇಂದ್ರದಿಂದ  ಮಾಡಿದ PSLV ಉಪಗ್ರಹದ  ಉಡಾವಣೆಯ ನಂತರದ ದೃಶ್ಯಾವಳಿಗಳನ್ನು ಫೋಟೋ ತೆಗೆದು, ಫೆಬ್ರವರಿ14 ಪ್ರೇಮಿಗಳ ದಿನ, ಮೇಘ ಮಾಸ, ಪ್ರಾಕೃತಿಕ ವೈಚಿತ್ರಗಳು ಎಂದು ತಪ್ಪಾದ ಸುದ್ದಿ ಮಾಡುವ ಮೂಲಕ ಕೆಲವು ಮಾಧ್ಯಮಗಳು ಜನಸಾಮಾನ್ಯರನ್ನು ತಪ್ಪುದಾರಿಗೆಳೆಯುತ್ತಿವೆ.


ಇದನ್ನು ಓದಿರಿ: Fact check: ಆಪ್‌ ಟೀಕಿಸಿದ್ದಾರೆಂದು ಪತ್ರಕರ್ತ ರವೀಶ್ ಕುಮಾರ್ ಹೆಸರಿನಲ್ಲಿ ನಕಲಿ ಟ್ವೀಟ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights