ಫ್ಯಾಕ್ಟ್‌ಚೆಕ್ : ದೂರದರ್ಶನದ ಲೋಗೋ ಬಗ್ಗೆ ಸುಳ್ಳು ಸುದ್ದಿ ಹಂಚುತ್ತಿರುವ ‘ರಾಷ್ಟ್ರಧರ್ಮ’ ಎಂಬ ಬಲಪಂಥೀಯ ಮಾಧ್ಯಮ

ಕಾಂಗ್ರೆಸ್ ಪಕ್ಷವು ದೇಶದ ಮುಸ್ಲಿಮರ ಓಲೈಕೆಗಾಗಿ ಭಾರತದ ಇತಿಹಾಸವನ್ನು ತಿರುಚಿದ್ದಾರೆ ಎಂದು ಹೇಳಿಕೊಳ್ಳುವ ‘ರಾಷ್ಟ್ರಧರ್ಮ’ದ ಲೋಗೊ ಇರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 2.36 ನಿಮಿಷದ ಆ ವಿಡಿಯೊದಲ್ಲಿ ಪ್ರಮುಖವಾಗಿ ನಾಲ್ಕು ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ವಿಡಿಯೊದಲ್ಲಿ ಮಾಡಿರುವ ಆರೋಪಕ್ಕೆ ಯಾವುದಾದರೂ ಆಧಾರಗಳನ್ನು ನೀಡಲಾಗಿದೆಯೆ ಎಂದು ಪರಿಶೀಲಿಸೋಣ.

 

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿರುವ ವಿಡಿಯೊ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊ ಬಲಪಂಥೀಯತೆ ಮತ್ತು ಹಿಂದುತ್ವವನ್ನು ಪ್ರತಿಪಾದಿಸುವ  ರಾಷ್ಟ್ರಧರ್ಮ  ಎಂಬ ಫೇಸ್‌ಬುಕ್ ಪೇಜ್ ನಲ್ಲಿ ಪ್ರಥಮವಾಗಿ ಹರಿಯಬಿಡಲಾಗಿದ್ದು, ಅದನ್ನು ಹಲವರು ಶೇರ್ ಕೂಡ ಮಾಡಿದ್ದಾರೆ.

ಆರೋಪ ನಂ 1

ಸರ್ಕಾರದ ಅಧೀನದಲ್ಲಿರುವ ದೂರದರ್ಶನ ಟಿವಿ ಚಾನಲ್‌ನಲ್ಲಿ ಒಂದು ಲೋಗೋ ಇದೆ ಅದರ ಕೆಳಗೆ ಸತ್ಯಂ, ಶಿವಂ, ಸುಂದರಂ ಎಂದು ಬರೆಯಲಾಗಿತ್ತು. ಆದರೆ ಮುಸ್ಲಿಂ ಆದೇಶದ ಮೇರೆಗೆ ಅದನ್ನು ಕಾಂಗ್ರೆಸ್  ತೆಗೆದು ಹಾಕಿತ್ತು ಎಂಬ ವಿಷಯವನ್ನು  ಹೇಳಲಾಗಿದೆ.

                   

ವಾಸ್ತವವಾಗಿ ದೂರದರ್ಶನ ಲಾಂಛನದ ಕೆಳಗೆ ಇರುವ ಸತ್ಯಂ, ಶಿವಂ ಸುಂದರಂ ಎಂಬ ವಾಖ್ಯಗಳನ್ನು ಕಾಂಗ್ರೆಸ್ ತೆಗೆದಿದೆ ಎಂಬುದು ಸುಳ್ಳು.  ಡಿಡಿ ದೂರದರ್ಶನದ ಲಾಂಛನದ ಕೆಳಗೆ  ಸತ್ಯಂ,ಶಿವಂ, ಸುಂದರಂ ಎಂಬ ವಾಕ್ಯಗಳು ಈಗಲೂ ಇವೆ. ಪ್ರಸಾರ ಭಾರತಿಯ ಅಧಿಕೃತ ವೆಬ್ ಸೈಟ್ ನಲ್ಲಿ ಡಿಡಿ ದೂರದರ್ಶನದ ಲಾಂಛನವನ್ನು ಇಲ್ಲಿ ನೋಡಬಹುದು.

ಕಾಂಗ್ರೆಸ್ ನ ಅಧಿಕಾರವಧಿಯಲ್ಲಿ ಯಾವ ಸಂದರ್ಭದಲ್ಲಿಯೂ ಮುಸ್ಲಿಮರು ಸತ್ಯಂ ಶಿವಂ ಸುಂದರಂ ಪದಗಳನ್ನು ತೆಗೆಯಿರಿ ಎಂದು ಎಲ್ಲಿಯೂ ಒತ್ತಡ ಹಾಕುವುದಾಗಲಿ ಅಥವಾ ಮುಸ್ಲಿಂ ಓಲೈಕೆಗಾಗಿ ಆ ವಾಕ್ಯಗಳನ್ನು ತೆಗೆಯುವ ಯಾವ ಪ್ರಸ್ತಾಪವೂ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ನಡೆದಿಲ್ಲ. ಹಾಗಾಗಿ ಇದು ರಾಷ್ಟ್ರಧರ್ಮ ತನಗೆ ಬೇಕಾದ ಹಾಗೆ ಯಾವುದೇ ಆಧಾರಗಳಿಲ್ಲದೆ ಸುಳ್ಳು ಹೇಳಿದೆ ಎಂಬುದು ಖಚಿತವಾಗಿದೆ.

ಆರೋಪ ನಂ 2

ನ್ಯಾಯಾಲಯದಲ್ಲಿ ಭಗವತ್ ಗೀತೆ ಮೇಲೆ ಕೈ ಇಟ್ಟು ಪ್ರಮಾಣ ಮಾಡಬೇಕಿತ್ತು, ಆದರೆ ಮುಸ್ಲಿಮರ ಒತ್ತಾಯದಿಂದ ಅದನ್ನು ತೆಗೆಯಲಾಯ್ತು ಎಂದು ಹೇಳಿದೆ? ಇದನ್ನು ವಿವರವಾಗಿ ಪರಿಶೀಲಿಸೋಣ

ಹಿಂದೆ  ನ್ಯಾಯಾಲಯಗಳಲ್ಲಿ ಪ್ರಮಾಣ ಮಾಡಿಸುವಾಗ ಭಗವತ್ ಗೀತೆ, ಖುರಾನ್ ಮತ್ತು ಬೈಬಲ್‌ಗಳ  ಮೇಲೆ ಪ್ರಮಾಣ ಮಾಡುವ ಆಯ್ಕೆ ಇತ್ತು (2013). ನಂತರ ದಿನಗಳಲ್ಲಿ ಆರೋಪಿ, ಅಥವಾ ಆಪಾದಿತ ತನ್ನಿಷ್ಟದ ಪುಸ್ತಕದ ಮೇಲೆ ಮತ್ತು ತಾನು ನಂಬುವ ದೇವರ ಮೇಲೆ ಪ್ರಮಾಣ ಮಾಡಲು ಅವಕಾಶವನ್ನು ನ್ಯಾಯಾಲಯ ಒದಗಿಸಿ ಕೊಟ್ಟಿದೆ.

ಅಷ್ಟಕ್ಕು ಯಾವುದೇ ಸರ್ಕಾರ ಅಥವ ಪಕ್ಷ ನ್ಯಾಯಾಂಗದ ತೀರ್ಮಾನಗಳಿಗೆ, ಆಂತರಿಕ ವಿಷಯಗಳಿಗೆ ಅಸ್ತಕ್ಷೇಪ ಮಾಡುವಂತಿಲ್ಲ, ಇಲ್ಲಿ ಏನೆ ತೀರ್ಮಾನಗಳು, ಆದೇಶಗಳು ನಡೆದರೂ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್  ಅಡಿಯಲ್ಲಿ ನಡೆಯುತ್ತವೆ. ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಕಾಯಾಂಗದ ಹಸ್ತಕ್ಷೇಪವಾಗಲಿ, ಆದೇಶಗಳಾಗಲಿ ಅನ್ವಯಿಸುವುದಿಲ್ಲ. ಹಾಗಾಗಿ ರಾಷ್ಟ್ರಧರ್ಮ ಮಾಡಿರುವ ವಿಡಿಯೊದಲ್ಲಿ ಸುಳ್ಳನ್ನು ಹೇಳಲಾಗಿದೆ ಎಂದು ಖಾತ್ರಿಯಾಗಿದೆ.

ಸುಳ್ಳು ನಂ 3

ಭಾರತದಲ್ಲಿ ಚಲಾವಣೆ ಇರುವ ನೋಟಗಳ ಮೇಲೆ ಪ್ರಾರಂಭದಲ್ಲಿ ಅಶೋಕ ಸ್ತಂಭ ಇತ್ತು ಆದರೆ ಮುಸ್ಲಿಂರನ್ನು ಓಲೈಸುವ ಉದ್ದೇಶದಿಂದ ಅಶೋಕ ಸ್ತಂಭದ ಬದಲಿಗೆ ಗಾಂಧೀಜ ಚಿತ್ರವನ್ನು ಹಾಕಿದೆ, ಇದು ದೇಶದ್ರೋಹಿ ಪಕ್ಷ ಎಂದು ಹೇಳಿಕೆಯನ್ನು ವಿಡಿಯೋದಲ್ಲಿ ಹೇಳಲಾಗಿದೆ. ಇದನ್ನು ಪರಿಶೀಲಿಸೋಣ.

ಭಾರತದ ಕರೆನ್ಸಿಯ ಇತಿಹಾಸ

ಅದು ಸರಿಯಾಗಿ ಅರ್ಧ ಶತಮಾನದ ಹಿಂದೆ. ಅಂದು ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ 100ನೇ ಜಯಂತಿ. ಅವರ ಸ್ಮರಣಾರ್ಥ 100 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಮೊದಲ ಬಾರಿಗೆ ಅವರ ಭಾವಚಿತ್ರವನ್ನು ಮುದ್ರಿಸಲಾಯಿತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಭಾರತೀಯ ಕರೆನ್ಸಿಗಳಲ್ಲಿ ಬ್ರಿಟಿಷ್ ರಾಜನ ಚಿತ್ರದ ಜಾಗಕ್ಕೆ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ತರಬೇಕೆಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ಬಂತು. ಅದು ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ಹಿಡಿಯಿತು. ಇದೇ ಹೊತ್ತಿಗೆ ಗಾಂಧಿಯವರ ಭಾವಚಿತ್ರದ ಬದಲಿಗೆ ಬ್ರಿಟಿಷ್ ದೊರೆಯ ಭಾವಚಿತ್ರದ ಸ್ಥಳದಲ್ಲಿ ಸಾರನಾಥದ ಸಿಂಹದ ರಾಜಧಾನಿ ಚಿತ್ರವನ್ನು ಮುದ್ರಿಸಲಾಯಿತು.

ಭಾರತೀಯ ರಿಸರ್ವ್ ಬ್ಯಾಂಕ್ 1969ರಲ್ಲಿ 100 ರೂಪಾಯಿ ನೋಟಿನಲ್ಲಿ ಸೇವಾಗ್ರಾಮ ಆಶ್ರಮದ ಹಿಂದೆ ಮಹಾತ್ಮಾ ಗಾಂಧಿಯವರು ಕುಳಿತಿರುವ ಚಿತ್ರವನ್ನು ಮುದ್ರಿಸಿತು. ನಂತರ ಭಾರತೀಯ ಕರೆನ್ಸಿಗಳಲ್ಲಿ ನಿಗದಿತವಾಗಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಮುದ್ರಿಸಲು ಆರಂಭಿಸಿದ್ದು 1987ರ ನಂತರ. 500 ರೂಪಾಯಿ ಸರಣಿ ನೋಟುಗಳಲ್ಲಿ ಗಾಂಧೀಜಿಯ ನಗುವ ಮುಖದ ಚಿತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿತು. ನಂತರ ಬೇರೆ ಬೇರೆ ಮುಖ ಬೆಲೆಯ ನೋಟುಗಳಲ್ಲಿ ಕೂಡ ಗಾಂಧೀಜಿ ಚಿತ್ರ ಮುದ್ರಣವಾಗಲು ಪ್ರಾರಂಭವಾಯಿತು.

ಗಾಂಧೀಜಿಯ ಫೋಟೋವನ್ನು ನೋಟುಗಳಲ್ಲಿ ಮುದ್ರಿಸುವ ಮೊದಲು ಹಲವು ವಿನ್ಯಾಸ ಮತ್ತು ಚಿತ್ರಗಳಲ್ಲಿ ಭಾರತೀಯ ಕರೆನ್ಸಿಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದವು. 1949ರಲ್ಲಿ ಅಂದಿನ ಸರ್ಕಾರ 1 ರೂಪಾಯಿ ನೋಟುಗಳಲ್ಲಿ ಅಶೋಕ ಸ್ತಂಭವನ್ನು ಮುದ್ರಿಸಿತ್ತು. 1953ರಲ್ಲಿ ಹೊಸ ನೋಟುಗಳಲ್ಲಿ ಹಿಂದಿ ಭಾಷೆಗೆ ವಿಶೇಷ ಪ್ರಾಧಾನ್ಯತೆ ಇತ್ತು.

ಸಾವಿರ ಮುಖಬೆಲೆಯ ನೋಟುಗಳಲ್ಲಿ ತಂಜಾವೂರು ದೇವಾಲಯ ವಿಶೇಷತೆಗಳು, 5 ಸಾವಿರ ರೂಪಾಯಿ ನೋಟುಗಳಲ್ಲಿ ಗೇಟ್ ವೇ ಆಫ್ ಇಂಡಿಯಾ ಮತ್ತು 10 ಸಾವಿರ ರೂ ನೋಟಿನಲ್ಲಿ ಲಯನ್ ಕ್ಯಾಪಿಟಲ್ ಆಫ್ ಅಶೋಕ, ಅಶೋಕ ಸ್ತಂಭಗಳನ್ನು ಮುದ್ರಿಸಲಾಗುತ್ತಿತ್ತು.  ಇನ್ನು ಅಧಿಕ ಮುಖಬೆಲೆಯ ನೋಟುಗಳ ಚಲಾವಣೆಯನ್ನು 1978ರಲ್ಲಿ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಯಿತು.

1980ರ ದಶಕದಲ್ಲಿ ನೋಟುಗಳ ಮುದ್ರಣದಲ್ಲಿ ಸಂಪೂರ್ಣ ಬದಲಾವಣೆಯಾಯಿತು. ದೇವಸ್ಥಾನಗಳ ವಿಶಿಷ್ಟತೆ ಬದಲಿಗೆ ನೋಟುಗಳಲ್ಲಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳನ್ನು ಮುದ್ರಿಸಲಾಯಿತು. ಆರ್ಯಭಟ, ಒಲಿ ರಿಗ್, ಕೊನಾರ್ಕ್ ವೀಲ್ ಮತ್ತು ನವಿಲುಗಳ ಚಿತ್ರವನ್ನು ಮುದ್ರಿಸಲಾಗುತ್ತಿತ್ತು.

ಇಷ್ಟೆಲ್ಲ ಇತಿಹಾಸ ಇರುವ ಭಾರತೀಯ ನೋಟುಗಳಿಗೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿರುವ ಈ ರಾಷ್ಟ್ರಧರ್ಮ ಎಂಬ ಬಲಪಂಥೀಯ ಪ್ರತಿಪಾದಕರಿಗೆ ಒಂದು ಪ್ರಶ್ನೆ,  2016ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣ ಮಾಡಿದಾಗ 10, 20, 50, 100, 200, 500 ಮತ್ತು 2000 ರೂ ಮುಖಬೆಲೆಯ ನೋಟುಗಳನ್ನು ಹೊರ ತಂದಾಗ ಯಾಕೆ ಗಾಂಧಿ ಚಿತ್ರವನ್ನು ತೆಗೆಯಲಿಲ್ಲ, ಅದು ಮುಸ್ಲಿಂ ಓಲೈಕೆ ಎಂದಾದರೆ ನರೇಂದ್ರ ಮೋದಿ ಸರ್ಕಾರ ಅದನ್ನು ಬದಲಾಯಿಸಬಹುದಿತ್ತಲ್ಲವೆ? ಮಹಾತ್ಮ ಗಾಂಧಿ ಅವರು ದೇಶ ಪ್ರೇಮಿ ಅಲ್ಲವೇ, ಹಾಗಿದ್ದರೆ ಗಾಂಧಿಯನ್ನು ಕೊಂದ ನಾಥೂರಾಮ್ ಗೂಡ್ಸೆ ಇವರಿಗೆ ಆದರ್ಶವಾ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ ?

ಆರೋಪ ನಂ 4

ಮುಸಲ್ಮಾನ್ ದೊರೆಗಳನ್ನು ವೈಭವಿಕರಿಸಿ, ಹಿಂದೂ ರಾಜರ ಕೊಡುಗೆಯನ್ನು ನಗಣ್ಯ ಮಾಡಲಾಗಿದೆ ಎಂದು ಸುಳ್ಳಿನ ಮಳೆ ಸುರಿಸಿದ್ದು ಆಧಾರ ರಹಿತ ವಾದ ಮಾಡವ ಪ್ರಶ್ನೆಯನ್ನು ವಿಡಿಯೋದಲ್ಲಿ ಹೇಳಲಾಗಿದೆ.

ವಾಸ್ತವವಾಗಿ ಈ ರಾಜರ ಆಳ್ವಿಕೆಯ ಕಾಲದಲ್ಲಿ ದೇಶ ಎಂಬ ಪರಿಕಲ್ಪನೆಯಾಗಲಿ, ಗಡಿಗಳ ಬಗ್ಗೆ ಸ್ಪಷ್ಟತೆಗಳಾಗಲಿ ಇರಲಿಲ್ಲ ಆದರೂ ಮುಸ್ಲಿಂ ರಾಜರು ತಮ್ಮ ಆಳ್ವಿಕೆಯ ಕಾಲಾವಧಿಯಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ. ಅದನ್ನು ಸರಿಯಾಗಿ ಗ್ರಹಿಸದ ಈ ಮತಾಂಧರು ಸುಳ್ಳಿನ ಸರಣಿ ಹೇಳುವ ಮೂಲಕ ಜನರನ್ನು ತಪ್ಪು ದಾರಿಗೆಳೆಯುವ ಜೊತೆಗೆ, ಕೋಮು ಅಶಾಂತಿಯನ್ನು ಸೃಷ್ಟಿಸಿ ಸಮಾಜವನ್ನು ಹೊಡೆಯುವ ಕೆಲಸ ಮಾಡಲು ಮುಂದಾಗಿದ್ದಾರೆ.

ಈ ಇತಿಹಾಸವನ್ನು ತಿಳಿಯದೇ ರಾಷ್ಟ್ರಧರ್ಮದ ಮತಾಂಧರು ಮುಸ್ಲಿಮರ ವಿರುದ್ದ ದ್ಷೇಷ ಕಾರುವ, ಸೌಹಾರ್ದತೆಗೆ ಧಕ್ಕೆ ತರುವ ಸುಳ್ಳುಗಳೇ ತುಂಬಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಇವರ ಬಗ್ಗೆ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights