Fact check: ಯುಪಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೋಲಿಗೆ ಮನನೊಂದು ಯುವಕರು ನೇಣಿಗೆ ಶರಣಾದರು ಎಂಬ ಸುದ್ದಿ ನಿಜವೆ?

2022 ರ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೋಲಿನಿಂದ ಬೇಸತ್ತ ಪ್ರಯಾಗ್‌ರಾಜ್‌ನಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳುವ ಕೊಲಾಜ್ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ನಲ್ಲಿ ಹೇಳುವಂತೆ ಈ ಮೂವರು ಸಹೋದರರು ನಿರಾಶೆಗೊಂಡ ನಿರುದ್ಯೋಗಿ ವಿದ್ಯಾರ್ಥಿಗಳು ಎಂದು ಉಲ್ಲೇಖಿಸಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವೆ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ಚಿತ್ರ 1:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋದ ಗೂಗಲ್ ರಿವರ್ಸ್ ಇಮೇಜ್  ಸರ್ಚ್ ಮಾಡಲಾಗಿದ್ದು, ಅದೇ ಫೋಟೋವನ್ನು ‘ಸಂಜೀವಿನಿ ಟುಡೆ’ ಸುದ್ದಿ ವೆಬ್‌ಸೈಟ್ 24 ನವೆಂಬರ್ 2020 ರಂದು ಪ್ರಕಟಿಸಿರುವುದು ಕಂಡುಬಂದಿದೆ. ರಣಧೀರ್ ಕುಮಾರ್ ಎಂಬ ಯುವಕ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಈ ವರದಿ ಹೇಳುತ್ತದೆ. ಹಣಕಾಸಿನ ತೊಂದರೆಯಿಂದಾಗಿ ಯುವಕ ರಣಧೀರ್  ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಜಾರ್ಖಂಡ್ ರಾಮಗಢ  ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಹಾಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಪೋಟೊಗೂ 2022 ರ ಯುಪಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಹಳೆಯ ಘಟನೆಯ ಫೋಟೊವನ್ನು ಉತ್ತರ ಪ್ರದೇಶದ ಚುನಾವಣೆಗೆ ಸಂಬಂಧ ಕಲ್ಪಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಚಿತ್ರ 2:

ಗೂಗಲ್  ರಿವರ್ಸ್ ಇಮೇಜ್ ಸರ್ಚ್‌ನಲ್ಲಿ, ‘ತಾಜಾ ಸಮಾಚಾರ್’ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋ ಕಂಡುಬಂದಿದೆ. 40 ವರ್ಷದ ರಾಜೇಶ್ ಸಿಂಗ್ ರಜಪೂತ್ ಮಧ್ಯಪ್ರದೇಶದ ಬೇಗಂಗಂಜ್‌ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈ ಲೇಖನ ವರದಿ ಮಾಡಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಫೋಟೊಗೂ ಉತ್ತರ ಪ್ರದೇಶದ ಚುನಾವಣೆಯ ಸಮಾಜವಾದಿ ಪಕ್ಷದ ಸೋಲಿಗೂ ಸಂಬಂಧವಿಲ್ಲ ಎಂದು ದೃಢಪಟ್ಟಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಇತರ ಫೋಟೋದ ವಿವರಗಳು ಲಭ್ಯವಾಗಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಯುವಕರ ಆತ್ಮಹತ್ಯೆಯ ಕೊಲಾಜ್ ಫೋಟೋಗಳು ವೈರಲ್ ಆಗಿವೆ. ಈ ಪೋಸ್ಟ್‌ ಬಗ್ಗೆ ಸಂಬಂಧಿಸಿದಂತೆ ಪ್ರಯಾಗ್ರಾಜ್ ಪೊಲೀಸರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ಸೋಲಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಂತಹ  ಯಾವುದೇ ಘಟನೆ ನಡೆದಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋಗಳಿಗೂ 2022ರ ಯುಪಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಯಾಗರಾಜ್ ಪೊಲೀಸರು ಖಚಿತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಯುಪಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೋಲಿನ ನಂತರ ಮೂವರು ಸಹೋದರರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯು ಸುಳ್ಳಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಜೊಂಡಿರುವ ಕೊಲಾಜ್ ಫೋಟೋಗಳಿಗೂ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸೋಲಿಗೂ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: Fact check: ವಿದ್ಯಾರ್ಥಿನಿ ‘ವೈಶಾಲಿ ಯಾದವ್’ ನಕಲಿ ವಿಡಿಯೊ ಮಾಡಿದಕ್ಕೆ ಬಂಧಿಸಲಾಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights