ಫ್ಯಾಕ್ಟ್‌ಚೆಕ್: ಕಾಶ್ಮೀರಿ ಪಂಡಿತರನ್ನು ಕೇಜ್ರಿವಾಲ್ ಅಣಕಿಸಿದ್ದಾರೆ ಎಂದು ಸುಳ್ಳು ಹರಡಿದ ಬಿಜೆಪಿ ನಾಯಕರು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಧಾನ ಸಭೆ ಅಧಿವೇಶನದ ಸಂದರ್ಭದಲ್ಲಿ ಮಾತನಾಡಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುವ ಮೂಲಕ  BJP ನಾಯಕರನ್ನು ಕೆರಳುವಂತೆ ಮಾಡಿತ್ತು. “ದ ಕಾಶ್ಮೀರ್ ಫೈಲ್ಸ್” ಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯ್ತಿ ನೀಡಿರುವ ಕ್ರಮವನ್ನು ಲೇವಡಿ ಮಾಡಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್  ಇದರ ಬದಲು ಸಿನಿಮಾವನ್ನು ನೇರವಾಗಿ ಯೂಟ್ಯೂಬ್‌ಗೆ ಹಾಕಬಹುದಿತ್ತಲ್ಲವೆ? ಆಗ ಇಡೀ ದೇಶದ ಜನರು ಉಚಿತವಾಗಿ ನೋಡುತ್ತಿದ್ದರು ಎಂದಿದ್ದರು. ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ತ್ರಿಪುರಾ, ಗೋವಾ, ಹರ್ಯಾಣ, ಗುಜರಾತ್, ಉತ್ತರಾಖಂಡ ಹಾಗೂ ಬಿಜೆಪಿ ಆಡಳಿತವಿರುವ ಬಹುತೇಕ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿತ್ತು ಎಂಬುದು ಗಮನಾರ್ಹ.

ಅರವಿಂದ್ ಕೇಜ್ರಿವಾಲ್ ಅವರು ಮಾಡಿದ ವ್ಯಂಗ್ಯಭರಿತ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆಕ್ರೂಶಗೊಂಡ ಬಿಜೆಪಿ ನಾಯಕರು ಕೇಜ್ರಿವಾಲ್ ಅವರ ಮೇಲೆ ಮುಗಿ ಬಿದ್ದಿದ್ದಾರೆ.  ಅರವಿಂದ್ ಕೇಜ್ರಿವಾಲ್ ” ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ಹಿಂಸಾ ಕೃತ್ಯ ಸುಳ್ಳು ಎಂದಿದಾರೆ ” ಎನ್ನುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ 15 ಸೆಕೆಂಡುಗಳ ವಿಡಿಯೋವನ್ನು  ಹಂಚಿಕೊಂಡಿದ್ದಾರೆ. ಅದರಲ್ಲಿ ಅಮಾನವೀಯ ಕ್ರೂರ ಮತ್ತು ವಿಕೃತ ಮನಸ್ಸು ಮಾತ್ರ ಕಾಶ್ಮೀರಿ ಹಿಂದೂಗಳ ನರಮೇಧವನ್ನು ನೋಡಿ ನಗಬಹುದು ಮತ್ತು ನಿರಾಕರಿಸಬಹುದು, ಆದರೆ ನೆನಪಿಡಿ, 32 ವರ್ಷಗಳ ಕಾಲ ತಮ್ಮ ದೇಶದಲ್ಲಿ ನಿರಾಶ್ರಿತರಾಗಿ ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿರುವ ಹಿಂದೂ ಸಮುದಾಯದ ಗಾಯಗಳನ್ನು ನೋಡಿ ನಗಬೇಡಿ ಎಂಬ ಒಕ್ಕಣೆಯೊಂದಿಗೆ ಹಂಚಿಕೊಂಡಿದ್ದಾರೆ.

 

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕೂಡ ಟ್ವೀಟ್ ಮಾಡಿದ್ದು “ಗಾಯಗೊಂಡ ಮಕ್ಕಳ ಚಿತ್ರಗಳೊಂದಿಗೆ ಸ್ಕ್ರೀನ್‌ಗ್ರಾಬ್ ಅನ್ನು ಪೋಸ್ಟ್ ಮಾಡಿದ್ದಾರೆ.  “ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡವನ್ನು ಸುಳ್ಳು ಎಂದು ಕರೆಯುವುದು ನಿಮ್ಮ ತಾಯಿಯ ಚಾರಿತ್ರ್ಯವನ್ನು ಪ್ರಶ್ನಿಸುವುದಕ್ಕೆ ಸಮಾನವಾಗಿದೆ. ನಾಚಿಕೆಯಾಗುತ್ತಿದೆ ಕೇಜ್ರಿವಾಲ್. ಭಯೋತ್ಪಾದಕರನ್ನು ರಕ್ಷಿಸುವ ಮೂಲಕ ಕೇಜ್ರಿವಾಲ್ ದೇಶದ ಪ್ರತಿಯೊಬ್ಬ ಹುತಾತ್ಮ ಮತ್ತು ಸೇನಾ ಸಿಬ್ಬಂದಿಯನ್ನು ನಿಂದಿಸಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ. (ಆರ್ಕೈವ್ ಮಾಡಿದ ಟ್ವೀಟ್)

ಬಿಜೆಪಿ ವಕ್ತಾರ ಗೌರವ್ ಗೋಯೆಲ್ ಟ್ವೀಟ್ ಮಾಡಿ, “ಕಾಶ್ಮೀರಿ ಪಂಡಿತರನ್ನು ಕೇಜ್ರಿವಾಲ್ ಅವರು ಗೇಲಿ ಮಾಡುವುದನ್ನು ನಿಲ್ಲಿಸಿ. ಸ್ವಲ್ಪ ನಾಚಿಕೆಪಡಬೇಕು ”  ಎಂದಿದ್ದಾರೆ (ಆರ್ಕೈವ್ ಮಾಡಿದ ಟ್ವೀಟ್)

ನ್ಯೂಸ್ 18 ಹಿಂದಿ ಸುದ್ದಿವಾಹಿನಿಯ ವ್ಯವಸ್ಥಾಪಕ ಸಂಪಾದಕ ಅಮಿಶ್ ದೇವಗನ್, ‘ದಿ ಕಾಶ್ಮೀರ್ ಫೈಲ್ಸ್’ ನಕಲಿ ಎಂದು ಕರೆಯುವುದು ಕಾಶ್ಮೀರಿ ಪಂಡಿತರು ಎದುರಿಸುತ್ತಿರುವ ದೌರ್ಜನ್ಯವನ್ನು ನಿರಾಕರಿಸುತ್ತದೆ ಎಂದು ಊಹಿಸಿದ್ದಾರೆ ಎಂದು ಬರೆದಿದ್ದಾರೆ. ಅವರ ಟ್ವೀಟ್ 12,000 ಲೈಕ್‌ಗಳನ್ನು ಗಳಿಸಿದೆ. (ಆರ್ಕೈವ್ ಮಾಡಿದ ಟ್ವೀಟ್)

ಅರವಿಂದ್ ಕೇಜ್ರಿವಾಲ್ ಅವರು ಕಾಶ್ಮೀರಿ ಪಂಡಿತರ ಬಗ್ಗೆ ಮತ್ತು ಅವರ ಮೇಲೆ ಆಗಿರುವ ದೌರ್ಜನ್ಯದ ಬಗ್ಗೆ ತಪ್ಪಾಗಿ ಮಾತನಾಡಿದಲ್ಲದೆ, ಅವರ ಮೇಲೆ ಹಿಂಸೆಯೇ ನಡೆದಿಲ್ಲ, ದಿ ಕಾಶ್ಮೀರ್ ಫೈಲ್ಸ್‌ ಚಿತ್ರದಲ್ಲಿ ಹೇಳಿರುವುದೆಲ್ಲ ಸುಳ್ಳು ಎಂದಿದ್ದಾರೆ ಎನ್ನುವಂತೆ ಬಿಜೆಪಿ ಸದಸ್ಯರು ತಮ್ಮ ಟ್ವಿಟರ್ ಅಕೌಂಟ್ ಮೂಲಕ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ, ಕೇಜ್ರಿವಾಲ್ ಬಗ್ಗೆ ಮಾಡಿರುವ ಟ್ವೀಟ್‌ಗಳ ಸತ್ಯಾಸತ್ಯಗಳನ್ನು ಪರಿಶೀಲಿಸೋಣ..

ಫ್ಯಾಕ್ಟ್‌ಚೆಕ್:

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಂಪೂರ್ಣ ವಿಡಿಯೋ ಆಪ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ. 20 ನಿಮಿಷಗಳ ಭಾಷಣದಲ್ಲಿ ಅವರು ಮುಂಬರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಬಗ್ಗೆ ಮಾತನಾಡುತ್ತಾರೆ. ವಿಡಿಯೋದಲ್ಲಿ ಎಲ್ಲಿಯೂ ಕೇಜ್ರಿವಾಲ್ 1990ರ ಕಾಶ್ಮೀರ ಹಿಂಸಾಚಾರವನ್ನು ಅಣಕಿಸುವುದಾಗಲಿ, ಸುಳ್ಳು ಎಂದಾಗಲಿ ಹೇಳಿಲ್ಲ.

ಅಮಿತ್ ಮಾಳವೀಯ ಮತ್ತು ಕಪಿಲ್ ಮಿಶ್ರಾ ಇಬ್ಬರೂ ಕೇಜ್ರಿವಾಲ್ ಮತ್ತು ಎಎಪಿ ಸದಸ್ಯರು ಕಾಶ್ಮೀರಿ ಪಂಡಿತರ ದುಸ್ಥಿತಿಯನ್ನು ಲೇವಡಿ ಮಾಡಿದ್ದಾರೆ ಎಂಬಂತೆ ಅವರ ಭಾಷಣವನ್ನು ತಪ್ಪಾಗಿ ನಿರೂಪಿಸಿದ್ದಾರೆ ಎಂಬುದನ್ನು ಗಮನಿಸಬೇಕು.

https://www.youtube.com/watch?v=B6uraTYEgRE

ಅಮಿತ್ ಮಾಳವಿಯಾ ಅವರದ್ದು ತಿರುಚಿದ ವಿಡಿಯೊ

ಮಾಲ್ವಿಯಾ ಅಪ್‌ಲೋಡ್ ಮಾಡಿದ 15 ಸೆಕೆಂಡುಗಳ ವಿಡಿಯೊದಲ್ಲಿ  00:03 ಮತ್ತು 00:08 ಸೆಕೆಂಡುಗಳಲ್ಲಿ ಎರಡು ಕಡೆ ಜಂಪ್ ಕಟ್‌ಗಳನ್ನು ಮಾಡಲಾಗಿರುವುದನ್ನು ಗಮನಿಸಬಹುದು, ಹಾಗಾಗಿ ವೀಡಿಯೊ ತಿರುಚಿರುವುದು ಸ್ಪಷ್ಟವಾಗುತ್ತದೆ.

16:22 ಕ್ಕೆ “ನಿಮಗೆ ಬೇಕಾದುದನ್ನು ಮಾಡಿ ಆದರೆ ಕನಿಷ್ಠ ಚಿತ್ರದ ಪ್ರಚಾರವನ್ನು ನಿಲ್ಲಿಸಿ. ನೀವು ಕೆಟ್ಟದಾಗಿ ಕಾಣುತ್ತೀರಿ. ಇದು ನಿಮಗೆ ಸರಿಹೊಂದುವುದಿಲ್ಲ, ನೀವು ಒಳ್ಳೆಯ ಜನರು. ನೀವು ಏನಾದರೂ ಮಹತ್ವದ ಕೆಲಸ ಮಾಡಲು ರಾಜಕೀಯಕ್ಕೆ ಸೇರಿದ್ದೀರಿ, ಆದರೆ ಈಗ ನೀವು ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದೀರಿ ಎಂದು ಹೇಳುತ್ತಾರೆ.

ಕಪಿಲ್ ಮಿಶ್ರಾ ಅವರದು ಎಡಿಟೆಡ್ ವಿಡಿಯೊ

ಮಿಶ್ರಾ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ  @BiharKaLall ಟ್ವಿಟರ್ ಹ್ಯಾಂಡಲ್‌ನ ವಾಟರ್‌ಮಾರ್ಕ್ ಇದ್ದು, ಇದೇ ಚಿತ್ರವನ್ನು ಈ ಹಿಂದೆ ಈ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿತ್ತು. ಈ ಸ್ಕ್ರೀನ್‌ಶಾಟ್ ಅನ್ನು ವೀಡಿಯೊದಲ್ಲಿ 8:56 ಮಾರ್ಕ್‌ನಿಂದ ತೆಗೆದುಕೊಳ್ಳಲಾಗಿದೆ. ಈ ವೇಳೆ ಸಿಎಂ ಕೇಜ್ರಿವಾಲ್, “ಅವರು ಬಿಜೆಪಿಯನ್ನು ಉಲ್ಲೇಖಿಸಿ ನಾವು ವಿಶ್ವದ ಅತಿದೊಡ್ಡ ಪಕ್ಷ ಎಂದು ಹೇಳುತ್ತಾರೆ. ನಾವು [ಎಎಪಿ] ವಿಶ್ವದ ಅತ್ಯಂತ ಚಿಕ್ಕ ಪಕ್ಷ, ಆದರೂ ನೀವು [ಬಿಜೆಪಿ] ಹೆದರಿದ್ದೀರಿ ಎನ್ನುತ್ತಾರೆ. ಆದರೆ ಕಾಶ್ಮೀರಿ ಪಂಡಿತರನ್ನು ಉಲ್ಲೇಖಿಸಿ ಅವರನ್ನು ಅಣಕಿಸುವುದಾಗಲಿ ಘಟನೆ ನಡೆದಿರುವುದು ಸುಳ್ಳೆಂದಾಗಲಿ ಹೇಳುವುದಿಲ್ಲ.

ಹಾಗಾದರೆ ಕೇಜ್ರಿವಾಲ್ ಹೇಳಿದ್ದೇನು?

“ಬಿಜೆಪಿ ನಾಯಕರು, ಶಾಸಕರು ಮತ್ತು ಸಂಸದರು ದೇಶದ ಗಲ್ಲಿ ಗಲ್ಲಿಗಳಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪೋಸ್ಟರ್ ಅಂಟಿಸುತ್ತಿದ್ದಾರೆ. ಜನ ನಿಮ್ಮನ್ನು ಆಯ್ಕೆ ಮಾಡಿರುವುದು ಪೋಸ್ಟರ್ ಅಂಟಿಸುವುದಕ್ಕಾಗಿಯೇ? ಇದೇನಾ ನಿಮ್ಮ ರಾಜಕೀಯ? ನೀವು ಮನೆಗೆ ಹೋದಾಗ ನಿಮ್ಮ ಮಕ್ಕಳು ಏನು ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದರೆ ಪೋಸ್ಟರ್ ಅಂಟಿಸುತ್ತೇವೆ ಎಂದು ಉತ್ತರಿಸುತ್ತೀರಾ” ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.

“ಕಾಶ್ಮೀರ್ ಫೈಲ್ಸ್‌ ಗೆ ತೆರಿಗೆ ವಿನಾಯಿತಿ ಕೇಳುತ್ತೀರಿ? ಜನ ಅದನ್ನು ನೋಡಬೇಕು ಅಂತ ನಿಮಗೆ ಇದ್ದರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಹೇಳಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿಸಿ. ಆಗ ಅದು ಪೂರ್ತಿ ಉಚಿತವಾಗಿ ಒಂದೇ ದಿನದಲ್ಲಿ ಇಡೀ ದೇಶದ ಜನ ನೋಡಬಹುದಲ್ಲವೇ, ಆಗ ತೆರಿಗೆ ವಿನಾಯಿತಿಯ ಪ್ರಶ್ನೆಗೆ ಉದ್ಭವಿಸುವುದಿಲ್ಲವಲ್ಲವೇ. ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಅವರು ಕೋಟಿ ಕೋಟಿ ದುಡ್ಡು ಮಾಡುತ್ತಿದ್ದಾಗ ನೀವು ಪೋಸ್ಟರ್ ಅಂಟಿಸುತ್ತಿದ್ದೀರಿ. ದಯವಿಟ್ಟು ಕಣ್ಣು ತೆರೆದು ನೋಡಿ ಅರ್ಥಮಾಡಿಕೊಳ್ಳಿ” ಎಂದು ಬಿಜೆಪಿ ಶಾಸಕರಲ್ಲಿ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

8 ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ನಂತರವೂ ಮಾನ್ಯ ನರೇಂದ್ರ ಮೋದಿಯವರು ಕಾಶ್ಮೀರಿ ಪಂಡಿತರಿಗಾಗಿ ಏನಾದರೂ ಮಾಡಿ ಎಂದು ವಿವೇಕ್ ಅಗ್ನಿಹೋತ್ರಿ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾರೆ ಎಂದರೆ ಅವರು 8 ವರ್ಷ ಏನೂ ಕೆಲಸ ಮಾಡಿಲ್ಲವೆಂಬುದು ಸ್ಪಷ್ಟವಾಗಿದೆ. ಹಾಗಾಗಿ ತಮ್ಮನ್ನು ಉಳಿಸಿ ಎಂದು ಅಗ್ನಿಹೋತ್ರಿ ಕಾಲಿಗೆ ಬೀಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಕೇಜ್ರಿವಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಸಿಎಂ ಕೇಜ್ರಿವಾಲ್ ಮಾಡಿದ ಭಾಷಣದ ವಿಡಿಯೊವನ್ನು ಹಲವು ಬಿಜೆಪಿ ಸದಸ್ಯರು ತಪ್ಪಾಗಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕೇಜ್ರಿವಾಲ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಸುಳ್ಳನ್ನು ಆಧರಿಸಿದೆ ಎಂದು ಟೀಕಿಸಿದ್ದಾರೆ. ಆದಾಗ್ಯೂ, ಅವರ ಭಾಷಣದಲ್ಲಿ ಎಲ್ಲಿಯೂ  ಕಾಶ್ಮೀರಿ ಪಂಡಿತರ ಮೇಲಾಗಿರುವ ದೌರ್ಜನ್ಯವನ್ನು ಅಣಕಿಸುವುದಾಗಲಿ, ಸುಳ್ಳು ಎಂದಾಗಲಿ ಹೇಳಿಲ್ಲ. ಹಾಗಾಗಿ ಬಿಜೆಪಿ ಸದಸ್ಯರು ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಾಡಲಾಗಿರುವ ಆರೋಪ ಸುಳ್ಳು.

ಕೃಪೆ: ಆಲ್ಟ್‌ನ್ಯೂಸ್


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಯೋಗಿ ಆದಿತ್ಯನಾಥ್ ತನ್ನ ಹಣೆಗೆ ಇಟ್ಟುಕೊಂಡ ತಿಲಕ ಹೋಲಿಕಾ ದಹನದ್ದು ಹೊರತು ಹುತಾತ್ಮ ಸೈನಿಕನ ಚಿತಾಭಸ್ಮವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights